ಉಡುಪಿ: ನಾನು ಇದುವರೆಗೆ ಕಾರ್ಯನಿರ್ವಹಿಸಿದ ಯಾವುದೇ ಇಲಾಖೆಯಲ್ಲೂ ಆತ್ಮಸಾಕ್ಷಿಗೆ ವಿರುದ್ಧವಾಗಿ ಕಾರ್ಯ ನಿರ್ವಹಿಸದೆ ಕಾನೂನು ಹಾಗೂ ನಿಯಮಗಳ ಪ್ರಕಾರ ಕಾರ್ಯ ನಿರ್ವಹಿಸಿದ್ದೇನೆ ಎಂದು ನಿರ್ಗಮಿತ ಜಿಲ್ಲಾಧಿಕಾರಿ ಟಿ. ವೆಂಕಟೇಶ್ ತಿಳಿಸಿದ್ದಾರೆ.
ಅವರು ಗುರುವಾರ ಜಿ.ಪಂ. ಸಭಾಂಗಣದಲ್ಲಿ ಏರ್ಪಡಿಸಿದ್ದ ಬೀಳ್ಕೂಡುಗೆ ಸಮಾರಂಭದಲ್ಲಿ ಮಾತನಾಡಿದರು.ಉಡುಪಿ ಜಿಲ್ಲೆಗೆ ವರ್ಗವಾಗಿ ಬಂದದ್ದು ಅನಿರೀಕ್ಷಿತವಾಗಿತ್ತು, ಜಿಲ್ಲೆಯ ಬಗ್ಗೆ ಸಂಪೂರ್ಣ ಅರಿಯುವ ಮುನ್ನವೇ ವರ್ಗಾವಣೆಯಾಗಿದೆ. ಸರಕಾರಿ ನೌಕರರಿಗೆ ವರ್ಗಾವಣೆ ಸಾಮಾನ್ಯ. ನನ್ನ ಕರ್ತವ್ಯ ನಿರ್ವಹಣೆ ಸಮಯದಲ್ಲಿ ಜನ ಸಾಮಾನ್ಯರಿಗೆ ತೊಂದರೆಯಾಗದಂತೆ ಶೀಘ್ರದಲ್ಲಿ ಕಡತಗಳ ವಿಲೇವಾರಿ ಮಾಡಲಾಗಿದೆ. ಅಕ್ರಮ ಮರಳುಗಾರಿಕೆ ತಡೆಯಲಾಗಿದೆ.
ಜಿಲ್ಲೆಗೆ ಹೊರ ಜಿಲ್ಲೆಗಳಿಂದ ಬರುವ ಮರಳಿಗೆ ಯಾವುದೇ ನಿರ್ಬಂಧ ವಿಧಿಸದ ಕಾರಣ ಕಾಮಗಾರಿಗಳಿಗೆ ಮರಳಿನ ಅಭಾವ ಉಂಟಾಗಿಲ್ಲ. ಕಾನೂನಿನ ವಿರುದ್ಧ ಯಾವುದೇ ಕಾರ್ಯ ನಿರ್ವಹಿಸಿಲ್ಲ. ಟೋಲ್ ಸಂಗ್ರಹ ವಿಚಾರದಲ್ಲೂ ಸರಕಾರದ ಸೂಚನೆ ಪಾಲಿಸುವ ಕೆಲಸ ಮಾತ್ರ ಮಾಡಿದ್ದು, ಟೋಲ್ ಸಂಗ್ರಹ ನಿರ್ಧಾರ ತನ್ನದಲ್ಲ ಎಂದು ಟಿ. ವೆಂಕಟೇಶ್ ಸ್ಪಷ್ಟಪಡಿಸಿದರು.
ಗುರುವಾರ ಬೆಳಗ್ಗೆ ಅಧಿಕಾರ ಸ್ವೀಕರಿಸಿದ ನೂತನ ಜಿಲ್ಲಾಧಿಕಾರಿ ಪ್ರಿಯಾಂಕಾ ಮೇರಿ ಫ್ರಾನ್ಸಿಸ್ ಅಭಿನಂದನ ಭಾಷಣ ಮಾಡಿ, ಕಂದಾಯ ವಿಚಾರಗಳ ಅಳ ಜ್ಞಾನವಿದ್ದ ಜಿಲ್ಲಾಧಿಕಾರಿ ಯಾವುದೇ ಒತ್ತಡ, ಉದ್ವೇಗಕ್ಕೆ ಒಳಗಾಗದೆ ಸಮಚಿತ್ತದಿಂದ, ಕಾನೂನಿನ ಪ್ರಕಾರವೇ ನಿರ್ಧಾರ ತೆಗೆದುಕೊಳ್ಳುತ್ತಿದ್ದ ಮಾದರಿ ನಮಗೆ ಪ್ರೇರಣೆಯಾಗಲಿದೆ ಎಂದರು.
ಎಡಿಸಿ ಜಿ. ಅನುರಾಧಾ ಮಾತನಾಡಿ, ಇವರ ಆಡಳಿತದ ಅಲ್ಪಾವಧಿಯಲ್ಲಿ 152 ಎಕ್ರೆ ಸರಕಾರಿ ಜಮೀನಿನ ಅಕ್ರಮ ತೆರವು, 469 ಭೂ ಪರಿವರ್ತನೆ ಆದೇಶ, ಜಿಲ್ಲಾಧಿಕಾರಿ ಕೋರ್ಟ್‌ನ ಶೇ. 99 ಪ್ರಕರಣಗಳ ವಿಲೇವಾರಿ, ಎಪಿಎಂಸಿ ಚುನಾವಣೆ, ಸಂಸದರ ನಿಧಿಯ ಪಾರದರ್ಶಕ ಬಳಕೆ, ಭೂ ವ್ಯಾಜ್ಯಗಳ ವಿಲೇವಾರಿ ಮತ್ತಿತರ ಕಂದಾಯ ಇಲಾಖೆಯ ಕಾರ್ಯಕ್ರಮಗಳನ್ನು ಯಶಸ್ವಿಯಾಗಿ, ತ್ವರಿತಗತಿಯಲ್ಲಿ ಇತ್ಯರ್ಥಪಡಿಸಲಾಗಿದೆ ಎಂದರು.