Advertisement

“ಚಾಮಯ್ಯ ಮೇಷ್ಟ್ರು” ಮರೆಯಲಾರದ ನಟನಾಗಿದ್ದೇ ಒಂದು ಆಕಸ್ಮಿಕ ಘಟನೆ!

11:40 AM Jan 31, 2019 | Sharanya Alva |

ತಾನು ನಟನಾಗಬೇಕೆಂಬ ಕಲ್ಪನೆಯಾಗಲಿ, ಆಸೆಯಾಗಲಿ ಅವರಿಗೆ ಇದ್ದಿರಲಿಲ್ಲವಾಗಿತ್ತು. ಆದರೆ ಆಕಸ್ಮಿಕವಾಗಿ ಚಿತ್ರರಂಗಕ್ಕೆ ಕಾಲಿಟ್ಟ ಕರಗದಹಳ್ಳಿ ಸುಬ್ಬರಾಯಪ್ಪ ಅಶ್ವಥ್ ಎಂಬ ಕಲಾವಿದ ಪೋಷಕ ನಟರಾಗಿಯೇ ಕನ್ನಡ ಚಿತ್ರರಂಗದಲ್ಲಿ ಖ್ಯಾತರಾಗಿದ್ದರು. ಕೆಎಸ್ ಅಶ್ವಥ್ ಅವರು ಚಾಮಯ್ಯ ಮೇಷ್ಟ್ರಾರಾಗಿ ಜನಮಾನಸದಲ್ಲಿ ಇಂದಿಗೂ ನೆಲೆಸಿದ್ದಾರೆ. ಇದು ಅಶ್ವಥ್ ಅವರ ನಟನೆಗೆ ಸಾಕ್ಷಿಯಾಗಿದೆ.

Advertisement

ಇವರ ಹಿರಿಯರು ಮೂಲತಃ ಹಾಸನದ ಹೊಳೇನರಸಿಪುರದ ಕರಗದಹಳ್ಳಿಯವರು. ಹೀಗಾಗಿ ತಮ್ಮ ಹೆಸರಿನ ಮುಂದೆ ಕೆಎಸ್ ಎಂದು ಸೇರಿಸಿಕೊಂಡಿದ್ದರು. 1925ರಲ್ಲಿ ಮೈಸೂರಿನಲ್ಲಿ ಅಶ್ವಥ್ ನಾರಾಯಣ ಜನಿಸಿದ್ದರು. ಇಂಟರ್ ಮೀಡಿಯೇಟ್ ತನಕ ವಿದ್ಯಾಭ್ಯಾಸ ಪಡೆದಿದ್ದ ಅಶ್ವಥ್ ನಾರಾಯಣರು 1942ರಲ್ಲಿ ಕ್ವಿಟ್ ಇಂಡಿಯಾ ಚಳವಳಿಗೆ ಧುಮುಕಿದ್ದರು.

ಎರಡು ವರ್ಷಗಳ ತರುವಾಯ ಅಶ್ವಥ್ ನಾರಾಯಣರಿಗೆ ಫುಡ್ ಇನ್ಸ್ ಪೆಕ್ಟರ್ ಕೆಲಸ ಸಿಕ್ಕಿತ್ತು. ತದನಂತರ ಡೆಪ್ಯುಟಿ ಕಮೀಷನರ್ ಕಚೇರಿಯಲ್ಲ ಸ್ಟೆನೋ ಆಗಿ ಸುಮಾರು ಹತ್ತು ವರ್ಷಗಳ ಕಾಲ ಸರ್ಕಾರಿ ಸೇವೆಯಲ್ಲಿದ್ದರು.

ಅಶ್ವಥ್ ಆರಂಭದ ದಿನಗಳು ಸಿನಿಮಾ ಕಥೆಕ್ಕಿಂತ ಭಿನ್ನವಾಗಿಲ್ಲ!

