ಕುಂದಾಪುರ: ಭಾರತೀಯರೆಲ್ಲರೂ ಮುಕ್ತವಾಗಿ ಮತದಾನದಲ್ಲಿ ಭಾಗ ವಹಿಸುವಂತೆ ಚುನಾವಣ ಆಯೋಗ ಎಲ್ಲ ವ್ಯವಸ್ಥೆ ಮಾಡಿದೆ. ಪ್ರತಿ ಮನೆ ಮನೆಗೂ ಮತದಾರರ ಛಾಯಾಚಿತ್ರ ಇರುವ ಮತಚೀಟಿ ವಿತರಿಸಲಾಗಿದೆ.
ಗುರುತುಚೀಟಿ ಅಥವಾ ಅಗತ್ಯ ದಾಖಲೆ ತೆಗೆದುಕೊಂಡು ಹೋಗಿ ಮತಚಲಾಯಿಸಿ ಎಂದು ಕುಂದಾಪುರದ ಸಹಾಯಕ ಆಯುಕ್ತ, ಜಿಲ್ಲೆಯ ಉಪಚುನಾವಣಾಧಿಕಾರಿ ಡಾ| ಎಸ್. ಎಸ್. ಮಧುಕೇಶ್ವರ ಹೇಳಿದರು.
ಅವರು ರೋಟರಿ ಕುಂದಾಪುರ ದಕ್ಷಿಣದ ಆಶ್ರಯದಲ್ಲಿ ರೋಟರಿ ಕ್ಲಬ್ ಕುಂದಾಪುರ, ರೋಟರಿ ಕ್ಲಬ್ ಮಿಡ್‌ಟೌನ್, ರೋಟರಿ ಕ್ಲಬ್ ಸನ್‌ರೈಸ್, ರೋಟರಿಕ್ಲಬ್ ರಿವರ್‌ಸೈಡ್ ಸಹಯೋಗದೊಂದಿಗೆ ನಡೆದ “ಮತದಾನ ಪ್ರಕ್ರಿಯೆ ಮತ್ತು ಮತ ಚಲಾವಣೆ ಹಕ್ಕು’ ಬಗ್ಗೆ ಮಾಹಿತಿ ಸಮಾವೇಶ ದಲ್ಲಿ ಚುನಾವಣ ಪ್ರಕ್ರಿಯೆಯ ಸಂಪೂರ್ಣ ವಿವರ ನೀಡಿದರು.
ಬೆಳಗ್ಗೆ 7 ರಿಂದ ಸಂಜೆ 6ರ ತನಕ ಅವಕಾಶವಿದೆ. ಯಾವ ಕಾರಣಕ್ಕೂ ಮತ ಚಲಾಯಿಸದೇ ಇರಬೇಡಿ. ದೇಶದ ಹಿತದೃಷ್ಟಿಯಿಂದ ಪ್ರತಿಯೊಂದು ಮತ ಅಮೂಲ್ಯವಾಗಿರುತ್ತದೆ. ಮತ ಚಲಾಯಿ ಸದೇ ಪ್ರವಾಸ ಹೋಗುವ ಕೆಲಸ ಮಾಡ ಬಾರದು. ಯಾವುದೇ ಆಮಿಷಕ್ಕೆ ಬಲಿ ಬೀಳ ಬೇಡಿ. ಜವಾಬ್ದಾರಿಯುತ ನಾಗರಿಕ ರಾಗಿ ತಮ್ಮ ಹಕ್ಕಿನ ಮತ ಚಲಾಯಿಸಿ ಎಂದರು.
ಯಾವುದೇ ನೀತಿ ಸಂಹಿತೆ ಉಲ್ಲಂಘನೆ ಕಂಡುಬಂದಲ್ಲಿ ಚುನಾವಣಾಧಿಕಾರಿಗಳಿಗೆ ನೇರವಾಗಿ ಮೊಬೈಲ್ ಮೂಲಕ ಮಾಹಿತಿ ನೀಡುವ ಸೌಲಭ್ಯ, ಮತದಾನ ಪ್ರಕ್ರಿಯೆಯಲ್ಲಿ ಅಂಗವಿಕಲರಿಗೆ, ಅಂಧರಿಗೆ, ವೃದ್ಧರಿಗೆ ಮತಚಲಾಯಿಸಲು ಇರುವ ಅವಕಾಶ, ಸುಳ್ಳು ದೂರು ನೀಡುವುದು, ಅಕ್ರಮ ಮತದಾನಕ್ಕೆ ಪ್ರಯತ್ನ ನಡೆಸುವುದು ಮುಂತಾದ ಕ್ರಿಯೆಗಳಿಗೆ ಇರುವ ಶಿಕ್ಷೆ ಬಗ್ಗೆ ಅವರು ಮಾಹಿತಿ ನೀಡಿದರು.
ಉಪವಿಭಾಗಾಧಿಕಾರಿಗಳ ಚುನಾವಣಾ ಸಹಾಯಕ ಅಧಿಕಾರಿ ಚಂದ್ರಶೇಖರ ಶೆಟ್ಟಿ, ಮತಯಂತ್ರ, ವಿವಿಪ್ಯಾಟ್, ಮತ ಚಲಾವಣೆ ದಾಖಲಾಗುವ ರೀತಿ, ಅಭ್ಯರ್ಥಿ ಗಳು ಪಡೆದ ಮತಗಳ ಎಣಿಕೆ ಮುಂತಾದ ಬಗ್ಗೆ ಪ್ರಾತ್ಯಕ್ಷಿಕೆ ನಡೆಸಿದರು.
ರೋಟರಿ ಕುಂದಾಪುರ ದಕ್ಷಿಣದ ಅಧ್ಯಕ್ಷ ಜಾನ್ಸನ್ ಡಿ’ಆಲ್ಮೇಡಾ ಅಧ್ಯಕ್ಷತೆ ವಹಿಸಿದ್ದರು. ರೋಟರಿ ಕುಂದಾಪುರದ ಅಧ್ಯಕ್ಷ ಗೋಪಾಲ ಶೆಟ್ಟಿ ಉಪವಿಭಾಗಾಧಿಕಾರಿಗಳನ್ನು ಪರಿಚ ಯಿಸಿದರು. ರೋಟರಿ ಮಿಡ್‌ಟೌನ್ ಅಧ್ಯಕ್ಷ ಪ್ರಭಾಕರ ರಾವ್ ಅತಿಥಿ ಗಳನ್ನು ಗೌರವಿಸಿದರು. ರೋಟರಿ ಸನ್‌ರೈಸ್ ಅಧ್ಯಕ್ಷ ಅಬ್ಬುಶೇಖ್ ಅಭಿನಂದನ ಮಾತುಗಳನ್ನಾ ಡಿದರು. ರೋಟರಿ ದಕ್ಷಿಣದ ಕಾರ್ಯದರ್ಶಿ ರಾಮ ಪ್ರಸಾದ ಶೇಟ್ ಕಾರ್ಯಕ್ರಮದ ವಿವರ ನೀಡಿದರು. ರೋಟರಿ ರಿವರ್‌ಸೈಡ್‌ನ ನಿಯೋಜಿತ ಅಧ್ಯಕ್ಷ ರಾಜು ಪೂಜಾರಿ ವಂದಿಸಿದರು.