Advertisement

ನೋಟ್‌ ಬ್ಯಾನ್‌: ಮೊದಲೇ ಸಿದ್ಧತೆ, ಅರುಣ್ ಜೇಟ್ಲಿ ಸ್ಪಷ್ಟೋಕ್ತಿ

08:46 AM Feb 08, 2017 | Team Udayavani |

ಹೊಸದಿಲ್ಲಿ: ಅಪನಗದೀಕರಣ ದಿಢೀರ್‌ ಆಗಿ ತೆಗೆದುಕೊಂಡ ನಿರ್ಧಾರವಲ್ಲ, ಇದರ ಹಿಂದೆ ಸಾಕಷ್ಟು ಪೂರ್ವಸಿದ್ಧತೆಗಳಾಗಿದ್ದವು ಎಂದು ಹಣಕಾಸು ಸಚಿವ ಅರುಣ್‌ ಜೇಟ್ಲಿ ಅವರು, ರಾಜ್ಯಸಭೆಯಲ್ಲಿ ಸ್ಪಷ್ಟಪಡಿಸಿದ್ದಾರೆ. ಪ್ರಶ್ನೋತ್ತರ ಅವಧಿಯಲ್ಲಿ ಪಾಲ್ಗೊಂಡ ಅರುಣ್‌ ಜೇಟ್ಲಿ ಈ ಮಾಹಿತಿ ನೀಡಿದ್ದಾರೆ.  2016ರ ಫೆಬ್ರವರಿಯಲ್ಲೇ ಅಪನಗದೀಕರಣಕ್ಕೆ ಸಂಬಂಧಿಸಿದ ಪೂರ್ವಸಿದ್ಧತೆಗಳನ್ನು ಆರಂಭಿಸಲಾಗಿತ್ತು. ಆರ್‌ಬಿಐನ ನಿರ್ದೇಶಕ ಮಂಡಳಿ ಶಿಫಾರಸಿನ ಮೇರೆಗೆ ಕೇಂದ್ರ ಸರಕಾರ 500ರೂ. ಮತ್ತು 1000 ರೂ. ಮುಖಬೆಲೆಯ ನೋಟುಗಳನ್ನು ಅಪನಗದೀಕರಣ ಮಾಡುವ ನಿರ್ಧಾರ ತೆಗೆದುಕೊಂಡಿತು ಎಂದು ಹೇಳಿದ್ದಾರೆ.

Advertisement

ಅಪನಗದೀಕರಣ ನಿರ್ಧಾರ ಘೋಷಣೆ ಮಾಡುವ ದಿನ, ಅಂದರೆ ನವೆಂಬರ್‌ 8 ರಂದು ನಡೆದ ಸಭೆಯಲ್ಲಿ ಆರ್‌ಬಿಐ ನಿರ್ದೇಶಕರ ಮಂಡಳಿಯಲ್ಲಿರುವ 10 ನಿರ್ದೇಶಕರ ಪೈಕಿ 8 ಮಂದಿ ಭಾಗಿಯಾಗಿದ್ದರು. ಅಂದಿನ ನಿರ್ಧಾರದಂತೆ ಅಪನಗದೀಕರಣ ತೀರ್ಮಾನ ಘೋಷಣೆ ಮಾಡಲಾಯಿತು ಎಂದು ಅವರು ತಿಳಿಸಿದ್ದಾರೆ. 

ಇದಷ್ಟೇ ಅಲ್ಲ, 2016ರ ಮೇನಲ್ಲೇ 2000 ಮತ್ತು 500 ಮುಖಬೆಲೆಯ ಹೊಸ ನೋಟುಗಳ ಮುದ್ರಣ ಕಾರ್ಯದ ಸಿದ್ಧತೆಗಳು ಆರಂಭವಾಗಿದ್ದವು. ನೋಟಿನ ವಿನ್ಯಾಸ, ಸುರಕ್ಷತಾ ವಿಧಾನಗಳು ಸೇರಿದಂತೆ ಈ ವಿಚಾರಗಳನ್ನು ಆರ್‌ಬಿಐ ನೋಡಿಕೊಂಡಿತ್ತು. ಒಂದು ವೇಳೆ ನೋಟು ಅಪನಗದೀಕರಣ ನಿರ್ಧಾರ ಘೋಷಿಸಿದ ಮೇಲೆ ಯಾವುದೇ ತೊಂದರೆಯಾಗಬಾರದು ಎಂಬ ದೃಷ್ಟಿಯಿಂದ ಈ ಮುಂಜಾಗ್ರತೆ ಘೋಷಿಸಲಾಗಿತ್ತು ಎಂದು ಅರುಣ್‌ ಜೇಟ್ಲಿ ವಿವರಿಸಿದ್ದಾರೆ. 

ಆರ್‌ಬಿಐನ ಸಲಹೆ, ಶಿಫಾರಸುಗಳಿಲ್ಲದೇ ಈ ನಿರ್ಧಾರ ತೆಗೆದುಕೊಂಡಿಲ್ಲ. ಆರ್‌ಬಿಐನ ಹಿರಿಯ ಅಧಿಕಾರಿಗಳ ಜತೆ ಆಗಾಗ ಸಭೆ ಸೇರಿ ಸಾಧಕ ಬಾಧಕಗಳ ಬಗ್ಗೆ ಚರ್ಚಿಸಲಾಗುತ್ತಿತ್ತು. ವಾರಕ್ಕೆ ಒಮ್ಮೆಯಾದರೂ ಈ ಬಗ್ಗೆ ಸಭೆ ಸೇರಲಾಗುತ್ತಿತ್ತು. ಆದರೆ ಈ ಸಭೆಯಲ್ಲಿ ಏನಾಗುತ್ತಿತ್ತು ಎಂಬುದನ್ನು ಮಾತ್ರ ಭಾರಿ ರಹಸ್ಯವಾಗಿ ಇಡಲಾಗುತ್ತಿತ್ತು ಎಂದು ಜೇಟ್ಲಿ ಹೇಳಿದ್ದಾರೆ. 

ಸರಕಾರವೇ ಈ ನಿರ್ಧಾರ ತೆಗೆದುಕೊಂಡು, ಬಳಿಕ ಆರ್‌ಬಿಐಗೆ ಹೇಳಿತ್ತು ಎಂಬ ಸದಸ್ಯರ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ಜೇಟ್ಲಿ ಅವರು, ಆರ್‌ಬಿಐ ಅಧಿಕಾರಿಗಳೇ ಯೋಚಿಸಿ ಈ ತೀರ್ಮಾನ ತೆಗೆದುಕೊಂಡು ಸರಕಾರಕ್ಕೆ ಶಿಫಾರಸು ಮಾಡಿದ್ದರು ಎಂದು ತಿಳಿಸಿದ್ದಾರೆ. ಆರ್‌ಬಿಐನಲ್ಲಿ ಸದ್ಯ 10 ನಿರ್ದೇಶಕರಿದ್ದಾರೆ. ಇವರಲ್ಲಿ 8 ಮಂದಿ ಮಾತ್ರ ನ.8ರ ದಿನ ನಡೆದ ಸಭೆಯಲ್ಲಿ ಪಾಲ್ಗೊಂಡಿದ್ದರು. ಅಲ್ಲದೆ ಕೆಲ ಸ್ಥಾನಗಳು ಇನ್ನೂ ಖಾಲಿ ಇವೆ. ಅವುಗಳನ್ನು ಭರ್ತಿ ಮಾಡಬೇಕಿದೆ ಎಂದೂ ಅವರು ಹೇಳಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next