Advertisement

ಹೌದು ಎರಡು ವರ್ಷದ ಪುಟ್ಟ ಮಗುವಾಗಿದ್ದಲೇ ಅಶ್ವಥ್ ತಾಯಿಯನ್ನು ಕಳೆದುಕೊಂಡಿದ್ದರು. 14 ವರ್ಷವಾಗುತ್ತಲೇ ತಂದೆ ಕೂಡಾ ಇಹಲೋಕ ತ್ಯಜಿಸಿದ್ದರು. ನಂತರ ಇವರು ಬೆಳೆದದ್ದು ಚಿಕ್ಕಮ್ಮ ತಿಪ್ಪಮ್ಮ ಬಳಿ. ಶಿಕ್ಷಕಿಯಾಗಿದ್ದ ತಿಪ್ಪಮ್ಮಗೆ  ತಿಂಗಳಿಗೆ ಬರುತ್ತಿದ್ದ ಸಂಬಳ ಕೇವಲ 17 ರೂಪಾಯಿ! ಅಲ್ಲಿಯೇ ಪ್ರಾಥಮಿಕ, ಪ್ರೌಢಶಿಕ್ಷಣ ಪಡೆದಿದ್ದರು. ಆ ಕಾಲದಲ್ಲಿಯೇ ಹಾಲಿವುಡ್ ಆ್ಯಕ್ಷನ್ ಸಿನಿಮಾ ನೋಡಬೇಕೆಂಬ ಹಂಬಲ ಇದ್ದಿತ್ತಂತೆ, ಆದರೆ ಸಿನಿಮಾ ನೋಡಲು ಹಣವಿಲ್ಲದೆ ಸುಮ್ಮನುಳಿಯುತ್ತಿದ್ದರಂತೆ ಅಶ್ವಥ್, ಕೊನೆಗೂ ಗೆಳೆಯನೊಬ್ಬ ಟಿಕೆಟ್ ತಂದು ಕೊಟ್ಟು ಸಿನಿಮಾ ತೋರಿಸಿದ್ದರಂತೆ.

ದುರಂತ ಎಂಬಂತೆ ಅಶ್ವಥ್ ಚಿಕ್ಕಮ್ಮ ತಿಪ್ಪಮ್ಮ ಸಾವನ್ನಪ್ಪಿದ ಪರಿಣಾಮ ವಿದ್ಯಾಭ್ಯಾಸಕ್ಕೆ ಗುಡ್ ಬೈ ಹೇಳಿ, ತನ್ನ ತಂಗಿ ಮನೆಗೆ ವಾಸ್ತವ್ಯ ಬದಲಾಯಿಸಿದ್ದರು. 18 ವರ್ಷದ ಬಳಿಕ ತನ್ನ ಬಾಲ್ಯದ ಗೆಳತಿ ಶಾರದಾಳನ್ನು ವಿವಾಹವಾಗಿದ್ದರು.

ನಟನಾಗಬೇಕೆಂಬ ಕನಸನ್ನೂ ಕಂಡವರಲ್ಲ!

ಆರಂಭದಲ್ಲಿ ಅಶ್ವಥ್ ನಾರಾಯಣ ಅವರು ಮೈಸೂರು ಆಲ್ ಇಂಡಿಯಾ ರೇಡಿಯೋ ನಿರ್ಮಾಣ ಮಾಡುತ್ತಿದ್ದ ನಾಟಕಗಳಲ್ಲಿ ಪಾತ್ರ ಮಾಡುತ್ತಿದ್ದರು. ಕೃಷ್ಣ ಚೈತನ್ಯ ನಾಟಕ ಸಭಾದಲ್ಲಿನ ಶಾಂತಿ ನಿವಾಸ, ಭಕ್ತ ವೀರ ಸೇರಿದಂತೆ ಪ್ರಮುಖ ನಾಟಕಗಳಲ್ಲಿ ಪಂಡರಿಭಾಯಿ ಜೊತೆ ಅಭಿನಯಿಸಿದ್ದರು. ಹೀಗೆ ಅಂದಿನ ಪ್ರಸಿದ್ಧ ರಂಗಭೂಮಿ ನಿರ್ದೇಶಕರಾದ ಎಎನ್ ಮೂರ್ತಿ ರಾವ್, ಪರ್ವತವಾಣಿ ಸೇರಿದಂತೆ ಹಲವು ಘಟಾನುಘಟಿಗಳ ಸ್ನೇಹದಿಂದಾಗಿ ಅಶ್ವಥ್ ನಾರಾಯಣರು ಪ್ರಮುಖ ನಾಟಕಗಳಲ್ಲಿಯೂ ನಟಿಸುವ ಅವಕಾಶ ದೊರಕಿತ್ತು. ಏತನ್ಮಧ್ಯೆ ಸಿನಿಮಾ ನಿರ್ದೇಶಕ ಕೆ.ಸುಬ್ರಹ್ಮಣ್ಯಂ ಅವರು ಅಶ್ವಥ್ ನಾರಾಯಣರ ನಟನೆಯನ್ನು ಕಂಡು ಮೆಚ್ಚಿ, ಶ್ಲಾಘಿಸಿದ್ದರು. ಅಷ್ಟೇ ಅಲ್ಲ ತಮ್ಮ ಸ್ತ್ರೀರತ್ನ(1955) ಸಿನಿಮಾಕ್ಕೆ ಹೀರೋ ಎಂದು ಆಯ್ಕೆ ಮಾಡಿಬಿಟ್ಟಿದ್ದರು! ಸಿನಿಮಾರಂಗಕ್ಕೆ ಬಂದಾಗ ಅಶ್ವಥ್ ಎಂಬ ಹೆಸರು ಮಾತ್ರ ಉಳಿದುಕೊಂಡು, ನಾರಾಯಣ ಕಳಚಿಕೊಂಡಿತ್ತು.!

