Advertisement

ಕಪ್ಪು ಹಣ ವೈಟ್‌ ಮಾಡಲು ನೋಟ್‌ ಬ್ಯಾನ್‌

10:15 AM Nov 09, 2017 | Team Udayavani |

ಬೆಂಗಳೂರು: “ಕೇಂದ್ರ ಸರ್ಕಾರ ಭ್ರಷ್ಟರ ಕಪ್ಪು ಹಣವನ್ನು ವೈಟ್‌ ಮನಿ ಮಾಡಲು ನೋಟ್‌ ಬ್ಯಾನ್‌ ಮಾಡಿದೆ’ ಎಂದು ಸಿಎಂ ಸಿದ್ದರಾಮ್ಯಯ ಆರೋಪಿಸಿದರು. ಕೆಪಿಸಿಸಿ ವತಿಯಿಂದ ಕರಾಳ ದಿನಾಚರಣೆಯಲ್ಲಿ ಮಾತನಾಡಿದ ಅವರು, ನೋಟು ಅಮಾನ್ಯ ಸಂಪೂರ್ಣ ವಿಫ‌ಲವಾಗಿದ್ದು, ಬಡವರು, ರೈತರು ಸಾಕಷ್ಟು ತೊಂದರೆ ಅನುಭವಿಸುವಂತಾಯಿತು ಎಂದರು. 

Advertisement

ನೋಟ್‌ ಬ್ಯಾನ್‌ ಮಾಡಿದ್ದರಿಂದ ಭಯೋತ್ಪಾದನೆ ಕಡಿಮೆ ಆಗಲಿಲ್ಲ. ಕಪ್ಪು ಹಣ ಪತ್ತೆಯಾಗಲಿಲ್ಲ. ನಕಲಿ ನೋಟು ನಿಯಂತ್ರಣವೂ ಆಗಲಿಲ್ಲ. ಇದೊಂದು ವ್ಯವಸ್ಥಿತ ಲೂಟಿ, ಅಲ್ಲದೇ ಲೀಗಲೈಸ್‌ ಬ್ಲಿಂಡರ್‌ ಅಂತ ಮಾಜಿ ಪ್ರಧಾನಿ ಮನಮೋಹನ್‌ ಸಿಂಗ್‌ ಆರಂಭದಲ್ಲಿಯೇ ಹೇಳಿದ್ದರು. ಬಿಜೆಪಿಯ ನಾಯಕರೇ ಈ ನಿರ್ಧಾರ ವಿರೋಧಿಸಿದ್ದರು ಎಂದರು. ನೋಟು ಅಮಾನ್ಯದಿಂದ ಕಪ್ಪು ಹಣ ಹೊಂದಿದವರು ನೆಮ್ಮದಿಯಾಗಿ ನಿದ್ದೆ ಮಾಡಿದರು. ಬಡವರು, ಜನ ಸಾಮಾನ್ಯರು ಬ್ಯಾಂಕ್‌ ಮುಂದೆ ಸರತಿಯಲ್ಲಿ ನಿಂತು ಜೀವ ಕಳೆದುಕೊಂಡರು. ಇದು ಮೋದಿ ಬಡ ವರ್ಗದ ಜನರಿಗೆ ಮಾಡಿದ ದೊಡ್ಡ ಮೋಸ ಎಂದು ಬಣ್ಣಿಸಿದರು. ಪ್ರಧಾನಿ ಮೋದಿ ದೇಶದಲ್ಲಿ ಸರ್ವಾಧಿಕಾರಿ ರೀತಿಯಲ್ಲಿ ವರ್ತಿಸುತ್ತಿದ್ದಾರೆ. ಮೋದಿ ಅಮಿತ್‌ ಶಾ ಜೋಡಿ ಕ್ರಿಮಿನಲ್‌ ಮನಸ್ಥಿತಿ ಇರುವವರು, ಬಿಜೆಪಿ ಕಟ್ಟಿದ ಎಲ್‌.ಕೆ. ಅಡ್ವಾಣಿಯನ್ನೇ ಮೂಲೆಗುಂಪು ಮಾಡಿರುವುದು ಇದಕ್ಕೆ ಸಾಕ್ಷಿ ಎಂದರು. 

