ನವದೆಹಲಿ: ಖ್ಯಾತ ಹಿಂದಿ ಸಾಹಿತಿ ಮತ್ತು ಸಾಹಿತ್ಯ ವಿಮರ್ಶಕ ನಮವರ ಸಿಂಗ್ ಅವರು ಮಂಗಳವಾರ ತಡರಾತ್ರಿ ನಿಧನರಾಗಿದ್ದಾರೆ, ಅವರಿಗೆ 92 ವರ್ಷ ವಯಸ್ಸಾಗಿತ್ತು. ವಯೋ ಸಹಜ ಕಾರಣಗಳಿಂದಾಗಿ ಸಿಂಗ್ ಅವರ ಆರೋಗ್ಯ ಹದಗೆಟ್ಟಿದ್ದ ಕಾರಣ ಅವರನ್ನು ಏಮ್ಸ್ ಗೆ ದಾಖಲಿಸಲಾಗಿತ್ತು. ಮಂಗಳವಾರ ತಡರಾತ್ರಿ ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲಿಯೇ ಮೃತಪಟ್ಟಿದ್ದಾರೆ ಎಂದು ಅವರ ಕುಟುಂಬ ಮೂಲಗಳು ತಿಳಿಸಿವೆ.
‘ಕವಿತಾ ಕೆ ನಯೇ ಪ್ರತಿಮಾ’ ಎಂಬ ಸಾಹಿತ್ಯ ವಿಮರ್ಶಾ ಕೃತಿಗೆ ನಮವರ ಸಿಂಗ್ ಅವರಿಗೆ 1971ರಲ್ಲಿ ಸಾಹಿತ್ಯ ಅಕಾಡಮಿ ಪುರಸ್ಕಾರ ಸಂದಿತ್ತು. ನಮವರ ಸಿಂಗ್ ಅವರ ಅಂತ್ಯಕ್ರಿಯೆ ಬುಧವಾರ ಮಧ್ಯಾಹ್ನದಂದು ಲೋಧಿ ಅಂತ್ಯಸಂಸ್ಕಾರ ಪ್ರದೇಶದಲ್ಲಿ ನಡೆಯಲಿದೆ.
ಸಿಂಗ್ ಅವರು 1923ರಲ್ಲಿ ಉತ್ತರಪ್ರದೇಶದ ವಾರಣಾಸಿಯಲ್ಲಿ ಜನಿಸಿದ್ದರು. ಬನಾರಸ್ ಹಿಂದು ವಿಶ್ವವಿದ್ಯಾನಿಲಯದಿಂದ ಪಿ.ಹೆಚ್.ಡಿ. ಪದವಿಯನ್ನು ಪಡೆದ ಇವರು ಬಳಿಕ ಇದೇ ವಿಶ್ವವಿದ್ಯಾನಿಲಯದಲ್ಲಿ ಹಿಂದಿ ಉಪನ್ಯಾಸಕರಾಗಿ ನೇಮಕಗೊಳ್ಳುವ ಮೂಲಕ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದರು. ಜೆ.ಎನ್.ಯು.ನಲ್ಲಿರುವ ಭಾರತೀಯ ಭಾಷಾ ಕೇಂದ್ರದ ಪ್ರಥಮ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದ ನಮವರ ಸಿಂಗ್ ಅವರು ಈ ಹುದ್ದೆಯಿಂದ 1992ರಲ್ಲಿ ನಿವೃತ್ತರಾದರು. ಹಿಂದಿ ಸಾಹಿತ್ಯಕ್ಕೆ ತಮ್ಮದೇ ಆದ ವಿಶೇಷ ಕೊಡುಗೆಯನ್ನು ನೀಡುವ ಮೂಲಕ ಹಿಂದಿ ಸಾಹಿತ್ಯಲೋಕವನ್ನು ಶ್ರೀಮಂತಗೊಳಿಸಿದ್ದರು. ‘ಕವಿತಾ ಕೆ ನಯೇ ಪ್ರತಿಮಾ’ ‘ಛಾಯಾವಧ್’ ಮತ್ತು ದೂಸ್ರೀ ಪರಂಪರಾ ಕಿ ಖೋಝ್’ ಸಿಂಗ್ ಅವರ ಮಹೋನ್ನತ ಕೃತಿಗಳಾಗಿವೆ.
ನಮವರ ಸಿಂಗ್ ಅವರು ‘ಜನಯುಗ್’ ಮತ್ತು ‘ಆಲೋಚನಾ’ ಪತ್ರಿಕೆಗಳ ಸಂಪಾದಕರಾಗಿಯೂ ಕಾರ್ಯನಿರ್ವಹಿಸಿದ್ದರು. ಅಖಿಲ ಭಾರತ ಪ್ರಗತಿಪರ ಲೇಖಕರ ಸಂಘದ ಅಧ್ಯಕ್ಷರಾಗಿಯೂ ಇವರು ಸೇವೆ ಸಲ್ಲಿಸಿದ್ದರು. ರಾಜಕೀಯದಲ್ಲೂ ತಮ್ಮ ಛಾಪನ್ನು ಒತ್ತಿದ್ದ ಸಿಂಗ್ ಅವರು 1959ರಲ್ಲಿ ಸಿ.ಪಿ.ಐ. ಪಕ್ಷದಿಂದ ಲೋಕಸಭಾ ಚುನಾವಣೆಗೆ ಸ್ಪರ್ಧಿಸಿ ಸೋತಿದ್ದರು.