Advertisement

ರೋಟಾ ವೈರಸ್‌ ಲಸಿಕೆ ಅನುಷ್ಠಾನಕ್ಕೆ ಸೂಚನೆ

02:16 PM Aug 23, 2019 | Suhan S |

ಚಾಮರಾಜನಗರ: ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವತಿಯಿಂದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಜಿಲ್ಲಾ ಮಟ್ಟದ ರೋಟಾ ವೈರಸ್‌ ಲಸಿಕೆ ಹಾಗೂ ಕುಷ್ಠ ರೋಗ ಪತ್ತೆ ಹಚ್ಚುವ ಅಭಿಯಾನ ಸಮನ್ವಯ ಸಮಿತಿ ಸಭೆಯನ್ನು ಜಿಲ್ಲಾಧಿಕಾರಿ ಬಿ.ಬಿ.ಕಾವೇರಿ ಅಧ್ಯಕ್ಷತೆಯಲ್ಲಿ ನಡೆಯಿತು.

Advertisement

ಸಭೆಯಲ್ಲಿ ಜಿಲ್ಲಾಧಿಕಾರಿ ಬಿ.ಬಿ.ಕಾವೇರಿ ಮಾತ ನಾಡಿ, ಆರೋಗ್ಯ ಇಲಾಖೆಯಿಂದ ರೋಟಾ ವೈರ ಸ್‌ ಮತ್ತು ಟೆಟನಸ್‌ ಡಿಫ್ತೀರಿಯಾ (ಟಿ.ಡಿ) ಲಸಿಕೆ ಗಳನ್ನು ಹೊಸದಾಗಿ ಪರಿಚಯಿಸಲಾಗುತ್ತಿದೆ. ಲಸಿಕೆ ಅನು ಷ್ಠಾನಕ್ಕೆ ಅಗತ್ಯ ಸಿದ್ಧತೆ ಕೈಗೊಂಡು ಸಮರ್ಪ ಕವಾಗಿ ಕಾರ್ಯನಿರ್ವಹಿಸುವಂತೆ ಸೂಚನೆ ನೀಡಿದರು.

ವೈರಸ್‌ ಲಸಿಕೆ ಬಗ್ಗೆ ಅರಿವು ಮೂಡಿಸಿ: ನಗರಸಭೆ, ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯಲ್ಲಿ ರೋಟಾ ವೈರಸ್‌ ಲಸಿಕೆಯ ಬಗ್ಗೆ ಹೆಚ್ಚಿನ ರೀತಿಯಲ್ಲಿ ಅರಿವು ಮೂಡಿಸುವ ಕೆಲಸವಾಗಬೇಕು. ಟಿ.ಡಿ. ಲಸಿಕೆಯನ್ನು ಶಾಲೆಯ ಮಕ್ಕಳು ಮತ್ತು ಗರ್ಭಿಣಿಯರಿಗೆ ಸೂಕ್ತ ಸಮಯಕ್ಕೆ ನೀಡುವಂತೆ ತಿಳಿಸಿದರು.

ಜಿಲ್ಲಾಧಿಕಾರಿಗೆ ಮಾಹಿತಿ: ಸರ್ವೇಕ್ಷಣಾ ಅಧಿಕಾರಿ ಡಾ. ಸುಧೀರ್‌ನಾಯಕ್‌ ಮಾತನಾಡಿ, ಸಾರ್ವತ್ರಿಕ ಲಸಿಕಾ ಕಾರ್ಯಕ್ರಮದಡಿ, ರೋಟಾ ವೈರಸ್‌ ಲಸಿಕೆ ಹಾಗೂ ಟಿ.ಡಿ ಲಸಿಕೆಗಳನ್ನು ಅನುಷ್ಠಾನಗೊಳಿಸಲಾಗಿದೆ. ರೋಟಾ ವೈರಸ್‌ ಲಸಿಕೆಯನ್ನು ಮಗು ಹುಟ್ಟಿದ ಆರು, ಹತ್ತು ಹಾಗೂ ಹದಿನಾಲ್ಕನೇ ವಾರಗಳಲ್ಲಿ ಕೊಡಿಸ ಬೇಕು. ಟಿ.ಡಿ ಲಸಿಕೆಯನ್ನು 10ಮತ್ತು 16ನೇ ವಯ ಸ್ಸಿನ ಮಕ್ಕಳು ಹಾಗೂ ಗರ್ಭಿಣಿಯರಿಗೆ ನೀಡ ಬೇಕಾ ಗುತ್ತದೆ ಎಂದು ಜಿಲ್ಲಾಧಿಕಾರಿಗೆ ಮಾಹಿತಿ ನೀಡಿದರು.