ಕೆಪಿಸಿಸಿ ಅಧ್ಯಕ್ಷ ಡಾ. ಜಿ. ಪರಮೇಶ್ವರ್‌ ಮಾತನಾಡಿ, ಯುಪಿಎ ಅವಧಿಯಲ್ಲಿ ದೇಶದ ಜಿಡಿಪಿ ಬೆಳವಣಿಗೆಯಾಗಿತ್ತು. ಆಗ ಪ್ರಪಂಚವೇ ಭಾರತದ ಕಡೆಗೆ ನೋಡುವಂತಾಗಿತ್ತು. ಚೀನಾ ಬೆಳವಣಿಗೆಯನ್ನೂ ಮೀರಿ ಭಾರತ ಅಬಿವೃದ್ಧಿಯಾಗಿತ್ತು ಎಂದು ಆರ್ಥಿಕ ತಜ್ಞರು ಹೇಳಿದ್ದರು. ಆದರೆ, ಈಗ ಎಲ್ಲವೂ ತದ್ವಿರುದ್ಧವಾಗಿದೆ. ಯಡಿಯೂರಪ್ಪಗೆ ಜಿಡಿಪಿ ಅರ್ಥ ಆಗುವುದಿಲ್ಲ. ಒಳಗೆ ಹೋಗುವಾಗ ಎರಡು ಬೆರಳು ತೋರಿಸುತ್ತಾರೆ. ಹೊರಗೆ ಬರುವಾಗಲೂ ಎರಡು ಬೆರಳು ತೋರಿಸುತ್ತಾರೆ ಎಂದು ವ್ಯಂಗ್ಯವಾಡಿದರು. ಬಿಜೆಪಿ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ನನಗೆ ಬಿಜೆಪಿ ಆಹ್ವಾನ ನೀಡಿರುವುದಾಗಿ ಹೇಳಿದ್ದಾರೆ. ನನ್ನ ನರ ನಾಡಿಯಲ್ಲಿ ಕಾಂಗ್ರೆಸ್‌ ರಕ್ತ ಹರಿಯುತ್ತಿದೆ. ನಾನು ಕಾಂಗ್ರೆಸ್‌ ಬಿಡುವ ಪ್ರಶ್ನೆಯೇ ಇಲ್ಲ ಎಂದರು. 

ಜನ ಸಾಮಾನ್ಯರ ಮೇಲೆ ಸರ್ಜಿಕಲ್‌ ಸ್ಟ್ರೈಕ್‌ ನೋಟ್‌ ಬ್ಯಾನ್‌ ಕಪ್ಪು ಹಣ ಮತ್ತು ಟೆರರಿಸಂ ವಿರುದ್ದ ಸರ್ಜಿಕಲ್‌ ಸ್ಟ್ರೈಕ್‌ ಎಂದು ಪ್ರಧಾನಿ ಮೋದಿ ಹೇಳಿದ್ದರು. ಆದರೆ, ಜನ ಸಾಮಾನ್ಯರ ಮೇಲೆ ಸರ್ಜಿಕಲ್‌ ಸ್ಟ್ರೈಕ್‌ ಆಗಿದೆ ಎಂದು ರಾಜ್ಯ ಕಾಂಗ್ರೆಸ್‌ ಉಸ್ತುವಾರಿ ಕೆ.ಸಿ. ವೇಣುಗೋಪಾಲ ಹೇಳಿದ್ದಾರೆ. ಅವರಿಗೆ ದೇಶದ ಜನತೆ ಸಮಸ್ಯೆ ಅನುಭವಿಸುತ್ತಿರುವುದು ಗೊತ್ತಿದೆ. ಹೀಗಾಗಿಯೇ ಈ ಕುರಿತು ಸಂಸತ್ತಿನಲ್ಲಿ ಚರ್ಚಿಸಲು ಪ್ರಧಾನಿ ಸಿದ್ಧರಿಲ್ಲ . ನೋಟ್‌ ಬ್ಯಾನ್‌ನಿಂದ ಜನರಿಗೆ ಆಗಿರುವ ತೊಂದರೆಗೆ ಪ್ರಧಾನಿ ಮೋದಿ ದೇಶದ ಜನರ ಕ್ಷಮೆ ಕೇಳಬೇಕು ಎಂದು ಆಗ್ರಹಿಸಿದರು.

