Advertisement

ಕೊರೊನಾ ಆತಂಕ ಬೇಡ

04:22 PM Mar 06, 2020 | Suhan S |

ಕೊಪ್ಪಳ: ಜಿಲ್ಲೆಯಲ್ಲಿ ಇದುವರೆಗೂ ಯಾವುದೇ ಕೊರೊನಾ ಪೀಡಿತ ಪ್ರಕರಣ ಪತ್ತೆಯಾಗಿಲ್ಲ. ಆದ್ದರಿಂದ ಸಾರ್ವಜನಿಕರು ಆತಂಕ ಪಡದೆ, ಕರೋನಾ ವೈರಸ್‌ ಕುರಿತು ಮುನ್ನೆಚ್ಚರಿಕಾ ಕ್ರಮ ಅನುಸರಿಸಬೇಕು ಎಂದು ಜಿಲ್ಲಾಧಿಕಾರಿ ಪಿ. ಸುನೀಲ್‌ ಕುಮಾರ್‌ ಹೇಳಿದರು.

Advertisement

ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಕೊರೊನಾ ವೈರಸ್‌ ಪ್ರಕರಣ ತಡೆಗಟ್ಟಲು ಕೈಗೊಳ್ಳಬೇಕಾದ ಮುನ್ನೆಚ್ಚರಿಕಾ ಕ್ರಮಗಳ ಕುರಿತ ಸಭೆಯಲ್ಲಿ ಅವರು ಮಾತನಾಡಿದರು. ಜಿಲ್ಲೆಯಲ್ಲಿ ಇದುವರೆಗೂ ಕೊರೊನಾ ಪ್ರಕರಣ ಕುರಿತು ವರದಿಯಾಗಿಲ್ಲ. ಕೊಪ್ಪಳ ತಾಲೂಕಿನ ಹೊಸಳ್ಳಿಯಲ್ಲಿ ಇರಾನ್‌ನಿಂದ ಬಂದ ಸ್ಥಳೀಯ ನಾಗರಿಕರ ಕುರಿತು ಹರಡಿರುವ ಸುದ್ದಿಗಳು ಕೇವಲ ವದಂತಿ. ವೈದ್ಯಕೀಯ ಆಧಾರದಲ್ಲಿ ಸಾಬೀತುಗೊಂಡಿಲ್ಲ. ಈ ವಿಚಾರಗಳು ಗ್ರಾಮಸ್ಥರಲ್ಲಿ ಹಾಗೂ ಜಿಲ್ಲೆಯ ನಾಗರಿಕರಲ್ಲಿ ಹೆಚ್ಚು ಆತಂಕ ಸೃಷ್ಟಿಸಿವೆ. ಆದ್ದರಿಂದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಆ ಗ್ರಾಮಕ್ಕೆ ತೆರಳಿ ಕೊರೊನಾ ಕುರಿತ ವಿವರ ತಿಳಿಸುವ ಜಾಗೃತಿ ಕಾರ್ಯಕ್ರಮ ಆಯೋಜಿಸಬೇಕು. ಗ್ರಾಮೀಣ ಭಾಗದಲ್ಲಿ ಅವರಿಗೆ ಅರ್ಥವಾಗುವ ರೀತಿಯಲ್ಲಿ ತಿಳಿವಳಿಕೆ ನೀಡಿ ಅವರಲ್ಲಿನ ಭಯ, ಆತಂಕಗಳನ್ನು ದೂರಮಾಡಬೇಕು. ಗ್ರಾಮಗಳಲ್ಲಿ ಆರೋಗ್ಯ ಇಲಾಖೆ ಅಧಿಕಾರಿಗಳು ತೆರಳಿ ಗ್ರಾಮಸ್ಥರಲ್ಲಿ ಜಾಗೃತಿ ಮೂಡಿಸಬೇಕು ಎಂದರು.

