ಹರಾರೆ: ಟಿ20 ವಿಶ್ವಕಪ್ ಕ್ರಿಕೆಟ್‌ನಲ್ಲಿ ಪಾಕಿ ಸ್ಥಾನವನ್ನು ಒಂದು ರನ್‌ನಿಂದ ಮಣಿಸಿದ ಬಳಿಕ ಜಿಂಬಾಬ್ವೆಯ ಸಂಭ್ರಮಕ್ಕೆ ಮೇರೆ ಇಲ್ಲ. ಅದು ವಿಶ್ವಕಪ್ ಗೆದ್ದಷ್ಟೇ ಖುಷಿಯಲ್ಲಿ ಕುಣಿದು ಕುಪ್ಪಳಿಸಿದೆ. ಆದರೆ ಜಿಂಬಾಬ್ವೆಯ ಈ ಸಡಗರದ ವೇಳೆ ನಾವು ಒಬ್ಬರನ್ನು ಸ್ಮರಿಸಲು ಮರೆತಿದ್ದೇವೆ. ಅವರು ಭಾರತದ ಮಾಜಿ ಆರಂಭಕಾರ ಲಾಲ್‌ಚಂದ್ ರಜಪೂತ್!
“ಅದು 2018ರ ಜುಲೈ 13. ಜಿಂಬಾಬ್ವೆ ಕ್ರಿಕೆಟ್ ಕೋಚ್ ಆಗಿ ನಾನು ಅಧಿಕಾರ ಸ್ವೀಕರಿಸಿದ ಮರುದಿನವೇ ತಂಡದಲ್ಲಿ ಬಂಡಾಯ ಕಂಡುಬಂದಿತ್ತು. ಪಂದ್ಯದ ಶುಲ್ಕ ವಿಚಾರದಲ್ಲಿ ಸೀನ್ ಇರ್ವಿನ್, ಕ್ರೆಗ್ ವಿಲಿಯಮ್ಸ್, ಸಿಕಂದರ್ ರಝ, ಬ್ರೆಂಡನ್ ಟಯ್ಲರ್ ಮೊದ ಲಾದವರೆಲ್ಲ ಪಾಕಿಸ್ಥಾನ ವಿರುದ್ಧದ ಸರಣಿಯಿಂದ ಹಿಂದೆ ಸರಿದಿದ್ದರು. ಆದರೆ ಸರಣಿಯನ್ನು ರದ್ದುಗೊಳಿ ಸಲು ಸಾಧ್ಯವಿಲ್ಲ ಎಂಬು ದಾಗಿ ಮಂಡಳಿಯ ಎಂಡಿ ಗೀವ್‌ಮೋರ್ ಮಕೋನಿ ಸ್ಪಷ್ಟಪಡಿಸಿದ್ದರು…’ ರಜಪೂತ್ ಪಿಟಿಐ ಜತೆ ಅಂದಿನ ಜಿಂಬಾಬ್ವೆ ಕ್ರಿಕೆಟ್ ಸ್ಥಿತಿಯನ್ನು ವಿವರಿಸುತ್ತ ಹೋಗುತ್ತಿದ್ದರು.
“ಪಾಕ್ ವಿರುದ್ಧ ಮೊದಲ ಪಂದ್ಯದಲ್ಲಿ 107ಕ್ಕೆ, ಅಂತಿಮ ಪಂದ್ಯದಲ್ಲಿ 67ಕ್ಕೆ ತಂಡ ಆಲೌಟ್ ಆಯಿತು. 2019ರ ವಿಶ್ವಕಪ್‌ಗೆ ಅರ್ಹತೆಯೇ ಸಿಗಲಿಲ್ಲ…’ ರಜಪೂತ್ ಮುಂದುವರಿಸಿದರು.
“ಆಸ್ಟ್ರೇಲಿಯದಲ್ಲಿ ನಡೆಯುವ ಟಿ20 ವಿಶ್ವಕಪ್‌ಗೆ ಜಿಂಬಾಬ್ವೆ ಅರ್ಹತೆ ಪಡೆಯಬೇಕೆಂಬುದು ನನ್ನ ಹಠವಾಗಿತ್ತು. ಕ್ವಾಲಿಫೈಯರ್ನಲ್ಲಿ ತಂಡ ಯಶಸ್ಸು ಸಾಧಿಸಿ ಅರ್ಹತೆ ಪಡೆದೇ ಬಿಟ್ಟಿತು. ಈಗ ಪಾಕಿಸ್ಥಾನವನ್ನೇ ಮಣಿಸಿ ಮೆರೆದಿದೆ’ ಎನ್ನುವಾಗ ರಜಪೂತ್ ಕಣ್ಣಲ್ಲೇನೋ ಮಿಂಚು. ಭಾರತದ 2007ರ ಟಿ20 ವಿಶ್ವ ಕಪ್ ಗೆಲುವಿನ ವೇಳೆಯೂ ರಜಪೂತ್ ಟೀಮ್ ಇಂಡಿಯಾದ ಕೋಚ್ ಆಗಿದ್ದರು ಎಂಬುದನ್ನು ಮರೆಯುವಂತಿಲ್ಲ.
ವಿಶ್ವಕಪ್ ಕ್ವಾಲಿಫೈಯರ್ ತನಕ ಲಾಲ್‌ಚಂದ್ ರಜಪೂತ್ ಜಿಂಬಾಬ್ವೆ ತಂಡದ ಕೋಚ್ ಆಗಿದ್ದರು.
ಹೀಗಾಗಿ ಜಿಂಬಾಬ್ವೆ ತಂಡವನ್ನು “ರಜಪೂತ್ ವಾರಿಯರ್’ ಎಂದು ಕರೆದರೆ ತಪ್ಪಿಲ್ಲ. ಈಗ ಡೇವಿಡ್ ಹಾಟನ್ ಜಿಂಬಾಬ್ವೆ ಕೋಚ್ ಆಗಿದ್ದಾರೆ.