ಗುಜರಾತ್‌ನಲ್ಲಿ ಕಪ್ಪು  ಹಣದ ಹೊಳೆ 
ರಾಮನಗರ: “ಕಪ್ಪು ಹಣ ನಿಗ್ರಹಕ್ಕೆ 500 ಮತ್ತು 1000 ರೂ. ಮುಖಬೆಲೆಯ ನೋಟು ಅಮಾನ್ಯ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದರು. ಆದರೆ, ಅಂತಹ ಯಾವುದೇ ಪರಿಣಾಮ ಬೀರಿಲ್ಲ, ಗುಜರಾತ್‌ನಲ್ಲಿ ಚುನಾವಣೆಯ ಹಿನ್ನೆಲೆಯಲ್ಲಿ ಕಪ್ಪುಹಣದ ಹೊಳೆಯೇ ಹರಿಯುತ್ತಿದೆ’ ಎಂದು ಮಾಜಿ ಪ್ರಧಾನಿ ಹಾಗೂ ಜೆಡಿಎಸ್‌ ವರಿಷ್ಠ ಎಚ್‌ .ಡಿ.ದೇವೇಗೌಡ ಹೇಳಿದರು. ನಗರದ ಹೊರವಲಯದ ಜಾನಪದದ ಬಳಿ ನೂತನ ಸಿರಿಧಾನ್ಯಗಳ ಮಳಿಗೆಯನ್ನು ಉದ್ಘಾಟಿಸಿ ಮಾತನಾಡಿ, ಗುಜರಾತ್‌ನಲ್ಲಿ ಚುನಾವಣೆ ಹತ್ತಿರವಾಗಿದೆ. ಅಲ್ಲಿ ಎರಡೂ ಪಾರ್ಟಿಯವರು (ಕಾಂಗ್ರೆಸ್‌ ಮತ್ತು ಬಿಜೆಪಿ) ಕಪ್ಪುಹಣವನ್ನು ಹರಿಸುತ್ತಿದ್ದಾರೆ ಎಂದ ಅವರು ನೋಟು ಅಮಾನ್ಯ ಉದ್ದೇಶ ಈಡೇರಿಲ್ಲ ಎಂದರು. 

