Advertisement

ಸಮುದ್ರಕ್ಕೆ ನೀರು ಪೋಲು ಅನ್ನೋದೇ ದಡ್ಡತನ

06:20 AM Jan 21, 2018 | |

ಬೆಂಗಳೂರು: ಕುಡಿಯುವ ನೀರಿನ ಹಾಗೂ ನೀರಾವರಿ ಯೋಜನೆಗಳ ವಿಚಾರ ಬಂದಾಗೆಲ್ಲ “ಸಮುದ್ರಕ್ಕೆ ನೀರು
ಹರಿದು ಪೋಲಾಗುತ್ತದೆ’ ಎಂದು ವಾದಿಸುವುದು ದಡ್ಡತನ. ಜನರಿಗೆ ಇದನ್ನು ಹೇಗೆ ತಿಳಿಸಬೇಕು ಅನ್ನುವುದೇ ಗೊತ್ತಾಗುತ್ತಿಲ್ಲ ಎಂದು ವನ್ಯಜೀವಿ ತಜ್ಞರಾದ ಕೃಪಾಕರ-ಸೇನಾನಿ ಅಭಿಪ್ರಾಯಿಸಿದ್ದಾರೆ.

Advertisement

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಮ್ಮಿಕೊಂಡಿದ್ದ  “ಮನೆಯಂಗಳದಲ್ಲಿ ಮಾತುಕತೆ’ ಸಂವಾದದಲ್ಲಿ ತಮ್ಮ ಮೂರು ದಶಕಗಳ ಕಾಡಿನ ಜೀವನ, ವನ್ಯಜೀವಿಗಳ ಪ್ರಪಂಚ ಹಾಗೂ ಅರಣ್ಯವಾಸಿಗಳ ಜೊತೆಗಿನ ಒಡನಾಟ,ಪರಿಸರ, ಅಂತರ್ಜಲ ಹಾಗೂ ನೀರಿನ ಸಮಸ್ಯೆಗಳ ಬಗ್ಗೆ ತಮಗಿರುವ ಆತಂಕ ತೋಡಿಕೊಂಡರು.

ಸಂವಾದದಲ್ಲಿ ನೇತ್ರಾವತಿ ತಿರುವು ಯೋಜನೆ ಬಗ್ಗೆ ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿ, ಕುಡಿಯುವ ನೀರು ಅಥವಾ ನೀರಾವರಿ ಯೋಜನೆಗಳ ವಿಚಾರ ಬಂದಾಗೆಲ್ಲ, “ಸಮುದ್ರಕ್ಕೆ ಹರಿದು ಪೋಲಾಗುತ್ತಿರುವ’ ನೀರನ್ನು ಬಳಸಿಕೊಳ್ಳಲಾಗುತ್ತದೆ ಎಂಬ ವಾದ ಕೇಳಿ ಬರುತ್ತವೆ. ಸಮುದ್ರಕ್ಕೆ ನೀರು ಹರಿದು ಪೋಲಾಗುತ್ತದೆ ಎಂದು ಹೇಳುವುದಕ್ಕಿಂತ ದಡ್ಡತನ ಮೊತ್ತೂಂದಿಲ್ಲ. ರಾಜಕಾರಣಿಗಳು ಈ ಮಾತು ಹೇಳಲಿ. ಆದರೆ, ರೈತರು,ಚಳವಳಿಗಾರರು, ಯೋಜನೆಯ ಫ‌ಲಾನುಭವಿಗಳು ಅಥವಾ ಬಾಧಿತರಾದವರು ಹೇಳಬಾರದು. ಇದನ್ನು ಅರ್ಥ ಮಾಡಿಸುವುದೇ ಕಷ್ಟವಾಗಿದೆ ಎಂದರು.

ನೀರನ್ನು ಟಿಎಂಸಿಗಳಲ್ಲಿ ಮಾತ್ರ ನೋಡಲಾಗುತ್ತದೆ. ಆದರೆ, ಆ ನೀರಿನ ಮೂಲಕ ಇಡೀ ಪರಿಸರ ವ್ಯವಸ್ಥೆಯನ್ನು ಅರ್ಥ ಮಾಡಿಕೊಳ್ಳಬೇಕು, ನೀರಿನ ಮೂಲಗಳನ್ನು ಗೌರವವಿಸುವುದನ್ನು ನಾವು ಕಲಿಯಬೇಕು ಎಂದು ಸೇನಾನಿ ಉತ್ತರಿಸಿದರು.

