Advertisement
ಗ್ರಾಮೀಣ ಪ್ರದೇಶಗಳಲ್ಲಿ ಸೊಪ್ಪುಗುರಿ ಎಂದು ಕರೆಯುವ ಈ ಆಡು ಸಾಕಣೆಗೆ ವೆಚ್ಚ ಕಡಿಮೆ. ಆದರೆ ಆದಾಯ ಅಧಿಕ. ಈ ಆಡುಗಳಿಗೆ ಕಾಡಿನ ಸೊಪ್ಪಿನ ಮೇವೇ ಮುಖ್ಯ ಆಹಾರ. ಹೊನ್ನೆ, ಮುಟ್ಟಿದರೆ ಮುನಿ, ತಾರೆ, ಎತ್ತಗಲ, ಹಸಿರು ಸಸ್ಯಗಳೇ ಆಹಾರ. ಮೇವಿಗೆ ಬಿಟ್ಟಾಗ ಇವು ತಿನ್ನದ ಸಸ್ಯಗಳೇ ಇಲ್ಲ. ಬೆಳಗ್ಗೆಯಿಂದ ಸಂಜೆ ತನಕ ಮೇವಿಗೆ ಬಿಡಬೇಕು. ಆಹಾರ ಧಾನ್ಯ, ಹುಲ್ಲು , ನಿತ್ಯ ಮೈ ತೊಳೆಸುವುದು ಇತ್ಯಾದಿ ವೆಚ್ಚ ಇಲ್ಲ. ನೈಸರ್ಗಿಕ ಆಹಾರವೇ ಇದರ ಆಹಾರ. ವರ್ಷವಿಡೀ ಪ್ರತಿದಿನ ಕಾಡಿನಲ್ಲಿ ಮೇಯಿಸುವುದೇ ದೊಡ್ಡ ಕೆಲಸ. ಇದಕ್ಕಾಗಿ ಒಬ್ಬರನ್ನು ನೇಮಿಸಿಕೊಳ್ಳಬಹುದು. ಅವನ ಖರ್ಚು ಪ್ರತಿದಿನ 200ರೂ. ಅಂತ ಲೆಕ್ಕ ಇಟ್ಟುಕೊಂಡರೆ ಕೂಲಿ¿ತಿಂಗಳಿಗೆ 6 ಸಾವಿರವಷ್ಟೇ.
ಈಗ ಇವರ ಬಳಿ ಪ್ರತಿ ವರ್ಷ ಸರಾಸರಿ 55 ರಿಂದ 60 ಆಡು ಇದೆ. ಹೆಣ್ಣು ಆಡು ಒಂದು ವರ್ಷ ಪ್ರಾಯವಾಗುತ್ತಿದ್ದಂತೆ ಪ್ರತಿ 6 ತಿಂಗಳಿಗೆ ಕನಿಷ್ಠ 2 ಮರಿಗೆ ಜನ್ಮ ನೀಡುತ್ತದೆ. ಸಾಬ್ ವರ್ಷಕ್ಕೆ ಸರಾಸರಿ 30 ಆಡು ಮಾರುತ್ತಾರೆ. ಮೂರು ವರ್ಷ ಪ್ರಾಯದ ಒಂದು ಆಡಿಗೆ ರೂ.3500 ರಿಂದ 4000 ವರೆಗೂ ದಾರಣೆ ಸಿಗುತ್ತದೆ. ಹೀಗೆ ವರ್ಷದಲ್ಲಿ ಆಡು ಮಾರಿ ಒಂದು ಲಕ್ಷಕ್ಕೂ ಹೆಚ್ಚು ಆದಾಯ ಸಿಗುತ್ತದೆ. ಹಬ್ಬ, ವಿಶೇಷ ಪೂಜೆ, ನೆಂಟರ ಔತಣ ಇತ್ಯಾದಿಗಳಿಗೆ ಆಡು ಖರೀದಿಸುವವರು ಇವರ ಮನೆಗೆ ಬಂದು ಒಯ್ಯುವ ಕಾರಣ ಮಾರುಕಟ್ಟೆ ಸಮಸ್ಯೆ ಇಲ್ಲ. ಆಗಾಗ ಆಡು ಮಾರಾಟವಾಗುವ ಕಾರಣ ನಿರಂತರ ಆದಾಯ ದೊರೆಯುತ್ತದೆ. ಪ್ರತಿ ವರ್ಷ ರೋಗಕ್ಕೆ ತುತ್ತಾಗಿ ಸರಾಸರಿ 10- 15 ಆಡು ಮರಣ ಹೊಂದುತ್ತವೆ. ಆದರೂ ನಷ್ಟವೇನೂ ಇಲ್ಲ. ಆಗಾಗ ಮರಿ ಹುಟ್ಟುತ್ತಿರುವ ಕಾರಣ ಸರಾಸರಿ ಸಂಖ್ಯೆ ಸಮತೋಲನದಲ್ಲಿ ಸಾಗುತ್ತದೆ. ಆಡುಗಳನ್ನು ಸಾಮಾನ್ಯ ನೆಲದ ದೊಡ್ಡಿಯಲ್ಲಿ ಕೂಡಿ ಹಾಕಿದರೆ ಮಲ ಮೂತ್ರಗಳಿಂದ ನೆಲ ಒದ್ದೆಯಾಗಿ ಶೀತ ರೋಗಕ್ಕೆ ಬಲಿಯಾಗುವ ಕಾರಣ ಸುಮಾರು 2 ಅಡಿ ಎತ್ತರದ ಮರದ ಹಲಗೆ ( ಅಟ್ಟಲು) ಮೇಲೆ ವಾಸದ ವ್ಯವಸ್ಥೆ ಕಲ್ಪಿಸುವುದು ಬಹು ಮುಖ್ಯ. ಮರಿ ಹಾಕಿದ ಆಡುಗುಗಳಿಗೆ ಮಾತ್ರ ಒಂದು ತಿಂಗಳು ಕಾಲ ಜೋಳದ ಕಡ್ಡಿ, ಡೈರಿ ಹಿಂಡಿ ಇತ್ಯಾದಿ ತಿನ್ನಲು ಕೊಡುತ್ತಾರೆ. ಗೊಬ್ಬರದಿಂದಲೂ ಆದಾಯ
ದೊಡ್ಡಿಯಲ್ಲಿ ಸಂಜೆಯಿಂದ ಬೆಳಗ್ಗೆ ಕೂಡಿ ಹಾಕಿದ 60 ಆಡಿನಿಂದ ವರ್ಷಕ್ಕೆ ಸರಾಸರಿ 1 ಸಾವಿರ ಡಬ್ಬ ಗೊಬ್ಬರ ಸಿಗುತ್ತದೆ. ಒಂದು ಡಬ್ಬಕ್ಕೆ ಸರಾಸರಿ ರೂ.100 ಧಾರಣೆ ಇದ್ದು ವರ್ಷದಲ್ಲಿ ಗೊಬ್ಬರದ ಆದಾಯ ಕನಿಷ್ಠವೆಂದರೂ ರೂ.ಲಕ್ಷ ಸಿಗುತ್ತದೆ.ಈ ಗೊಬ್ಬರವನ್ನು ಮನೆ ಬಳಿಯೇ ಖರೀದಿಸುತ್ತಾರೆ. ಮಾರುಕಟ್ಟೆಯ ಹುಡುಕಾಟದ ಸಮಸ್ಯೆಯಿಲ್ಲ. ಆಡು ಸಾಕಣೆಯ ಆದಾಯದಿಂದಲೇ ಸಾಬ್ ಮನೆ ನಿರ್ಮಿಸಿಕೊಂಡಿದ್ದಾರೆ. ಚಿಕ್ಕ ಗುಡಿಸಿಲಂತಿದ್ದ ಕೊಟ್ಟಿಗೆಯನ್ನು ದೊಡ್ಡಾದಿ ವ್ಯವಸ್ಥಿತವಾಗಿ ನಿರ್ಮಿಸಿದ್ದಾರೆ. ಇತರ ಯಾವುದೇ ಆದಾಯದ ಮೂಲ ಇಲ್ಲದ ಕಾರಣ ಆಡು ಸಾಕಣೆಯನ್ನು ಅತ್ಯಂತ ಮುತುವಜಿಯಿಂದ ನಿರ್ವಹಿಸಿ ಉತ್ತಮ ಆದಾಯ ಬರುವಂತೆ ನೋಡುಕೊಳ್ಳುತ್ತಿದ್ದಾರೆ.
Related Articles
Advertisement
ಲೇಖನ ಮತ್ತು ಫೋಟೋ-ಎನ್.ಡಿ.ಹೆಗಡೆ ಆನಂದಪುರಂ