ನವದೆಹಲಿ:ರಾಜ್ಯಸಭಾ ಚುನಾವಣೆಯಲ್ಲಿ ನೋಟಾ ಚಲಾವಣೆಗೆ ಅವಕಾಶ ಇಲ್ಲ ಎಂದು ಸುಪ್ರೀಂಕೋರ್ಟ್ ಮಂಗಳವಾರ ಆದೇಶ ನೀಡುವ ಮೂಲಕ ಕೇಂದ್ರ ಚುನಾವಣಾ ಆಯೋಗದ ಪ್ರಸ್ತಾವನೆಯನ್ನು ತಳ್ಳಿಹಾಕಿದೆ.
ರಾಜ್ಯಸಭಾ ಚುನಾವಣೆಯ ಬ್ಯಾಲೆಟ್ ಪೇಪರ್ ನಲ್ಲಿ ನೋಟಾ ಆಯ್ಕೆಗಾಗಿ ಅನುಮತಿ ನೀಡಿರುವ ಚುನಾವಣಾ ಆಯೋಗದ ನಿರ್ಧಾರಕ್ಕೆ ಸುಪ್ರೀಂಕೋರ್ಟ್ ಮುಖ್ಯನ್ಯಾಯಮೂರ್ತಿ ದೀಪಕ್ ಮಿಶ್ರಾ, ಜಸ್ಟೀಸ್ ಎಎಂ ಖಾನ್ ವಿಲ್ಕರ್ ಮತ್ತು ಜಸ್ಟೀಸ್ ಡಿವೈ ಚಂದ್ರಚೂಡ್ ಅವರ ತ್ರಿಸದಸ್ಯ ಪೀಠ ಆಯೋಗದ ನಿಲುವನ್ನು ಪ್ರಶ್ನಿಸಿ, ನೇರ(ಲೋಕಸಭಾ, ವಿಧಾನಸಭಾ, ಸ್ಥಳೀಯ) ಚುನಾವಣೆಯಲ್ಲಿ ಮತದಾರರಿಗೆ ನೀಡುವ ಹಕ್ಕು ನೋಟಾ ಆಗಿದೆ ಎಂದು ವಿಶ್ಲೇಷಿಸಿದೆ.
ರಾಜ್ಯಸಭಾ ಚುನಾವಣೆಯಲ್ಲಿ ನೋಟಾಗೆ ಅವಕಾಶ ಇಲ್ಲ, ಅಲ್ಲದೇ ನೋಟಾವನ್ನು ನೇರ ಚುನಾವಣೆಯಲ್ಲಿ ಮಾತ್ರ ಬಳಕೆ ಮಾಡಬೇಕು ಎಂದು ಸ್ಪಷ್ಟಪಡಿಸಿದೆ.
ರಾಜ್ಯಸಭಾ ಚುನಾವಣೆಯಲ್ಲಿ ನೋಟಾ ಬಳಕೆಗೆ ಸಂಬಂಧಿಸಿದಂತೆ ಚುನಾವಣಾ ಆಯೋಗದ ಪ್ರಕಟಣೆ ಪ್ರಶ್ನಿಸಿ ಕಾಂಗ್ರೆಸ್ ಮುಖಂಡ ಶೈಲಶ್ ಮನುಭಾಯಿ ಪಾರ್ಮಾರ್ ಸುಪ್ರೀಂಕೋರ್ಟ್ ನಲ್ಲಿ ಪ್ರಶ್ನಿಸಿದ್ದರು. ಅರ್ಜಿಯ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್ ಈ ತೀರ್ಪು ನೀಡಿದೆ.
ರಾಜ್ಯಸಭಾ ಚುನಾವಣೆಯಲ್ಲಿ ನೋಟಾಗೆ ಅವಕಾಶ ಕೊಟ್ಟರೆ, ಕುದುರೆ ವ್ಯಾಪಾರ ಮತ್ತು ಭ್ರಷ್ಟಾಚಾರಕ್ಕೆ ಉತ್ತೇಜನ ಕೊಟ್ಟಂತೆ ಆಗಲಿದೆ ಎಂದು ಗುಜರಾತ್ ಕಾಂಗ್ರೆಸ್ ಮುಖಂಡ ಶೈಲೇಶ್ ಆರೋಪಿಸಿದ್ದರು.