ಅಂದಿನ ಕಾಲದಲ್ಲಿ ಇದ್ದ ಸರ್ಕಾರಿ ಕೆಲಸ ಬಿಟ್ಟು ಸಿನಿಮಾ ಸೇರುತ್ತೇನೆ ಎಂಬ ಮಗನ ನಿರ್ಧಾರಕ್ಕೆ ಮನೆಯಲ್ಲಿ ತೀವ್ರ ವಿರೋಧ ವ್ಯಕ್ತವಾಗಿತ್ತಂತೆ. ಸರ್ಕಾರಿ ಕೆಲಸ ಬಿಟ್ಟು, ಸಿನಿಮಾ ಸೇರಿ ಏನ್ ಮಾಡ್ತೀಯಾ ಎಂದು ದೊಡ್ಡ ರಂಪಾಟವೇ ನಡೆದಿತ್ತಂತೆ. ಅಂತೂ ಮನೆಯವರ ವಿರೋಧದ ನಡುವೆಯೂ ಅಶ್ವಥ್ ನಾರಾಯಣ ಸ್ತ್ರೀ ರತ್ನ ಸಿನಿಮಾದಲ್ಲಿ ಹೀರೋ ಆಗಿ ನಟಿಸಿದ್ದರು. ಸ್ತ್ರೀ ರತ್ನ ಸಿನಿಮಾದಲ್ಲಿ ಹೀರೋಯಿನ್ ಆಗಿ ನಟಿಸಿದ್ದವರು ಸಂಧ್ಯಾ. ಈಕೆ ತಮಿಳುನಾಡು ಮಾಜಿ ಮುಖ್ಯಮಂತ್ರಿ ದಿ.ಜಯಲಲಿತಾ ಅವರ ತಾಯಿ. ಈಸಿನಿಮಾದಲ್ಲಿ ನಟಿಸಿದ ಬಳಿಕ ಅಶ್ವಥ್ ಅವರು ಸಿನಿಮಾ ರಂಗದಲ್ಲಿ ಮುಂದುವರಿಯಲು ನಿರ್ಧರಿಸಿಬಿಟ್ಟಿದ್ದರು.

ಈಗಿನಂತೆ ತಿಂಗಳಿಗೆ ಹತ್ತಾರು ಸಿನಿಮಾ ನಿರ್ಮಾಣವಾದಂತೆ 50ರ ದಶಕದಲ್ಲಿ ಕನ್ನಡ ಸಿನಿಮಾ ನಿರ್ಮಾಣ ಮಂದಗತಿಯಲ್ಲಿತ್ತು. ಈ ವೇಳೆ ಅಶ್ವಥ್  ನಾಯಕ ನಟನಿಂದ ಪೋಷಕ ನಟನಾಗಿ ಅಭಿನಯಿಸಲು ನಿಶ್ಚಯಿಸಿದ್ದರು.

