Advertisement

ಪಂಪ್‌ವೆಲ್‌ನಲ್ಲಿ ನೋಟಿನ ಬಂಡಲ್‌ಗ‌ಳು ಪತ್ತೆ! ಕುತೂಹಲ ಮೂಡಿಸಿದ ಮೆಕ್ಯಾನಿಕ್‌ ಹೇಳಿಕೆ

12:42 AM Dec 07, 2022 | Team Udayavani |

ಮಂಗಳೂರು : ನಗರದ ಪಂಪ್‌ವೆಲ್‌ ಬಸ್‌ನಿಲ್ದಾಣದ ಬಳಿ ವ್ಯಕ್ತಿಯೋರ್ವರಿಗೆ ನೋಟಿನ ಬಂಡಲ್‌ಗ‌ಳು ದೊರೆತಿವೆ ಎನ್ನಲಾಗಿದ್ದು ಇದರ ವಾರಸುದಾರರು ಪತ್ತೆಯಾಗಿಲ್ಲ.

Advertisement

ಬಸ್‌ಗಳ ಮೆಕ್ಯಾನಿಕ್‌ ಆಗಿರುವ ವ್ಯಕ್ತಿಯೋರ್ವರಿಗೆ ನೋಟುಗಳು ಸಿಕ್ಕಿದ್ದು ಆ ವ್ಯಕ್ತಿ ಅದರಿಂದ ಕೆಲವು ನೋಟುಗಳನ್ನು ತೆಗೆದು ಮದ್ಯ ಖರೀದಿಸಿದ್ದ. ಆತನ ಬಳಿ ಇರುವ ನೋಟುಗಳ ಬಗ್ಗೆ ಸಾರ್ವಜನಿಕ ರೋರ್ವರು ಪೊಲೀಸರಿಗೆ ಮಾಹಿತಿ ನೀಡಿದ್ದು ಅದರಂತೆ ಪೊಲೀಸರು ಸ್ಥಳಕ್ಕೆ ಆಗಮಿಸಿ ವ್ಯಕ್ತಿ ಮತ್ತು ನೋಟುಗಳನ್ನು ವಶಕ್ಕೆ ಪಡೆದುಕೊಂಡಿದ್ದರು ಎಂದು ತಿಳಿದುಬಂದಿದೆ.

ಮತ್ತೋರ್ವನಿಗೂ ಪಾಲು
ಪೊಲೀಸರು ವಿಚಾರಿಸಿದಾಗ ಈ ನೋಟುಗಳು ಬಸ್‌ ನಿಲ್ದಾಣದ ಸಮೀಪ ದೊರೆತಿವೆ. ಇದರಲ್ಲಿ ಸ್ವಲ್ಪ ಹಣವನ್ನು ತನ್ನ ಜತೆ ಇದ್ದ ಮತ್ತೋರ್ವ ವ್ಯಕ್ತಿ ತೆಗೆದುಕೊಂಡು ಹೋಗಿದ್ದಾನೆ ಎಂಬುದಾಗಿ ಮಾಹಿತಿ ನೀಡಿದ್ದ. ನೋಟು ಹೊಂದಿದ್ದ ವ್ಯಕ್ತಿ ಮದ್ಯದ ನಶೆಯಲ್ಲಿದ್ದ ಎನ್ನಲಾಗಿದೆ.

“5ರಿಂದ 10 ಲ.ರೂ. ಇತ್ತು’
“ನೋಟುಗಳಿದ್ದ ಬಾಕ್ಸ್‌ ಪಂಪ್‌ವೆಲ್‌ ಬಸ್‌ನಿಲ್ದಾಣದ ಬಳಿ ರೋಡ್‌ ನಲ್ಲಿ ಬಿದ್ದಿತ್ತು. ಅದರಲ್ಲಿದ್ದ ಹಣವನ್ನು ನಾನು ಲೆಕ್ಕ ಮಾಡಿಲ್ಲ. ಅದರಲ್ಲಿ 5ರಿಂದ 10 ಲ.ರೂ. ಇರಬಹುದು. ನಾನು ಅದರಿಂದ 500 ರೂ. ಮುಖಬೆಲೆಯ 2 ನೋಟುಗಳನ್ನು ತೆಗೆದೆ. ಇಬ್ಬರೂ ಕುಡಿದೆವು. ಒಂದು ಕಟ್ಟನ್ನು ಇನ್ನೊಬ್ಬನಿಗೆ ಕೊಟ್ಟಿದ್ದೇನೆ. ನನ್ನನ್ನು ಪೊಲೀಸರು ಠಾಣೆಗೆ ಕರೆದುಕೊಂಡು ಹೋಗಿ ವಿಚಾರಿಸಿದರು. ಹಣ ಪಡೆದುಕೊಂಡರು. ಕದ್ದ ಹಣ ಅಲ್ಲ ಎಂದು ಹೇಳಿದ್ದೇನೆ. ಬಾಕ್ಸ್‌ ನಲ್ಲಿ ನಂಬರ್‌ ಇದ್ದಿದ್ದರೆ ಅವರಿಗೆ ಮರಳಿಸಬಹುದಿತ್ತು. ನನಗೆ ಇಂತಹ ಹಣ ಬೇಡವೇ ಬೇಡ. ಮನೆಗೂ ಕೊಂಡು ಹೋಗುತ್ತಿರಲಿಲ್ಲ. ನಾನು ಬಸ್‌ನಲ್ಲಿ ದುಡಿಯುತ್ತಿದ್ದೇನೆ. ಅಷ್ಟೇ ಸಾಕು’ ಎಂಬುದಾಗಿ ಹಣ ಹೊಂದಿದ್ದ ಮೆಕ್ಯಾನಿಕ್‌ ಹೇಳಿದ್ದಾರೆ.

10 ಲ.ರೂ. ಅಲ್ಲ, 49,000 ರೂ.
“ಹಣ ಹೊಂದಿದ್ದ ವ್ಯಕ್ತಿ ಹೇಳುವಂತೆ 10 ಲ.ರೂ. ಇರಲಿಲ್ಲ. ನಾವು ಸ್ಥಳದಲ್ಲಿಯೇ ಸಾರ್ವಜನಿಕರ ಎದುರಿನಲ್ಲಿಯೇ ಎಣಿಕೆ ಮಾಡಿದ್ದೇವೆ. ಅದರ ವೀಡಿಯೋ ದಾಖಲೆಗಳು ಕೂಡ ಇವೆ. ಅದರಲ್ಲಿ 49,000 ರೂ. ಮಾತ್ರ ಇತ್ತು. ವಾರಸುದಾರರು ಯಾರೆಂದು ಗೊತ್ತಾಗಿಲ್ಲ. ನೋಟು ಹೊಂದಿದ್ದ ವ್ಯಕ್ತಿ ತನಗೆ ಬಸ್‌ ನಿಲ್ದಾಣದಲ್ಲಿ ಸಿಕ್ಕಿವೆ ಎಂದಿದ್ದಾರೆ. ಈ ಹಣದ ಬಗ್ಗೆ ನ್ಯಾಯಾಲಯಕ್ಕೆ ಮಾಹಿತಿ ನೀಡಿ ನ್ಯಾಯಾಲಯದ ಆದೇಶದಂತೆ ಮುಂದಿನ ಪ್ರಕ್ರಿಯೆ ನಡೆಸಲಾಗುವುದು’ ಎಂದು ಕಂಕನಾಡಿ ನಗರ ಠಾಣೆಯ ಪೊಲೀಸರು ತಿಳಿಸಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next