ದಾವಣಗೆರೆ: ಕೇಂದ್ರ ಸರ್ಕಾರ ಜನ ವಿರೋಧಿ ನೀತಿ ಅನುಸರಿಸುತ್ತಿದೆ ಎಂದು ಆರೋಪಿಸಿ ಸಿಪಿಐ(ಎಂ) ಕಾರ್ಯಕರ್ತರು ಗುರುವಾರ ತಹಶೀಲ್ದಾರ್ ಕಚೇರಿ ಹೊರ ಆವರಣದಲ್ಲಿ ಧರಣಿ ನಡೆಸಿದರು. ದೇಶದ ಎಲ್ಲಾ ಜನತೆಗೆ ಒಳ್ಳೆಯ ದಿನ… ಬರಲಿದೆ ಎಂಬ ಹೇಳಿಕೆಯೊಂದಿಗೆ ಅಧಿಕಾರಕ್ಕೆ ಬಂದಿರುವ ಬಿಜೆಪಿ ನೇತೃತ್ವದ ಸರ್ಕಾರ 1 ಸಾವಿರ ದಿನ ಪೂರೈಸಿದ್ದರೂ ದುಡಿಯುವ ವರ್ಗದ ಕೋಟ್ಯಂತರ ಜನಕ್ಕೆ ಒಳ್ಳೆಯ ದಿನಗಳು ಬಂದಿಲ್ಲ.
ಚುನಾವಣಾ ಪೂರ್ವದಲ್ಲಿ ನೀಡಿದ್ದ ಭರವಸೆ ಈಡೇರಿಸುವಲ್ಲಿ ಸಂಪೂರ್ಣ ವಿಫಲವಾಗಿರುವ ಕೇಂದ್ರ ಸರ್ಕಾರ ಜನ, ಕಾರ್ಮಿಕ, ರೈತ ವಿರೋಧಿ ನೀತಿ ಅನುಸರಿಸುತ್ತಿದೆ ಎಂದು ಧರಣಿ ನಿರತರು ಆಕ್ರೋಶ ವ್ಯಕ್ತಪಡಿಸಿದರು. ವಿದೇಶಿ ಬ್ಯಾಂಕ್‌ನಲ್ಲಿರುವ ಕಪ್ಪುಹಣ ತಂದು, ಪ್ರತಿಯೊಬ್ಬರ ಖಾತೆಗೆ 15 ಲಕ್ಷ ಜಮೆ ಮಾಡುವುದಾಗಿ ಪ್ರಧಾನಿ ನರೇಂದ್ರ ಮೋದಿ ಹೇಳಿದ್ದರು.
3 ವರ್ಷ ಕಳೆಯುತ್ತಾ ಬಂದರೂ ಯಾರೊಬ್ಬರ ಖಾತೆಗೆ 15 ಪೈಸೆಯನ್ನೂ ಜಮೆ ಮಾಡಿಲ್ಲ. ಮುಂದೆ ಮಾಡುವುದೂ ಇಲ್ಲ. ಈಚೆಗೆ ನೋಟು ರದ್ಧತಿಯ ನಾಟಕವಾಡಿ ಜನ ಸಾಮಾನ್ಯರ ಬದುಕಿನ ಮೇಲೆ ದಾಳಿ ನಡೆಸಿದೆ. ಪ್ರತಿ ವರ್ಷ 2 ಕೋಟಿ ಉದ್ಯೋಗ ಸೃಷ್ಟಿಸುವ ಮಾತುಗಳಾಡಿದ್ದ ಸರ್ಕಾರ ಉದ್ಯೋಗ ಸೃಷ್ಟಿ ಮಾಡುವುದಿರಲಿ ಇರುವಂತಹ ಉದ್ಯೋಗವನ್ನೇ ಕಿತ್ತುಕೊಳ್ಳುತ್ತಿದೆ.