1960ರಲ್ಲಿ ತೆರೆ ಕಂಡಿದ್ದ ಕಿತ್ತೂರು ಚೆನ್ನಮ್ಮ ಸಿನಿಮಾದಲ್ಲಿ ಅಶ್ವಥ್ ಅವರು ಸ್ವಾಮೀಜಿ ಪಾತ್ರ ಮಾಡಿದ್ದರು. ಈ ಸಿನಿಮಾದಲ್ಲಿ ಎಂ ವಿ ರಾಜಮ್ಮ, ಬಿ.ಸರೋಜಾದೇವಿ, ಚಿಂದೋಡಿ ಲೀಲಾ, ಲೀಲಾವತಿ, ರಮಾದೇವಿ, ಡಾ.ರಾಜ್ ಕುಮಾರ್, ನರಸಿಂಹರಾಜು, ಬಾಲಕೃಷ್ಣ, ವೀರಪ್ಪ ಚಿಂದೋಡಿ ಸೇರಿದಂತೆ ಘಟಾನುಘಟಿ ನಟ, ನಟಿಯರು ನಟಿಸಿದ್ದರು. ಭಕ್ತ ಪ್ರಹ್ಲಾದ ಚಿತ್ರದಲ್ಲಿನ ನಾರದ ಪಾತ್ರ ಭಾರೀ ಜನಮೆಚ್ಚುಗೆ ಪಡೆದಿತ್ತು. ಗಾಳಿ ಗೋಪುರ ಸಿನಿಮಾದಲ್ಲಿನ ತಮ್ಮ ಅದ್ಭುತ ಅಭಿನಯದಿಂದ ತಾವೊಬ್ಬ ಅಪ್ಪಟ ಕಲಾವಿದ ಎಂಬುದನ್ನು ತೋರಿಸಿಕೊಟ್ಟಿದ್ದರು.

ಪೋಷಕ ನಟನಾಗಿ ಅಶ್ವಥ್ ಅವರು ಹಲವಾರು ವೈವಿಧ್ಯಮಯ ಪಾತ್ರಗಳಲ್ಲಿ ನಟಿಸುವ ಮೂಲಕ ಆ ಪಾತ್ರಕ್ಕೆ ಜೀವ ತುಂಬಿ ನಟಿಸುವ ಕಲೆ ಕರಗತವಾಗಿತ್ತು ಎಂಬುದಕ್ಕೆ ಅವರ ಚಿತ್ರಗಳೇ ಸಾಕ್ಷಿಯಾಗಿದೆ. ತಂದೆಯ ಪಾತ್ರದಲ್ಲಿನ ಕಾಳಜಿ, ಸಿಟ್ಟು, ಹಿರಿಯಣ್ಣನ ಪಾತ್ರದಲ್ಲಿನ ಕಳಕಳಿ, ವೇದನೆ, ಪ್ರೀತಿ ಜನರಿಗೆ ಹೆಚ್ಚು ಆಪ್ತವಾಗಿದ್ದವು.ನಾಗರಹಾವು ಚಿತ್ರದಲ್ಲಿನ ಚಾಮಯ್ಯ ಮೇಷ್ಟ್ರು ಪಾತ್ರ ಅಶ್ವಥ್ ಅವರನ್ನು ಜನಮಾನಸದಲ್ಲಿ ಚಿರಸ್ಥಾಯಿಯಾಗಿಸಿತ್ತು. ಕಸ್ತೂರಿ ನಿವಾಸ, ಸರ್ವಮಂಗಳ, ನಂದಾದೀಪ, ಗೆಜ್ಜೆ ಪೂಜೆ, ಶರಪಂಜರ, ಜೇನುಗೂಡು, ನ್ಯಾಯವೇ ದೇವರು, ಬೆಳ್ಳಿ ಮೋಡ ಸೇರಿದಂತೆ ಹತ್ತು ಹಲವು ಸಿನಿಮಾಗಳಲ್ಲಿನ ಭಾವಪೂರ್ಣ ಅಭಿನಯ ಇಂದಿಗೂ ನಮ್ಮನ್ನು ಕಾಡುತ್ತದೆ.  ಅಶ್ವಥ್ 1956ರಲ್ಲಿ ಬಿಡುಗಡೆಯಾದ ಸೆವೆನ್ ವಂಡರ್ಸ್ ಆಫ್ ದ ವರ್ಲ್ಡ್ ಎಂಬ ಇಂಗ್ಲೀಷ್ ಸಿನಿಮಾದಲ್ಲೂ ಅಭಿನಯಿಸಿದ್ದರು. ಇಂಗ್ಲಿಷ್ ಸಿನಿಮಾದಲ್ಲಿ ನಟಿಸಿದ್ದ ಕನ್ನಡದ ಮೊದಲ ನಟ ಎಂಬ ಹೆಗ್ಗಳಿಕೆ ಕೂಡಾ ಇವರದ್ದಾಗಿದೆ.

