ಬೆಂಗಳೂರು: ದೀಪಕ್ ರಾವ್ ಹತ್ಯೆ ಪ್ರಕರಣದಲ್ಲಿ ಮಂಗಳೂರು ಬಿಜೆಪಿ ಕಾರ್ಪೋರೇಟರ್ ಪಾತ್ರವಿದೆ ಎಂಬ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಮಾಡಿರುವ ಆರೋಪದ ಬಗ್ಗೆ ಸದ್ಯಕ್ಕೆ ಏನೂ ಹೇಳಲು ಸಾಧ್ಯವಿಲ್ಲ ಎಂದು ಗೃಹ ಸಚಿವ
ರಾಮಲಿಂಗಾರೆಡ್ಡಿ ತಿಳಿಸಿದ್ದಾರೆ.
ಸುದ್ದಿಗಾರರ ಜತೆ ಮಾತನಾಡಿದ ಅವರು, ಕುಮಾರಸ್ವಾಮಿ ಹೇಳಿಕೆಯನ್ನು ಗಮನಿಸಿದ್ದೇನೆ. ತನಿಖೆ ನಡೆಯುವಾಗ ಯಾವುದೇ ಆರೋಪ ಮಾಡುವುದು ಸರಿಯಲ್ಲ. ತನಿಖೆ ನಡೆಯುತ್ತಿದೆ. ಪೂರ್ಣ ಗೊಂಡ ನಂತರ ಸತ್ಯಾಂಶ ತಿಳಿಯಲಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರ ಪೈಕಿ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ. ಮತ್ತಿಬ್ಬರು ಆಸ್ಪತ್ರೆಯಲ್ಲಿದ್ದಾರೆ. ತನಿಖೆ ನಂತರವಷ್ಟೇ ಸ್ಪಷ್ಟತೆ ಸಿಗಲಿದೆ ಎಂದರು.
ಮಂಗಳೂರು ವಿಭಾಗದಲ್ಲಿ ಹಲವು ವರ್ಷಗಳಿಂದ ಸೇವೆ ಸಲ್ಲಿಸುತ್ತಿರುವ ಪೊಲೀಸ್ ಅಧಿಕಾರಿಗಳನ್ನು ಗುರುತಿಸಿ ಬೇರೆಡೆಗೆ ವರ್ಗಾಯಿಸುವ ಬಗ್ಗೆ ಪರಿಶೀಲನೆ ನಡೆಯುತ್ತಿದೆ. ಐಜಿಪಿಯಿಂದ ವರದಿ ಕೇಳಲಾಗಿದೆ ಎಂದು ಹೇಳಿದರು.
ಶೋಭಾ ರಾಜಕೀಯದಲ್ಲಿರಲು ನಾಲಾಯಕ್: ಗೃಹ ಸಚಿವರಿಗೆ ನಿಮ್ಹಾನ್ಸ್‌ನಲ್ಲಿ ಚಿಕಿತ್ಸೆ ಕೊಡಿಸಬೇಕೆಂಬ ಸಂಸದೆ ಶೋಭಾ ಕರಂದ್ಲಾಜೆ ಆರೋಪಕ್ಕೆ ತಿರುಗೇಟು ನೀಡಿದ ಸಚಿವ ರಾಮಲಿಂಗಾರೆಡ್ಡಿ, ಶೋಭಾ ಕರಂದ್ಲಾಜೆ ಅವರು ಬಂದಿರುವುದೇ ನಿಮ್ಹಾನ್ಸ್‌ನಿಂದ.ನಮ್ಮ ಮನೆ ಎದುರೇ ನಿಮ್ಹಾನ್ಸ್ ಇದೆ. ನನಗೆ ಅಲ್ಲಿಗೆ ಹೋಗುವ ಅಗತ್ಯವಿಲ್ಲ. ಇದೇ ರೀತಿ ಮಾತನಾಡುತ್ತಿದ್ದರೆ ಶೋಭಾ ಕರಂದ್ಲಾಜೆ ಅವರನ್ನು ಮತ್ತೆ ಅಲ್ಲಿಗೆ ಸೇರಿಸಬೇಕಾಗುತ್ತದೆ. ಸಾರ್ವಜನಿಕ ಜೀವನದಲ್ಲಿರುವವರು ಮಾತನಾಡುವಾಗ ಎಚ್ಚರಿಕೆ ವಹಿಸಬೇಕು. ಬಾಯಿಗೆ ಬಂದಂತೆ ಮಾತನಾಡಬಾರದು. ಅವರು ರಾಜಕೀಯದಲ್ಲಿ ಇರಲು ನಾಲಾಯಕ್ ಎಂದು ತಿಳಿಸಿದರು.
ಸವಣೂರು ಗ್ರಾಮ ಪಂಚಾಯಿತಿಯಲ್ಲಿ ಎಸ್‌ಡಿಪಿಐ ಬೆಂಬಲ ಪಡೆದು ಬಿಜೆಪಿ ಅಧಿಕಾರ ಹಿಡಿದಿರುವುದು ಸತ್ಯ. ಉಪಾಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದ ಎಸ್‌ಡಿಪಿಐ ಅಭ್ಯರ್ಥಿ ದೌರಾಬಿಗೆ ಬಿಜೆಪಿ ಬೆಂಬಲ ನೀಡಿದ್ದರಿಂದ 10 ಮತ ಬಂದಿತ್ತು ಎಂದು ಪತ್ರಿಕೆಯೊಂದರ ವರದಿಯನ್ನು ಸಚಿವರು ತೋರಿಸಿದರು.