ನರಗುಂದ: ಮಳೆರಾಯನ ಅವಕೃಪೆಯಿಂದ ಅದೆಷ್ಟೋ ಕನಸುಗಳನ್ನು ಹೊತ್ತು ಕಾಯ್ದು ಕುಳಿತಿದ್ದ ಬೆಣ್ಣೆಹಳ್ಳ ವ್ಯಾಪ್ತಿಯ ರೈತರೀಗ ಶಾಪಗ್ರಸ್ತರಾಗಿದ್ದಾರೆ. ಈ ಭಾಗದ ರೈತರ ಬೆಳೆಗಳಿಗೆ ತಂಪೆರೆಯಬೇಕಾದ ಕುರ್ಲಗೇರಿ ಏತ ನೀರಾವರಿ ಯೋಜನೆ ರೈತರ ಪಾಲಿಗೆ ಮರೀಚಿಕೆಯಾಗಿದೆ.
ತಾಲೂಕಿನ ಕುರ್ಲಗೇರಿ ಗ್ರಾಮಕ್ಕೆ ಹೊಂದಿಕೊಂಡು ಬೆಣ್ಣೆಹಳ್ಳದಲ್ಲಿ ವ್ಯರ್ಥವಾಗಿ ಹರಿಯುವ ನೀರನ್ನೇ ಸದ್ಬಳಕೆ ಮಾಡಿಕೊಳ್ಳಲು ಈ ಯೋಜನೆ ಜಾರಿ ಮಾಡಲಾಗಿದೆ. ಈ ಏತ ನೀರಾವರಿ ಯೋಜನೆಯು ಕುರ್ಲಗೇರಿ, ಕಸಬಾ, ಸುರಕೋಡ ಗ್ರಾಮಗಳ ಜೊತೆಗೆ ನರಗುಂದ ಭಾಗದ ರೈತರ ಜಮೀನು ಸೇರಿ 1,500 ಎಕರೆಗೂ ಹೆಚ್ಚು ಪ್ರದೇಶಕ್ಕೆ ನೀರುಣಿಸುತ್ತದೆ. ಆದರೆ ಪ್ರತಿವರ್ಷ ಬೆಣ್ಣೆಹಳ್ಳದಲ್ಲಿ ನೀರು ಹರಿಯುತ್ತಿರುವಾಗೆಲ್ಲ ಪೈಪ್‌ಲೈನ್ ದುರಸ್ತಿಯೇ ಯೋಜನೆ ಸಾಧನೆಯಾಗುತ್ತಿದೆ.
2011ರಲ್ಲಿ ಕಾರ್ಯಾರಂಭ ಮಾಡಿದ ಏತ ನೀರಾವರಿ ಯೋಜನೆ ಪ್ರಾರಂಭದಲ್ಲಿ ಎರಡ್ಮೂರು ವರ್ಷ ಅಷ್ಟಿಷ್ಟು ನೀರು ಒದಗಿಸಿದ್ದು ಬಿಟ್ಟರೆ ಏಳು ವರ್ಷಗಳಲ್ಲಿ ಈ ಯೋಜನೆ ರೈತರಿಗೆ ತಲುಪಿದ್ದೇ ವಿರಳ. ಸದಾ ಪೈಪ್‌ಲೈನ್ ಸೋರಿಕೆಯಿಂದ ಅರ್ಧ ಕಿಮೀ ಕೂಡ ನೀರು ಸಾಗಿಸದ ಯೋಜನೆ ಅವ್ಯವಸ್ಥೆ ನಮ್ಮ ಬದುಕು ಕಿತ್ತುಕೊಳ್ಳುತ್ತಿದೆ ಎಂಬ ನೋವು, ಹತಾಶೆ ಯೋಜನೆ ವ್ಯಾಪ್ತಿಯ ರೈತರದ್ದಾಗಿದೆ. ಅವ್ಯವಸ್ಥಿತ ಪೈಪ್‌ಲೈನ್: ರೈತರ ಜಮೀನಿಗೆ ಬೆಣ್ಣೆಹಳ್ಳದಿಂದ ನೀರೊದಗಿಸುವ 6.4 ಕಿಮೀವರೆಗೆ ಯೋಜನೆ ಪೈಪ್‌ಲೈನ್ ಅವ್ಯವಸ್ಥೆ ರೈತರನ್ನು ಸಂಕಷ್ಟದ ಕೂಪಕ್ಕೆ ತಳ್ಳಿದೆ. ಹೆಸರಿಗೆ ಸಿಮೆಂಟ್ ಪೈಪ್ ಅಳವಡಿಸಿದ್ದರೂ ನೀರು ಹರಿಸಿದರೆ ಸಾಕು ಎಲ್ಲೆಂದರಲ್ಲಿ ಒಡೆದು ನೀರು ಸೋರಿಸುವ ಪೈಪ್‌ಲೈನ್ ಗುಣಮಟ್ಟವಿಲ್ಲದ ಕಾಮಗಾರಿಯೇ ಕಾರಣವಾಗಿದೆ ಎಂಬ ಆರೋಪ ಈ ಭಾಗದ ರೈತರಲ್ಲಿ ಜೀವಂತವಾಗಿದೆ.
