ವಿಜಯಪುರ: ಸ್ವಾತಂತ್ರ್ಯ ಭಾರತದ ಪ್ರಸ್ತುತ ಸಂದರ್ಭದಲ್ಲಿ ಮತೀಯ ಗಲಭೆಗಳಿಂದ ಸಮಾಜದಲ್ಲಿ ಶಾಂತಿ-ನೆಮ್ಮದಿ ಹಾಳಾಗಿದೆ. ಆದರೆ ಸ್ವಾತಂತ್ರ್ಯ ಸಂಗ್ರಾಮದ ಸಂದರ್ಭದಲ್ಲಿ ದೇಶದ ಸ್ವಾತಂತ್ರ್ಯಕ್ಕಾಗಿ ಪಂ| ರಾಮ್‌ಪ್ರಸಾದ್ ಬಿಸ್ಮಿಲ್ ಹಾಗೂ ಅಶಾ ಕುಲ್ಲಾ ಖಾನ್ ಅವರು ಭಾರತದ ಸ್ವಾತಂತ್ರ್ಯ ಸಂಗ್ರಾಮದ ಕೋಮು ಸೌಹಾರ್ದತೆಯ ಸಂಕೇತವಾಗಿದ್ದಾರೆ ಎಂದು ಎಐಡಿವೈಒ ರಾಜ್ಯ ಕಾರ್ಯದರ್ಶಿ ಸಿದ್ದಲಿಂಗ ಬಾಗೇವಾಡಿ ಬಣ್ಣಿಸಿದರು.
ರವಿವಾರ ನಗರದ ಎಐಡಿವೈಒ ಕಚೇರಿಯಲ್ಲಿ ನಡೆದ ಸ್ವಾತಂತ್ರ್ಯ ಸಂಗ್ರಾಮದ ಕ್ರಾಂತಿವೀರರಾದ ಪಂ| ರಾಮಪ್ರಸಾದ್ ಬಿಸ್ಮಿಲ್ ಹಾಗೂ ಅಶಾಕುಲ್ಲಾ ಖಾನ್ ಅವರ 94ನೇ ಹುತಾತ್ಮ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಪ್ರಭಲ ಕ್ರಾಂತಿಕಾರಿ ತಂಡವನ್ನು ಕಟ್ಟಿ ಸ್ವಾತಂತ್ರ್ಯ ಸಂಗ್ರಾಮದ ಸಂಧಾನಾತೀತ ಪಂಥವನ್ನು ಮುನ್ನಡೆಸಿದ ಮಹಾತನ್ ಕ್ರಾಂತಿ ವೀರರಾಗಿದ್ದರು ಎಂದರು.
ಕಾಕೋರಿ ರೈಲು ದರೋಡೆ ಪ್ರಕರಣದಲ್ಲಿ ಬ್ರಿಟಿಷ್ ರಿಂದ ಗಲ್ಲು ಶಿಕ್ಷೆಗೆ ಗುರಿಯಾದರು. ದೇಶಕ್ಕಾಗಿ ಧರ್ಮಾತೀತ ಹೋರಾಟ ನಡೆಸಿದ ಈ ಸೌಹಾರ್ದ ಸ್ನೇಹ ಇಂದಿನ ಯುವಕರಿಗೆ ಆದರ್ಶವಾಗಬೇಕು. ರಾಮಪ್ರಸಾದಜಿ ಕೇವಲ ಹೋರಾಟಗಾರರಲ್ಲದೇ ಕವಿ, ಲೇಖಕರೂ ಆಗಿದ್ದರು. ಇವರ ಪಾಂಡಿತ್ಯ, ಸಾಹಿತ್ಯವನ್ನು ಗಮನಿಸಿದ ಮೌಲ್ವಿ ಒಬ್ಬರು ಇವರಿಗೆ ಬಿಸ್ಮಿಲ್ಲಾ ಎಂಬ ಬಿರುದನ್ನು ನೀಡಿದರು ಎಂದರು.
ಇನ್ನು ಪಂ| ರಾಮಪ್ರಸಾದಜಿ ಅವರು ಅಶಾಕುಲ್ಲಾ ಅವರಿಗೆ ಕ್ರಾಂತಿಕಾರಿ ಸ್ವಾತಂತ್ರ್ಯ ಹೋರಾಟದ ತರಬೇತಿ ನೀಡಿದ್ದರು. ಹಿಂದೂ ಯುವಕರಿಗಿಂತ ಹೆಚ್ಚು ತ್ಯಾಗ-ಬಲಿದಾನವನ್ನು ಒಬ್ಬ ಮುಸ್ಲಿಂ ಯುವಕನೂ ಮಾಡಬಲ್ಲ ಎಂಬುದನ್ನು ಆಗಲೇ ಸಾಬೀತು ಮಾಡಿದ ಮಹಾತ್ಮರಿವರು ಎಂದರು.