Advertisement

ಸಿಪಿಐ(ಎಂ) ಕರಾಳ ದಿನ
ಬೆಂಗಳೂರು: ನೋಟು ನಿಷೇಧಕ್ಕೆ ವರ್ಷ ತುಂಬಿದ ಹಿನ್ನೆಲೆ ಯಲ್ಲಿ ವಿವಿಧ ಎಡಪಕ್ಷಗಳ ಕಾರ್ಯಕರ್ತರು ನಗರದ ಮೈಸೂರು ಬ್ಯಾಂಕ್‌ ವೃತ್ತದಲ್ಲಿ ಬುಧವಾರ “ಕರಾಳ ದಿನ’ ಆಚರಿಸುವ ಮೂಲಕ ಪ್ರತಿಭಟನೆ ನಡೆಸಿದರು. ಸಿಪಿಐ(ಎಂ), ಎಐಟಿಯುಸಿ, ಸಿಪಿಐ ಸೇರಿ ಕರಾಳ ದಿನಾಚರಣೆ ನೇತೃತ್ವ ವಹಿಸಿದ್ದ ಮುಖಂಡರು, ಇದೊಂದು ಸ್ವತಂತ್ರ ಭಾರತದ ಅತಿದೊಡ್ಡ ಹಗರಣ ಎಂದು ಆರೋಪಿಸಿದರು.
ಜೆಡಿಯು ಪ್ರತಿಭಟನೆ: ನೋಟು ನಿಷೇಧಕ್ಕೆ ವರ್ಷ ತುಂಬಿದ ಹಿನ್ನೆಲೆಯಲ್ಲಿ ಜೆಡಿಯು ಬುಧವಾರ “ದೇಶದ ಆರ್ಥಿಕತೆಯ ದುಸ್ವಪ್ನ ದಿನ’ ಆಚರಣೆ ಮೂಲಕ ಪ್ರತಿಭಟನೆ ನಡೆಸಿತು. ನಗರದ ಮೈಸೂರು ಬ್ಯಾಂಕ್‌ ವೃತ್ತದಲ್ಲಿ ಜೆಡಿಯು ರಾಜ್ಯ ಘಟಕದ ಅಧ್ಯಕ್ಷ ಡಾ.ಎಂ.ಪಿ. ನಾಡಗೌಡ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದ ಕಾರ್ಯಕರ್ತರು, ದೇಶದ ಇತಿಹಾಸದಲ್ಲಿ ಇದೊಂದು ಕರಾಳ ಅಧ್ಯಾಯ. ಇದು ದೇಶದ ಆರ್ಥಿಕತೆಗೆ ಅಪ್ಪಳಿಸಿದ ಸುನಾಮಿ ಎಂದು ಆಕ್ರೋಶ ವ್ಯಕ್ತಪಡಿಸಿದರು. 

ಪ್ರಧಾನಿ ಮೋದಿ ನೋಟು ಬ್ಯಾನ್‌ ಮಾಡಿ ಐವತ್ತು ದಿನದಲ್ಲಿ ಎಲ್ಲವನ್ನೂ ಸರಿ ಪಡಿಸುತ್ತೇನೆ, ಇಲ್ಲದಿದ್ದರೆ ನನ್ನನ್ನು ನೇಣು ಹಾಕಿ ಎಂದು ಹೇಳಿದ್ದರು. ಈಗ ಒಂದು ವರ್ಷ ಕಳೆದಿದೆ. ಕೆಲವು ಜನರು ಸತ್ತರು, ಹಲವರು ಈಗಲೂ ನರಳುತ್ತಿದ್ದಾರೆ. ನಿಮ್ಮನ್ನು ಏನು ಮಾಡಬೇಕು?
ಡಾ. ಜಿ. ಪರಮೇಶ್ವರ್‌, ಕೆಪಿಸಿಸಿ ಅಧ್ಯಕ್ಷ

ಕೇಂದ್ರ ಸರ್ಕಾರ 500, 1000 ರೂ.ನೋಟುಗಳ ಅಮಾನ್ಯ ಮಾಡಿದ ನಿರ್ಧಾರ ಮತ್ತು ಕೋಮು ಹಾಗೂ ಜಾತಿ
ಆಧಾರದಲ್ಲಿ ಸಮಾಜವನ್ನು ವಿಭಜಿಸುವ ಕ್ರಮಗಳಿಂದ ಕರ್ನಾಟಕದಲ್ಲಿ ಬಿಜೆಪಿಗೆ ಪಾಠ ಕಲಿಸಲು ಜನರು ಕಾಯುತ್ತಿದ್ದಾರೆ. 

 ●ವೇಣುಗೋಪಾಲ್‌, ರಾಜ್ಯ ಕಾಂಗ್ರೆಸ್‌ ಉಸ್ತುವಾರಿ

Advertisement

Udayavani is now on Telegram. Click here to join our channel and stay updated with the latest news.

Next