ನೀರಿನ ರಭಸಕ್ಕೆ ಪೈಪ್‌ಲೈನ್ ಜಾಯಿಂಟ್ ಗಳಲ್ಲಿ ಒಡೆದು ಸೋರಿಕೆ ಆಗುವುದು ಸಹಜ. ಆದರೆ ಕುರ್ಲಗೇರಿ ಏತ ನೀರಾವರಿ ಯೋಜನೆ ಪೈಪ್‌ಗ್ಳ ಮಧ್ಯೆಯೇ ಒಡೆದು ಸೋರಿಕೆ ಆಗುತ್ತಿವೆ. ಹೀಗಾದರೆ ಯೋಜನೆಯಿಂದ ನಾವು ನೀರು ಪಡೆಯುವುದು ಯಾವಾಗ ಎಂಬ ಪ್ರಶ್ನೆ ರೈತರದ್ದಾಗಿದೆ.
ಏತ ನೀರಾವರಿ ಯೋಜನೆ ನಿರ್ವಹಣೆ ಮಾಡುತ್ತಿರುವ ಹಾವೇರಿ ಮೂಲದ ಎಸ್ ಪಿಎಂಎಲ್ ಏಜೆನ್ಸಿಯಿಂದ ಸಮರ್ಪಕವಾಗಿ ನಿರ್ವಹಣೆ ಆಗುತ್ತಿಲ್ಲ. ಬೆಣ್ಣೆಹಳ್ಳದ ನೀರು ಬಂದ್ ಆದಮೇಲೆ ಯೋಜನೆಯಿಂದ ನಮಗೇನು ಲಾಭ ಎಂಬುದು ರೈತರ ಪ್ರಶ್ನೆ. ಆದರೆ ಏತ ನೀರಾವರಿ ಯೋಜನೆ ಪ್ರತಿಬಾರಿ ಚಾಲು ಮಾಡಿದಾಗಲೆಲ್ಲ ನಾಲ್ಕಾರು ಕಡೆಗೆ ಸೋರಿಕೆ ಆಗುವ ಈ ಯೋಜನೆ ನೀರು ರೈತರ ಪಾಲಿಗೆ ಮರೀಚಿಕೆಯಾಗಿ ಉಳಿದಿರುವುದು ವಿಪರ್ಯಾಸ.
ರೈತರ ಸಂಕಷ್ಟ ಕೇಳುವರಿಲ್ಲ
ಬೆಣ್ಣೆಹಳ್ಳಕ್ಕೆ ಕಳೆದ 15 ದಿನಗಳಿಂದ ನೀರು ಹರಿದು ಬರುತ್ತಿದೆ. ಇನ್ನು ಹತ್ತಾರು ದಿನಗಳು ಮಾತ್ರ ಹಳ್ಳದಲ್ಲಿ ನೀರು ಬರಲು ಸಾಧ್ಯ. ಒಂದು ಬಾರಿಯೂ ಹಳ್ಳದ ನೀರನ್ನು ಬಳಸಿಕೊಳ್ಳುವ ಅವಕಾಶ ನಮಗೆ ಸಿಗಲಿಲ್ಲ. ಇಷ್ಟಾದರೂ ಯೋಜನೆ ಕೈಗೆತ್ತಿಕೊಂಡ ಗುತ್ತಿಗೆದಾರ ಏಜೆನ್ಸಿ ಮೇಲೆ ಕ್ರಮ ಕೈಗೊಳ್ಳುವಲ್ಲಿ ನೀರಾವರಿ ಅಧಿಕಾರಿಗಳು ಕೂಡ ಮೀನಮೇಷ ಎಣಿಸುತ್ತಿದ್ದಾರೆ. ನಮ್ಮ ಬದುಕಿನ ಸಂಕಷ್ಟ ಕೇಳುವವರಿಲ್ಲದಂತಾಗಿದೆ ಎಂಬುದು ರೈತರ ಆರೋಪವಾಗಿದೆ.
ಸಿದ್ಧಲಿಂಗಯ್ಯ ಮಣ್ಣೂರಮಠ