ಅಶಾ ಕುಲ್ಲಾಜೀ ಅವರು ಮಹಾನ್ ಕ್ರಾಂತಿಕಾರಿನಾಗಿ ದೇಶದ ಸ್ವಾತಂತ್ರ್ಯಕ್ಕಾಗಿ ತಮ್ಮನ್ನೇ ಸಮರ್ಪಿಸಿಕೊಂಡು, ಬಲಿದಾನ ಮಾಡುವ ಮೂಲಕ ತಮ್ಮ ದೇಶಪ್ರೇಮದ ಜವಾಬ್ದಾರಿ ನಿರ್ವಹಿಸಿದರು. ಇವರ ಹಿಂದೂಸ್ಥಾನ್ ರಿಪಬ್ಲಿಕನ್ ಆರ್ಮಿ ಸಂಘಟನೆಗೆ ಆಕರ್ಷಿತರಾದ ಭಗತ್ ಸಿಂಗ್, ಚಂದ್ರಶೇಖರ್ ಆಜಾದ್ ಇವರ ಕ್ರಾಂತಿಕಾರಿ ಹೋರಾಟವನ್ನು ಮುನ್ನಡೆಸಿದರು ಎಂದು ವಿಶ್ಲೇಷಿಸಿದರು.
ಕ್ರಾಂತಿವೀರರು ಭಾರತವನ್ನು ಬ್ರಿಟಿಷ್‌ರಿಂದ ಮಾತ್ರವಲ್ಲ ಎಲ್ಲ ರೀತಿಯ ಮಾನವನಿಂದ ಮಾನವನ ಶೋಷಣೆಯನ್ನೇ ಕೊನೆಗೊಳಿಸುವ ಕನಸು ಕಂಡವರು. ಆದರೆ ಆ ಕನಸು ಸ್ವಾತಂತ್ರ್ಯ ಭಾರತದಲ್ಲೂ ನನಸಾಗಿಲ್ಲ ಎಂಬುದು ವಿಷಾದನೀಯ ಸಂಗತಿ ಎಂದರು.
ಸ್ವಾತಂತ್ರ್ಯ ಭಾರತದಲ್ಲಿ ಪ್ರಜಾಪ್ರಭುತ್ವದ ಹೆಸರಿನಲ್ಲಿ ದೇಶವನ್ನು ಆಳುತ್ತಿರುವ ರಾಜಕೀಯ ನಾಯಕರು ತಮ್ಮ ರಾಜಕೀಯ ಸ್ವಾರ್ಥಕ್ಕಾಗಿ ಕೋಮುವಾದ ಸೃಷ್ಟಿ ಮಾಡುತ್ತಿದ್ದಾರೆ. ಇದರಿಂದಾಗಿ ದೇಶದಲ್ಲಿ ಭಾವೈಕ್ಯದಿಂದ ಬದುಕುತ್ತಿದ್ದ ಜನರು ಇದೀಗ ಜನಾಂಗ ವಿರೋಧಿ ದ್ವೇಷಗಳಿಗೆ ಸಿಲುಕುತ್ತಿದ್ದೇವೆ. ಇನ್ನಾದರೂ ಇಂಥ ಹುನ್ನಾರಕ್ಕೆ ದೇಶದ ಜನರು ಬಲಿಯಾಗದೇ ಇರೋಣ ಕ್ರಾಂತಿಕಾರಿಗಳ ಕನಸು ನನಸು ಮಾಡುವ ಹೋರಾಟಕ್ಕೆ ಮುಂದಾಗಬೇಕು ಎಂದು ಮನವಿ ಮಾಡಿದರು.
ಎಐಡಿವೈಒ ಜಿಲ್ಲಾಧ್ಯಕ್ಷ ಶ್ರೀಕಾಂತ ಕೊಂಡಗೂಳಿ, ಕಾರ್ಯದರ್ಶಿ ಸಿದ್ದು ಹಿರೇಮಠ, ಉಪಾಧ್ಯಕ್ಷ ಅಶೋಕ ದೇಸಾಯಿ, ಅನುರಾಗ ಸಾಳುಂಕೆ, ಕುಮಾರ ರಾಠೊಡ, ಕಾಜಪ್ಪ, ಮುತ್ತು ಇದ್ದರು.