ಕಾಡ್ಗಿಚ್ಚಿಗೆ ಮಾನವ ಅಥವಾ ಪ್ರಕೃತಿ ಕಾರಣವೇ ಎಂಬ ಪ್ರಶ್ನೆಗೆ, ದಕ್ಷಿಣ ಭಾರತದಲ್ಲಿ ಸಂಭವಿಸುವ ಕಾಡ್ಗಿಚ್ಚಿಗೆ ನೂರಕ್ಕೆ ನೂರು ಮಾನವ ಕಾರಣ. ಬಂಡೀಪುರದಲ್ಲಿ ನೂರಾರು ವರ್ಷಗಳಿಂದ ವರ್ಷಪೂರ್ತಿ ಹರಿಯುತ್ತಿದ್ದ ಐದು ಪ್ರಮುಖ ಝರಿಗಳು, ಕಳೆದ 10 ವರ್ಷಗಳಿಂದ ಹರಿಯುತ್ತಿಲ್ಲ. ವನ್ಯಜೀವಿ ಸಂಕುಲ, ಅರಣ್ಯ ರಕ್ಷಣೆಗೆ ಶಾಶ್ವತ ಪರಿಹಾರ ದೊರಕಿಸಲು ನಮ್ಮಿಬ್ಬರಿಂದ ಸಾಧ್ಯವಿಲ್ಲ ಎಂದರು. ಕಾರ್ಯಕ್ರಮದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿರ್ದೇಶಕ ಎನ್‌.ಆರ್‌.ವಿಶುಕುಮಾರ್‌ ಉಪಸ್ಥಿತರಿದ್ದರು.

Advertisement

ಕಾಡು ಜನರೊಂದಿಗೆ ಸಂವೇದನೆ ಕಲಿತೆವು 
“ನಮ್ಮಿಬ್ಬರಿಗೂ ಇದ್ದ ಸಮಾನ ಅನುಕೂಲತೆ ಎಂದರೆ ಇಬ್ಬರ ಮನೆಯಲ್ಲೂ ನಮ್ಮ ಅಭಿರುಚಿಗೆ ಪೂರಕ ವಾತಾವರಣವಿತ್ತು. ಜೀವ ಸಂಕುಲದ ಬಗೆಗಿನ ಕೌತುಕಗಳೊಂದಿಗೆ 30 ವರ್ಷದ ಹಿಂದೆ ಕ್ಯಾಮೆರಾ ಹೊತ್ತು ಕಾಡಿನತ್ತ ಹೊರಟೆವು. ನಾವು ತರಸಗುಪ್ಪೆಗೆ ದೊಡ್ಡ ಬ್ಯಾಗ್‌ ಹೊತ್ತು ಹೋದಾಗ, ಶಾಲಾ ಮಕ್ಕಳು ನಾಟಕದ ಮೇಷ್ಟ್ರು ಎಂದರು. ಹಕ್ಕಿಗಳ ಫೋಟೋ ಸೆರೆ ಹಿಡಿಯಲು ಟೆಂಟ್‌ ಹಾಕಿ ಕುಳಿತಾಗ ಅಜ್ಜಿ ಮನೆಯಲ್ಲಿ ಕೆಲಸ ಮಾಡುತ್ತಿದ್ದ ಹೆಂಗಸು “ಅಯ್ಯೋ ಬೇಟೆಯಾಡಿ ಹೊಟ್ಟೆ ತುಂಬಿಸಿಕೊಳ್ಳುವ ಸ್ಥಿತಿ ಬಂತಲ್ಲ’ ಎಂದು ಮರುಕಪಟ್ಟಿದ್ದರು. ಮದುಮಲೈ ಕಾಡಿಗೆ ಹೋದಾಗ ಕಾಡುವಾಸಿ ಬೊಮ್ಮ, ಚೆನ್ನ ಮತ್ತು ಕೃಷ್ಣನ ಒಡನಾಟದಿಂದ ನಮ್ಮ ದೃಷ್ಟಿಕೋನ ಬದಲಾಯಿತು. ಉತ್ತರ ಕರ್ನಾಟಕ ಭಾಗದಲ್ಲಿ ತೋಳಗಳ ಬಗ್ಗೆ ಅಧ್ಯಯನ ನಡೆಸಲು ಹೋದಾಗ, ಮಕ್ಕಳ ಕಳ್ಳರು, ಜಾನುವಾರು ಕಳ್ಳರು ಎಂದು ಅಲ್ಲಿನ ಜನ ಅನುಮಾನಿಸಿದ್ದರು ಎಂದು ಕೃಪಾಕರ ಸೇನಾನಿ ತಮ್ಮ ಅನುಭವ ಹಂಚಿಕೊಂಡರು.

ಕಂಪನಿಗಳಿಗೆ ಅರಣ್ಯ ಭೂಮಿ
ರಾಜ್ಯದ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಗಣಿಗಾರಿಕೆ ನಿಷೇಧಿಸಿ, ಹುಲಿ ಸಂತತಿಗೆ ಹಾನಿ ಉಂಟಾಗುತ್ತಿದೆ ಎಂದು ಸುತ್ತಲಿನ ಅರಣ್ಯವಾಸಿಗಳಿಗೆ ಒಕ್ಕಲೆಬ್ಬಿಸಲಾಯಿತು. ಆದರೆ, ಮೂರೇ ತಿಂಗಳಲ್ಲಿ ಅಲ್ಲಿ ಅದಾನಿ ಕಂಪನಿಗೆ ಗುತ್ತಿಗೆ ನೀಡಲಾಯಿತು. ಈ ರೀತಿಯ ನಿರ್ಧಾರ ಮತ್ತು ಧೋರಣೆಗಳು ಇರುವಾಗ ಏನನ್ನು ನಿರೀಕ್ಷಿಸಲು ಸಾಧ್ಯ ಎಂದು ಸೇನಾನಿ ಪ್ರಶ್ನಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next