ತಮ್ಮ ಶಾಲೆ ಉಳಿದೆಲ್ಲ ಶಾಲೆಗಳಿಗಿಂತ ಭಿನ್ನವಾಗಿ ಕಾಣಬೇಕು ಮತ್ತು ಅದು ಪುಟಾಣಿಗಳ ಮನಸನ್ನು ಆಕರ್ಷಿಸುವಂತೆಯೂ ಇರಬೇಕು ಎಂಬ ಕನಸು ಶಿಕ್ಷಕ ದೊರೆಸ್ವಾಮಿ ಅವರಿಗಿತ್ತು. ಅದರ ಪರಿಣಾಮವೇ ಈ ರೈಲ್‌ಸ್ಕೂಲ್ !
ಈ ಕಟ್ಟಡದ ಮುಂದೆ ನಿಂತರೆ ರೈಲಿನ ಮುಂದೆ ನಿಂತಂತೆ ಭಾಸವಾಗುತ್ತದೆ. ರೈಲೇ ಸಂಚರಿಸದ ಈ ಗ್ರಾಮದಲ್ಲಿ ಕಡುನೀಲಿ ಬಣ್ಣದ ಈ ರೈಲು ಬಂದಿದ್ದಾರೂ ಎಲ್ಲಿಂದ?ಯಾವಾಗ? ಈ ರೈಲು ಎಲ್ಲಿಗೆ ಹೋಗುತ್ತದೆ ಎಂಬ ಯೋಚನೆ ಮೂಡಿದರೆ ಆಶ್ಚರ್ಯವೇನಿಲ್ಲ, ಏಕೆಂದರೆ ಈ ಕಟ್ಟಡವನ್ನೂ ರೈಲಿನ ರೀತಿಯಲ್ಲೇ ನಿರ್ಮಿಸಲಾಗಿದೆ. ಶೃಂಗರಿಸಲಾಗಿದೆ. ಆದರೆ, ಇದು ರೈಲೂ ಅಲ್ಲ ಬೋಗಿಯೂ ಅಲ್ಲ, ಇದೊಂದು ಸರ್ಕಾರಿ ಶಾಲೆ.
ರೈಲಿನಂತೆ ಕಾಣುವ ಈ ಶಾಲೆ ಇರುವುದು ಮೈಸೂರು ಜಿಲ್ಲೆಯ ನಂಜನಗೂಡು ತಾಲೂಕಿನ ಹಾರೋಪುರದಲ್ಲಿ. ಶಾಲೆಯನ್ನೂ ಹೀಗೂ ಸಿಂಗರಿಸಬಹುದೆಂದು ತೋರಿಸಿಕೊಟ್ಟವರು ವೃತ್ತಿಪರ ವಿನ್ಯಾಸಕಾರರಾಗಲಿ ಅಥವಾ ಸಿವಿಲ್ ಎಂಜಿನಿಯರಾಗಲಿ ಅಲ್ಲ. ಇದೇ ಶಾಲೆಯ ಶಿಕ್ಷಕ ದೊರೆಸ್ವಾಮಿ ಅವರ ಕಲ್ಪನೆಯ ಕೂಸು ಈ ಶಾಲೆ. ದೂರದಿಂದ ಮಾತ್ರವಲ್ಲ ಹತ್ತಿರ ಬಂದಾಗಲೂ ಕಂಬಿಯ ಮೇಲೆ ರೈಲು ನಿಂತಂತೆ ಭಾಸವಾಗುತ್ತದೆ. ಈ ಶಾಲೆ ಮೂರು ಕೊಠಡಿಗಳಿಗೆ ರೈಲಿನ ಬಣ್ಣ ಬಳಿದು ಕಡು ನೀಲಿ ಬೋಗಿಯ ರೂಪ ಕೊಟ್ಟು ಶೃಂಗರಿಸಲಾಗಿದೆ.
ಸರ್ಕಾರಿ ಶಾಲೆ ಎಂದರೆ ದೊಡ್ಡಿಕೊಟ್ಟಿಗೆಯಂತೆ ಕಾಣುವ ಈ ರೂಮುಗಳಷ್ಟೇ ಇರುತ್ತವೆ. ಹಾಗಿರುವಾಗ, ಈ ಕಾಲದಲ್ಲಿ ಖಾಸಗಿ ಶಾಲೆಗಳಿಗೆ ಸೆಡ್ಡು ಹೊಡೆಯವಂತಹ ರೀತಿಯಲ್ಲಿ ಈ ಶಾಲೆ ಕಂಗೊಳಿಸುತ್ತಿದೆ. ತಮ್ಮ ಶಾಲೆ ಬೇರೆಲ್ಲ ಶಾಲೆಗಿಂತ ಭಿನ್ನವಾಗಿ ಕಾಣಬೇಕು ಹಾಗೂ ಅದು ಪುಟಾಣಿಗಳ ಮನಸ್ಸನ್ನು ಆಕರ್ಷಿಸುವಂತಿರಬೇಕು ಎಂಬ ದೊರೆಸ್ವಾಮಿ ಅವರ ಹೆಬ್ಬಯಕೆಯ ಪರಿಣಾಮವೇ ಶಾಲೆ ಈ ರೀತಿಯಾಗಿ ಬದಲಾಗಲು ಕಾರಣವಂತೆ. ಸಹ ಶಿಕ್ಷಕರ ಈ ಕಲ್ಪನೆಗೆ ನೀರೆರದು ಪೋಷಿಸಿದವರು ಶಾಲೆಯ ಮುಖ್ಯ ಶಿಕ್ಷಕ ಬಸವನಾಯಕ, ತರನಂ ಖಾನ್ ನೇತ್ರಾವತಿ.
ಶಾಲೆಯ ಅಭಿವೃದ್ಧಿಗಾಗಿ ಅನುದಾನದಲ್ಲಿ ಉಳಿತಾಯ ಮಾಡಿದ ಸ್ವಲ್ಪ ಹಣದೊಂದಿಗೆ ಈ ನಾಲ್ವರೂ ಸ್ವಂತ ಹಣ ಖರ್ಚುಮಾಡಿ ತಮ್ಮ ಶಾಲೆಗೆ ವಿಶೇಷ ರೂಪ ನೀಡಿದ್ದಾರೆ.
“ಇದಕ್ಕಾಗಿ ನಾವೇನೂ ಹೆಚ್ಚು ಕರ್ಚು ಮಾಡಿಲ್ಲ’ ಎನ್ನುವ ಬಸವನಾಯಕರು, ಈ ರೀತಿಯ ಪ್ರಯೋಗದಿಂದ ಸರ್ಕಾರಿ ಶಾಲೆಗಳ ಕಡೆ ವಿದ್ಯಾರ್ಥಿಗಳು ಮುಖ ಮಾಡುತ್ತಾರೆ ಎನ್ನುತ್ತಾರೆ.
ಶ್ರೀಧರ್ ಆರ್. ಭಟ್