1960, 70ರ ದಶಕದಲ್ಲಿ ಅಶ್ವಥ್ ಮತ್ತು ಪಂಡರಿಬಾಯಿ ಜೋಡಿ ಅತ್ಯಂತ ಜನಪ್ರಿಯವಾಗಿತ್ತು. ಹೀಗೆ 300ಕ್ಕೂ ಅಧಿಕ ಸಿನಿಮಾಗಳಲ್ಲಿ ನಟಿಸಿದ್ದ ಅಶ್ವಥ್ ಅವರು ಅನಾರೋಗ್ಯದ ಕಾರಣದಿಂದ 1995ರಲ್ಲಿಯೇ ಚಿತ್ರರಂಗಕ್ಕೆ ವಿದಾಯ ಹೇಳಿದ್ದರು. ಇದರಿಂದ ಅಭಿಮಾನಿಗಳಿಗೆ ದೊಡ್ಡ ಶಾಕ್ ಆಗಿತ್ತು. ಆದರೆ ಆಪ್ತ ಗೆಳೆಯರಾಗಿದ್ದ ಡಾ.ರಾಜ್ ಕುಮಾರ್ ಅವರ ಶಬ್ಧವೇದಿ ಸಿನಿಮಾದಲ್ಲಿ ನಟಿಸುವಂತೆ ಪಾರ್ವತಮ್ಮ ರಾಜ್ ಕುಮಾರ್ ಅವರ ಮನವೊಲಿಸಿದ್ದರು. ಆ ಹಿನ್ನೆಲೆಯಲ್ಲಿ ಅಶ್ವಥ್ ಅವರು ಎಸ್.ನಾರಾಯಣ್ ನಿರ್ದೇಶನದ ಶಬ್ಧವೇದಿ ಸಿನಿಮಾದಲ್ಲಿ ದ್ವಿಪಾತ್ರದಲ್ಲಿ ಕಾಣಿಸಿಕೊಂಡು ತಮ್ಮ ಅಭಿಮಾನಿಗಳಿಗೆ ಖುಷಿ ಉಣಬಡಿಸಿದ್ದರು.

ಡಾ.ರಾಜ್ ಬಗ್ಗೆ ಅಪಾರ ಅಭಿಮಾನ ಹೊಂದಿದ್ದ ಅಶ್ವಥ್ ಅವರು ಬರೋಬ್ಬರಿ 72 ಸಿನಿಮಾಗಳಲ್ಲಿ ರಾಜ್ ಜೊತೆ ನಟಿಸಿದ್ದರು. ಇವರ ಅದ್ಭುತ ಕಲಾಸೇವೆಯನ್ನು ಗುರುತಿಸಿ 1993-94ರಲ್ಲಿ ಡಾ.ರಾಜ್ ಕುಮಾರ್ ಪ್ರಶಸ್ತಿ, ಕನ್ನಡ ರಾಜ್ಯೋತ್ಸವ ಪ್ರಶಸ್ತಿ, ಕನ್ನಡ ಕಾಯಕಸಿರಿ ಪ್ರಶಸ್ತಿ ಸೇರಿದಂತೆ ಹಲವಾರು ಪ್ರಶಸ್ತಿಗಳು ಸಂದಿತ್ತು. ನಟ ಶಂಕರ್ ಅಶ್ವಥ್ ಸೇರಿದಂತೆ ಇಬ್ಬರು ಗಂಡು, ಒಬ್ಬಳು ಮಗಳು ಅಶ್ವಥ್ ದಂಪತಿಗೆ. 2010ರ ಜನವರಿ 18ರಂದು ಅಶ್ವಥ್ ಅವರು ವಿಧಿವಶರಾಗಿದ್ದರು.

*ನಾಗೇಂದ್ರ ತ್ರಾಸಿ

Advertisement

Udayavani is now on Telegram. Click here to join our channel and stay updated with the latest news.

Next