ಜಿಪಂ ಸಿಇಒ ರಘುನಂದನ್‌ ಮೂರ್ತಿ ಮಾತನಾಡಿ, ಕೊರೊನಾ ಕುರಿತು ಆಶಾ ಕಾರ್ಯಕರ್ತೆಯರಿಗೆ ಜಾಗೃತಿ ಮೂಡಿಸಿ. ಅವರು ಗ್ರಾಮಗಳಲ್ಲಿ ಹೆಚ್ಚು ಕ್ರಿಯಾಶೀಲವಾಗಿರುವುದರಿಂದ ಅವರ ಮೂಲಕ ಗ್ರಾಮಸ್ಥರಲ್ಲಿ ಕರೋನಾ ಕುರಿತು ತಿಳಿವಳಿಕೆ ಮೂಡಿಸಲು ಕ್ರಮ ಕೈಗೊಳ್ಳಿ ಎಂದರು.

ಜಿಲ್ಲಾ ಸರ್ವೇಕ್ಷಣಾ ಅಧಿಕಾರಿ ಡಾ| ಪ್ರಕಾಶ ಮಾತನಾಡಿ, ಸಾಧಾರಣ ಜ್ವರ, ಕೆಮ್ಮು, ಶೀತ, ತಲೆನೋವು, ಉಸಿರಾಟದ ತೊಂದರೆ, ಬೇಧಿ ಇವುಗಳು ಕೊರೊನಾದ ಲಕ್ಷಣಗಳಾಗಿವೆ. ಸೋಂಕಿತ ವ್ಯಕ್ತಿಯು ಸೀನಿದಾಗ, ಕೆಮ್ಮಿದಾಗ, ಹಸ್ತಲಾಘವ ಮಾಡಿದಾಗ,

ಸೋಂಕಿತ ವ್ಯಕ್ತಿ ಬಳಸಿದ ವಸ್ತುಗಳನ್ನು ಮುಟ್ಟುವುದರಿಂದ, ಸೋಂಕಿತ ವ್ಯಕ್ತಿಯ ಕೈ, ಕಣ್ಣು, ಮೂಗು, ಬಾಯಿಯನ್ನು ಮುಟ್ಟುವುದರಿಂದ ಒಬ್ಬರಿಂದ ಇನ್ನೊಬ್ಬರಿಗೆ ಹರಡುತ್ತದೆ. ಇಂತಹ ಲಕ್ಷಣಗಳು ಕಾಣಿಸಿದಾಗ ತಮ್ಮ ಸಮೀಪದ ಆಸ್ಪತ್ರೆಗಳಲ್ಲಿ ವೈದ್ಯರಿಂದ ಪರೀಕ್ಷೆ ಮಾಡಿಸಿಕೊಂಡು ಚಿಕಿತ್ಸೆ ಪಡೆಯಬೇಕು. ಸೋಂಕಿತ ವ್ಯಕ್ತಿಯಿಂದ ದೂರವಿರಬೇಕು. ಮೂರು ಪದರಿನ (ಎನ್‌-95) ಮಾಸ್ಕ್ನ್ನು ಬಳಸಬೇಕು. ವೈಯಕ್ತಿಕ ಸ್ವಚ್ಛತೆ ಕಾಪಾಡಿಕೊಳ್ಳಬೇಕು. ಆಗಾಗ ಕೈಗಳನ್ನು ಸಾಬೂನಿನಿಂದ ತೊಳೆದುಕೊಳ್ಳಬೇಕು ಎಂದರು.

