ಹೊಸದಿಲ್ಲಿ: ಕುತ್ಸಿತ ಚೀನಕ್ಕೆ ಭಾರತದ ವಿರುದ್ಧ ಪದೇ ಪದೆ ಕುಟುಕುವುದು ಅಭ್ಯಾಸ. ಅಲ್ಲಿನ ಸರಕಾರಿ ಮಾಧ್ಯಮಗಳಲ್ಲಿ ಪ್ರಕಟ ಗೊಂಡಿದ್ದ ಮಾಹಿತಿ ಪ್ರಕಾರ ಭಾರತದ ಜತೆಗೆ ಹೊಂದಿಕೊಂಡಿರುವ ಗಡಿ ಪ್ರದೇಶಗಳಲ್ಲಿ ಯಂತ್ರಮಾನವ ಯೋಧರನ್ನು (ರೋಬೋಟಿಕ್ ಸೋಲ್ಜರ್) ನಿಯೋಜಿಸಲಾಗಿದೆ ಎಂದು ಉಲ್ಲೇಖಿಸಲಾಗಿತ್ತು.
ಆದರೆ, ದೇಶದ ವೀರ ಯೋಧರು ಅದನ್ನು ಸುಳ್ಳು ಎಂದು ಸಾಬೀತು ಮಾಡಿದ್ದಾರೆ. ಲಡಾಖ್‌ಗೆ ಹೊಂದಿಕೊಂಡಂತೆ ಇರುವ ವಾಸ್ತವಿಕ ಗಡಿ ನಿಯಂತ್ರಣ ರೇಖೆ (ಎಲ್‌ಎಸಿ) ನಿಖರವಾಗಿ ತಪಾಸಣೆ ಮಾಡಿದ ಬಳಿಕ ಯಂತ್ರಮಾನವ ಯೋಧರನ್ನು ನಿಯೋಜನೆ ಮಾಡಿರುವ ಅಂಶ ಖಚಿತಪಟ್ಟಿಲ್ಲ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.
2020ರಲ್ಲಿ ಗಾಲ್ವನ್ ಗಲಾಟೆಯ ಬಳಿಕ ಎರಡೂ ದೇಶಗಳ ಯೋಧರಿಗೆ ಮೈನಸ್ 20 ಡಿಗ್ರಿ ಸೆಲ್ಸಿಯಸ್‌ನಲ್ಲಿ ಕಾವಲು ಕಾಯುವ ಸ್ಥಿತಿ ಉಂಟಾಗಿದೆ. ಎಲ್‌ಎಸಿಯಲ್ಲಿ ಚೀನ ಯೋಧರು, ದೇಶದ ವಿರುದ್ಧ ಚಿತಾವಣೆ ಮಾಡುತ್ತಿದ್ದರೂ ಅಗತ್ಯ ಬಿದ್ದರೆ, ಅವರಿಗೆ ಸಹಾಯ ಮತ್ತು ನೆರವಿನ ಹಸ್ತವನ್ನು ನೀಡುವ ಬಗ್ಗೆ ಭಾರತೀಯ ಯೋಧರು ಮಾತನಾಡಿದ್ದಾರೆ.
ಇದನ್ನೂ ಓದಿ:ಪಾಕ್ ಸುಪ್ರೀಂಕೋರ್ಟ್‌ಗೆ ಮೊದಲ ಮಹಿಳಾ ಜಡ್ಜ್
12ರಂದು ಮಾತುಕತೆ?: ಈ ನಡುವೆ, ಭಾರತ ಮತ್ತು ಚೀನ ನಡುವೆ ಗಡಿ ತಕರಾರು ಬಗೆಹರಿಸುವ ನಿಟ್ಟಿನಲ್ಲಿ ಜ.12ರಂದು ಕಮಾಂಡರ್‌ಗಳ ಮಟ್ಟದ ಮಾತುಕತೆ ನಡೆಯುವ ಸಾಧ್ಯತೆ ಇದೆ. ಇದು 14ನೇ ಸುತ್ತಿನ ಮಾತುಕತೆಯಾಗಲಿದ್ದು, ಇದುವರೆಗೆ ಬಗೆಹರಿಯದ ವಿಚಾರಗಳ ಬಗ್ಗೆ ಈ ಸಂದರ್ಭದಲ್ಲಿ ಚರ್ಚಿಸಲಾಗುತ್ತದೆ.