ಪ್ರತಿ ವರ್ಷ 1.5 ಕೋಟಿ ವಿದ್ಯಾರ್ಥಿಗಳು ಉನ್ನತ ವಿದ್ಯಾರ್ಜನೆ ಮಾಡಿ, ಹೊರ ಬರುತ್ತಿರುವಾಗ ಕೇಂದ್ರ ವರ್ಷಕ್ಕೆ 1.30 ಲಕ್ಷ ಕೆಲಸ ಸೃಷ್ಟಿಸುತ್ತಿದೆ ಎಂದು ದೂರಿದರು. ಸಾರ್ವಜನಿಕ ರಂಗವನ್ನು ಸಂಪೂರ್ಣವಾಗಿ ದುರ್ಬಲಗೊಳಿಸುವ ಮತ್ತು ಖಾಸಗೀಕರಣ ಮಾಡುವ ಮೂಲಕ ದಲಿತರು, ಹಿಂದುಳಿದವರು, ವಿಕಲ ಚೇತನರ ಉದ್ಯೋಗಕ್ಕೆ ಸಂಚಕಾರ ತಂದಿದೆ.
ಆಧುನಿಕತೆಯ ನೆಪದಲ್ಲಿ ಕೃಷಿ ಕ್ಷೇತ್ರದಲ್ಲಿನ ಯಾಂತೀÅಕರಣ, ಆಧುನೀಕರಣ ಮತ್ತು ವಿದೇಶಿ ಬಂಡವಾಳ ಕಂಪನಿಗಳಿಗೆ ಎಲ್ಲಾ ರೀತಿಯ ಅನುಕೂಲ ಮಾಡಿಕೊಡುವಂತಹ ಆಮದು ನೀತಿಯಿಂದಾಗಿ ಕೃಷಿಕರು, ಕಾರ್ಮಿಕರು ಕೆಲಸ ಇಲ್ಲದಂತಾಗುತ್ತಿದ್ದಾರೆ. ದೇಶದ ಬೆನ್ನೆಲುಬು ಎನ್ನುವ ರೈತರ ಬೆನ್ನೆಲುಬನ್ನೇ ಮುರಿಯುವ ಕೆಲಸ ಮಾಡಲಾಗುತ್ತಿದೆ ಎಂದು ದೂರಿದರು.
ಗ್ರಾಮೀಣ ಜನರಿಗೆ ಕೆಲಸ ಒದಗಿಸುವ ಖಾತರಿ ಯೋಜನೆಯನ್ನು ಬಲಪಡಿಸುವ ಬದಲಿಗೆ ಅನುದಾನ ಕಡಿತಗೊಳಿಸುವ ಮೂಲಕ ದುರ್ಬಲಗೊಳಿಸಲಾಗುತ್ತಿದೆ. ನಗರ ಒಳಗೊಂಡಂತೆ ಎಲ್ಲೆಡೆ 200 ಮಾನವ ದಿನಗಳಿಗೆ ಬೇಡಿಕೆ ಇದೆ. ರಾಜ್ಯಗಳು 60 ಸಾವಿರ ಕೋಟಿ ಅನುದಾನಕ್ಕೆ ಬೇಡಿಕೆ ಇಟ್ಟಿವೆ.
ಆದರೆ, ಕೇಂದ್ರ ಸರ್ಕಾರ ಈ ಬಾರಿ ಬಜೆಟ್‌ನಲ್ಲಿ ಶೇ. 50 ರಷ್ಟು ಅನುದಾನ ಮಾತ್ರ ಮೀಸಲಿಟ್ಟಿದೆ. ರೈತರ ಆತ್ಮಹತ್ಯೆ ತಡೆಗಟ್ಟುವಲ್ಲಿ ವಿಫಲವಾಗಿದೆ ಎಂದು ದೂರಿದರು. ಜಿಲ್ಲಾ ಸಂಘಟನಾ ಕಾರ್ಯದರ್ಶಿ ಕೆ.ಎಲ್. ಭಟ್, ಇ. ಶ್ರೀನಿವಾಸ್, ಟಿ.ವಿ. ರೇಣುಕಮ್ಮ, ಶ್ರೀನಿವಾಸಮೂರ್ತಿ, ಈರಣ್ಣ, ಅಣ್ಣೇಶಪ್ಪ, ಜೆ. ಮಹಾಲಿಂಗಪ್ಪ, ಲೋಕೇಶ್‌ನಾಯ್ಕ, ಬಸವರಾಜ್, ಚೆನ್ನಮ್ಮ, ಚೌಡಮ್ಮ, ದುರುಗಮ್ಮ ಇತರರು ಇದ್ದರು.