ಕುಷ್ಠರೋಗ ಪ್ರಕರಣ ಪತ್ತೆ ಹಚ್ಚಿ: ಇದೇ ವೇಳೆ ಕುಷ್ಠರೋಗ ಪ್ರಕರಣ ಪತ್ತೆ ಹಚ್ಚುವ ಅಭಿಯಾನ ಕಾರ್ಯಕ್ರಮ ಕುರಿತು ಜಿಲ್ಲಾಧಿಕಾರಿ ಬಿ.ಬಿ. ಕಾವೇರಿ ಮಾತನಾಡಿ, ಜಿಲ್ಲೆಯಲ್ಲಿ ಕುಷ್ಠರೋಗ ಪ್ರಕರಣಗಳು ವರ್ಷದಿಂದ ವರ್ಷಕ್ಕೆ ಕಡಿಮೆ ಆಗುತ್ತಿರುವುದು ಕಂಡುಬಂದಿದೆ. ಹೀಗಿದ್ದೂ ಶಾಲಾ ಮಕ್ಕಳಲ್ಲಿ ಕುಷ್ಠರೋಗ ಕುರುಹು ಕಂಡು ಬರುತ್ತಿರುವುದು ಆತಂಕಕಾರಿ ವಿಷಯವಾಗಿದ್ದು ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಪ್ರಕರಣಗಳನ್ನು ಪತ್ತೆಹಚ್ಚಿ ಸೂಕ್ತ ಚಿಕತ್ಸೆ ನೀಡುವಂತೆ ತಿಳಿಸಿದರು.

Advertisement

ಜನರಲ್ಲಿರುವ ಮೌಡ್ಯತೆ ಹೋಗಲಾಡಿಸಿ: ಕುಷ್ಠರೋಗ ಪ್ರಕರಣಗಳನ್ನು ಆರಂಭದಲ್ಲೆ ಪತ್ತೆ ಹಚ್ಚುವುದರಿಂದ ರೋಗದ ಹರಡುವಿಕೆಯನ್ನು ತಡೆಗಟ್ಟಬಹುದಾಗಿದೆ. ಈ ರೋಗದ ಬಗ್ಗೆ ಜನರಿಗಿರುವ ಮೌಡ್ಯತೆ ಹೋಗಲಾಡಿಸುವುದಲ್ಲದೇ ಅಂಗನವಾಡಿ ಹಾಗೂ ಆಶಾ ಕಾರ್ಯಕರ್ತೆಯರು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಬೇಕು ಎಂದರು.

ಸೂಕ್ತ ಸಮಯದಲ್ಲಿ ಚಿಕಿತ್ಸೆ ಪಡೆಯಿರಿ: ಜಿಲ್ಲಾ ಕುಷ್ಠರೋಗ ನಿರ್ಮೂಲನಾ ಅಧಿಕಾರಿ ಡಾ.ಸಿ. ರಾಜು ಮಾತನಾಡಿ, ಕುಷ್ಠರೋಗ ಒಬ್ಬರಿಂದ ಒಬ್ಬರಿಗೆ ಗಾಳಿಯ ಮೂಲಕ ಹರುಡುವ ರೋಗವಾಗಿದ್ದು ಸೂಕ್ತ ಸಮಯದಲ್ಲಿ ಚಿಕಿತ್ಸೆ ಪಡೆದುಕೊಂಡರೆ ಸಂಪೂರ್ಣವಾಗಿ ಗುಣ ಪಡಿಸಬಹುದಾಗಿದೆ ಎಂದು ಮಾಹಿತಿ ನೀಡಿದರು.

ಕೌಶಲ್ಯ ಅಭಿವೃದ್ಧಿ ವತಿಯಿಂದ ನಡೆಯುವ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳಿಗೆ ಉದ್ಯೋಗ ಮೇಳ ಏರ್ಪಡಿಸುವ ಕುರಿತು ಚರ್ಚೆ ನಡೆಲಾಯಿತು.

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಹಾಗೂ ಜಿಲ್ಲಾ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next