“ದಯವಿಟ್ಟು ಗಮನಿಸಿ’ ಎಂಬ ಸಿನಿಮಾ ಬಂದಿರುವ ವಿಷಯ ನಿಮಗೆ ಗೊತ್ತೇ ಇದೆ. ಈಗ ಅದರ ಮುಂದುವರಿದ ಭಾಗದಂತಿರುವ “ಪ್ರಯಾಣಿಕರ ಗಮನಕ್ಕೆ’ ಎಂಬ ಪ್ರಕಟಣೆ ಕೂಡಾ ಸಿನಿಮಾವೊಂದರ ಶೀರ್ಷಿಕೆಯಾಗಿದೆ. ಸದ್ದಿಲ್ಲದೇ ಬಹುತೇಕ ಚಿತ್ರೀಕರಣ ಕೂಡಾ ಮುಗಿದು ಹೋಗಿದೆ. “ಪ್ರಯಾಣಿಕರ ಗಮನಕ್ಕೆ’ ಹೆಸರಿಗೆ ತಕ್ಕಂತೆ ಪ್ರಯಾಣದ ಕಥೆಯನ್ನು ಹೊಂದಿರುವ ಚಿತ್ರ. ಬೇರೆ ಬೇರೆ ವರ್ಗ ಹಾಗೂ ಮನಸ್ಥಿತಿಯ ಏಳು ಪಾತ್ರಗಳು ಒಂದು ಬಸ್ಸಿನಲ್ಲಿ ಪ್ರಯಾಣಿಸುವಾಗ ಏನೆಲ್ಲಾ ಆಗಬಹುದು ಎಂಬ ಅಂಶದೊಂದಿಗೆ ಇಡೀ ಸಿನಿಮಾ ಸಾಗುತ್ತದೆಯಂತೆ. ಈ ಚಿತ್ರವನ್ನು ಮನೋಹರ್ ನಿರ್ದೇಶಿಸುತ್ತಿದ್ದಾರೆ. ಇವರಿಗಿದು ಮೊದಲ ಚಿತ್ರ. ಈ ಹಿಂದೆ ಪವನ್ ಒಡೆಯರ್ ಅವರ ಜೊತೆ ಸಹಾಯಕ ನಿರ್ದೇಶಕರಾಗಿ ದುಡಿದ ಅನುಭವ ಮನೋಹರ್‌ಗಿದೆ. ತಮ್ಮ ಚೊಚ್ಚಲ ಸಿನಿಮಾ ಬಗ್ಗೆ ಮಾತನಾಡುವ ಮನೋಹರ್, “ಇದೊಂದು ಸೆಂಟಿಮೆಂಟ್ ಥ್ರಿಲ್ಲರ್ ಸಿನಿಮಾ. ಕಾಮಿಡಿ, ಸೆಂಟಿಮೆಂಟ್ ಜೊತೆಗೆ ಇಡೀ ಸಿನಿಮಾ ಸಾಗುತ್ತದೆ. ಈ ಚಿತ್ರದಲ್ಲಿ ಮಿನಿ ಬಸ್ ಕೂಡಾ ಪ್ರಮುಖ ಪಾತ್ರ ವಹಿಸುತ್ತದೆ. ಇಡೀ ಸಿನಿಮಾದ ಚಿತ್ರೀಕರಣ ಬಸ್ಸಿನಲ್ಲಿಯೇ ನಡೆದಿದೆ. ದೂರದ ಊರಿಗೆ ಹೋಗುವ ಬಸ್ಸಿಗೆ ಪ್ರಯಾಣಿಕರನ್ನು ಪಿಕ್‌ಅಪ್ ಮಾಡುವ ಮಿನಿ ಬಸ್ಸಿನಲ್ಲಿ ಏಳು ಪಾತ್ರಗಳ ಸುತ್ತ ಈ ಸಿನಿಮಾ ಸುತ್ತುತ್ತದೆ. ಇದೊಂದು ಹೊಸ ಪ್ರಯತ್ನ’ ಎಂದು ತಮ್ಮ ಸಿನಿಮಾ ಬಗ್ಗೆ ವಿವರ ಕೊಡುತ್ತಾರೆ. ಈ ಬಸ್ಸಿನಲ್ಲಿ ಡ್ರೈವರ್, ಕಂಡಕ್ಟರ್, ಮನೆಬಿಟ್ಟು ಹೋಗುತ್ತಿರುವ ಪ್ರೇಮಿಗಳು, ಗರ್ಭಿಣಿ, ಹಿರಿಯರು … ಹೀಗೆ ಎಲ್ಲಾ ರೀತಿಯ ಜನ ಇರುತ್ತಾರಂತೆ. ಈ ಚಿತ್ರವನ್ನು ಸುರೇಶ್ ಹಾಗೂ ಮೋಹನ್ ಸೇರಿ ನಿರ್ಮಿಸಿದ್ದಾರೆ. ನಿರ್ದೇಶಕರು ಮಾಡಿಕೊಂಡ ಕಥೆ ವಿಭಿನ್ನವಾಗಿ ಕಂಡಿದ್ದರಿಂದ ಈ ಸಿನಿಮಾ ಮಾಡಿದ್ದಾಗಿ ಹೇಳಿಕೊಂಡರು ಅವರು.
ಚಿತ್ರದಲ್ಲಿ ಭರತ್ ಸರ್ಜಾ ನಾಯಕರಾಗಿ ನಟಿಸಿದ್ದಾರೆ. ಈ ಹಿಂದೆ “ವೀರ ಪುಲಿಕೇಶಿ’ ಎಂಬ ಸಿನಿಮಾ ಮಾಡಿದ್ದ ಭರತ್‌ಗೆ “ಪ್ರಯಾಣಿಕರ ಗಮನಕ್ಕೆ’ ಎರಡನೇ ಸಿನಿಮಾ. ಈ ಸಿನಿಮಾದಲ್ಲಿ ಅವರು ಬಸ್ಸಿನ ಡ್ರೈವರ್ ಆಗಿ ನಟಿಸಿದ್ದಾರೆ. ಹಾಗಾಗಿ, ಇಡೀ ಕಥೆಯನ್ನು ಮುಂದುವರೆಸಿಕೊಂಡು ಹೋಗುವುದು ಅವರೇ ಎಂದರೆ ತಪ್ಪಲ್ಲ. ಚಿತ್ರದಲ್ಲಿ ಅಮಿತಾ ರಂಗನಾಥ್ ಹಾಗೂ ಪವಿತ್ರಾ ನಾಯಕಿಯರು. ಇಬ್ಬರು ಕೂಡಾ ಚಿತ್ರೀಕರಣದ ಅನುಭವ ಹಂಚಿಕೊಂಡರು. ಚಿತ್ರಕ್ಕೆ ವಿಜೇತ್ ಸಂಗೀತ ನೀಡಿದ್ದಾರೆ.