Advertisement

ಕೆಮ್ಮುವಾಗ, ಸೀನುವಾಗ ಮಾಸ್ಕ್ ಅಥವಾ ಕೈವಸ್ತ್ರವನ್ನು ಕಡ್ಡಾಯವಾಗಿ ಬಳಸಬೇಕು. ಮಾಂಸ, ಮೊಟ್ಟೆ ಇತ್ಯಾದಿಗಳನ್ನು ಚೆನ್ನಾಗಿ ಬೇಯಿಸಿ ಉಪಯೋಗಿಸಬೇಕು. ಅಸುರಕ್ಷಿತವಲ್ಲದ ಕಾಡುಪ್ರಾಣಿ ಅಥವಾ ಸಾಕುಪ್ರಾಣಿಗಳನ್ನು ಮುಟ್ಟಬಾರದು ಎಂದರು. ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ| ಲಿಂಗರಾಜು ಟಿ. ಮಾತನಾಡಿ, ಸೋಂಕಿತರ ಚಿಕಿತ್ಸೆಗೆಂದು ಜಿಲ್ಲೆಯ ವಿವಿಧೆಡೆ ಪ್ರತ್ಯೇಕ ವಾರ್ಡ್‌ ಗಳನ್ನು ತೆರೆಯಲಾಗಿದ್ದು, ಕೊಪ್ಪಳ ಜಿಲ್ಲಾ ಆಸ್ಪತ್ರೆಯಲ್ಲಿ 14, ಗಂಗಾವತಿ ತಾಲೂಕು ಆಸ್ಪತ್ರೆಯಲ್ಲಿ 4, ಕುಷ್ಟಗಿ ತಾಲೂಕು ಆಸ್ಪತ್ರೆಯಲ್ಲಿ 3, ಯಲಬುರ್ಗಾದಲ್ಲಿ 2 ಹಾಸಿಗೆಗಳುಳ್ಳ ಪ್ರತ್ಯೇಕ ವಾರ್ಡ್‌ ತೆರೆಯಲಾಗಿದೆ. ಹೆಚ್ಚಿನ ಮಾಹಿತಿಗಾಗಿ ಆರೋಗ್ಯ ಇಲಾಖೆಯ ಉಚಿತ ಆರೋಗ್ಯ ಸಹಾಯವಾಣಿ 104ಕ್ಕೆ ಕರೆ ಮಾಡಬಹುದು ಎಂದು ತಿಳಿಸಿದರು.

ಸಭೆಯಲ್ಲಿ ಎಸ್‌ಪಿ ಜಿ. ಸಂಗೀತಾ, ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಸಿದ್ದರಾಮೇಶ್ವರ, ಜಿಲ್ಲಾ ಶಸ್ತ್ರಚಿಕಿತ್ಸಕ ಎಸ್‌.ಬಿ. ದಾನರೆಡ್ಡಿ, ಕೃಷಿ ಇಲಾಖೆಯ ಜಂಟಿ ನಿರ್ದೇಶಕಿ ಶಬಾನಾ ಶೇಖ್‌, ಜಿಲ್ಲಾ ಕ್ಷಯ ರೋಗ ನಿಯಂತ್ರಣಾಧಿಕಾರಿ ಎಂ.ಜಿ. ಮಹೇಶ ಸೇರಿದಂತೆ ವಿವಿಧ ಇಲಾಖೆಗಳ ಜಿಲ್ಲಾಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.

ಕೊರೊನಾ ವದಂತಿ : ಇಲ್ಲಿನ ತಾಲೂಕು ಆಸ್ಪತ್ರೆಯಲ್ಲಿ ನ್ಯೂಮೋನಿಯಾದಿಂದ ಬಳಲುತ್ತಿದ್ದ ಬಾಲಕಿ ಚಿಕಿತ್ಸೆ ಪಡೆಯುತ್ತಿದ್ದು, ಬಾಲಕಿಗೆ ಕೊರೊನಾ ವೈರಸ್‌ ತಗುಲಿದೆ ಎಂಬ ವದಂತಿಗೆ ಕಾರಣವಾಯಿತು. ಬಾಲಕಿ ನ್ಯೂಮೋನಿಯಾದಿಂದ ಬಳಲುತ್ತಿದ್ದು, ಸ್ಥಳೀಯ ಸರ್ಕಾರಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಳು. ಬಾಲಕಿಗೆ ಶಂಕಿತ ಕೊರೊನಾ ವೈರಸ್‌ ಇದೆ ಎಂದು ವದಂತಿ ಹರಡಿತ್ತು. ಈ ಕುರಿತು ತಾಲೂಕು ವೈದ್ಯಾಧಿಕಾರಿ ಡಾ| ಆನಂದ ಗೋಟೂರು, ಬಾಲಕಿಗೆ ಕರೋನಾ ವೈರಸ್‌ ಇಲ್ಲ. ನ್ಯೂಮೋನಿಯಾ ಇದೆ. ಅದಕ್ಕೆ ಚಿಕಿತ್ಸೆ ನೀಡಲಾಗುತ್ತಿದ್ದು, ಗುಣಮುಖಳಾಗುತ್ತಿದ್ದಾಳೆಂದು ಸ್ಪಷ್ಟಪಡಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next