ಕೆಂಗೇರಿ: “ಬೆಂಗಳೂರು-ಮೈಸೂರು ಇನ್‌ಫ್ರಾಸ್ಟ್ರಕ್ಚರ್ ಕಾರಿಡಾರ್(ಬಿಎಂಐಸಿ) ಯೋಜನೆಗೆ ಭೂಮಿ ಕಳೆದುಕೊಂಡಿರುವ ರೈತರಿಗೆ ಯಾವುದೇ ರೀತಿಯ ಅನ್ಯಾಯವಾಗದಂತೆ ನೋಡಿಕೊಳ್ಳುವ ಜವಾಬ್ದಾರಿ ಹೋರಾಟಗಾರರು ಹಾಗೂ ಜನಪ್ರತಿನಿಧಿಗಳ ಮೇಲಿದೆ,’ ಎಂದು ಸಿದ್ಧಗಂಗಾಮಠದ ಸಿದ್ಧಲಿಂಗಸ್ವಾಮಿ ತಿಳಿಸಿದರು. ಬೆಂಗಳೂರು ದಕ್ಷಿಣ ತಾಲೂಕಿನ ಕೆ.ಗೊಲ್ಲಹಳ್ಳಿಯ ಬಸವೇಶ್ವರ ನಗರದಲ್ಲಿ ಮಂಗಳವಾರ ಆಯೋಜಿಸಿದ್ದ ಬಸವ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, “ಯಾವುದೇ ಸರ್ಕಾರಗಳು ರಸ್ತೆ ಅಭಿವೃದ್ಧಿಗೆ ಹೊರತುಪಡಿಸಿ ಬೇರೆ ಯಾವುದೇ ಉದ್ದೇಶಗಳಿಗೆ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳಬಾರದು,’ ಎಂದು ಒತ್ತಾಯಿಸಿದರು.
“ಸಾಮಾಜಿಕ, ಧಾರ್ಮಿಕ, ರಾಜಕೀಯ ಬದಲಾವಣೆ ಹಾಗೂ ಸುಧಾರಣೆಗೆ ವಚನ ಸಾಹಿತ್ಯ ಪ್ರೇರಣೆ. ಇಂದಿನ ಕಲುಷಿತ ಸಮಾಜದ ವ್ಯವಸ್ಥೆಯ ಸುಧಾರಣೆಗೆ ವಚನ ಸಾಹಿತ್ಯ ದಾರಿದೀಪವಾಗಬಲ್ಲದು,’ ಎಂದು ತಿಳಿಸಿದರು. ಕಾನೂನು ಸಚಿವ ಟಿ.ಬಿ.ಜಯಚಂದ್ರ ಮಾತನಾಡಿ “ಈ ಭಾಗದ ರೈತರು ಯಾವುದೇ ಕಾರಣಕ್ಕೂ ಆತಂಕಪಡುವ ಅಗತ್ಯವಿಲ್ಲ. ರೈತರ ಹಿತವೇ ಸರ್ಕಾರದ ಆದ್ಯತೆ. ರೈತರ ಜಮೀನನ್ನು ನೈಸ್ ಸಂಸ್ಥೆಗೆ ರಸ್ತೆಗೆ ಹೊರತುಪಡಿಸಿ ಬೇರಾವ ಕಾರಣಕ್ಕಾದರೂ ಭೂಸ್ವಾಧೀನಗೊಂಡಿದ್ದರನ್ನು ಅದನ್ನು ರೈತರಿಗೆ ವಾಪಸ್ ನೀಡಲು ಎಲ್ಲಾ ರೀತಿಯ ಕ್ರಮ ಕೈಗೊಳ್ಳಲಾಗುವುದು,’ ಎಂದರು.
ಶಾಸಕ ಎಸ್.ಟಿ.ಸೋಮಶೇಖರ್ ಮಾತನಾಡಿ, “ಬಿಎಂಐಸಿ ಯೋಜನೆಗೆ ಭೂಮಿ ಕಳೆದುಕೊಂಡಿರುವ ರೈತರಿಗೆ ಅನ್ಯಾಯವಾಗದಂತೆ ಎಚ್ಚರ ವಹಿಸಲಾಗುವುದು. ಯೋಜನೆ ಅಡಿಯಲ್ಲಿ ರಸ್ತೆ ನಿರ್ಮಾಣಕ್ಕೆ ಯಾವುದೇ ಅಡ್ಡಿ ಇಲ್ಲ. ಆದರೆ ಯೋಜನೆಯ ಹೆಸರಲ್ಲಿ ಫಲವತ್ತಾದ ಭೂಮಿಯನ್ನು ವಶಪಡಿಸಿಕೊಳ್ಳಲು ಅವಕಾಶ ನೀಡುವುದಿಲ್ಲ. ಸದನದಲ್ಲಿ ಈಗಾಗಲೇ ಈ ಬಗ್ಗೆ ಚರ್ಚೆ ನಡೆಸಲಾಗಿದೆ. ಮುಂದಿನ ಅಧಿವೇಶನದಲ್ಲಿ ಇದಕ್ಕೊದು ತಾರ್ಕಿಕ ಅಂತ್ಯ ಕಂಡುಕೊಳ್ಳಲಾಗುವುದು,’ ಎಂದು ಭರವಸೆ ನೀಡಿದರು.
ಕೆ.ಗೊಲ್ಲಹಳ್ಳಿ ಗ್ರಾ. ಪಂ. ಮಾಜಿ ಅಧ್ಯಕ್ಷ ಆರ್.ಲಕ್ಷ್ಮಯ್ಯ, ಜಿ. ಪಂ. ಸದಸ್ಯ ಡಿ.ಹನುಮಂತೇಗೌಡ, ವಿಶ್ವ ಒಕ್ಕಲಿಗ ಮಠದ ಪೀಠಾಧ್ಯಕ್ಷರಾದ ಶ್ರೀ ಕುಮಾರ ಚಂದ್ರಶೇಖರನಾಥ ಸ್ವಾಮೀಜಿ, ಎಪಿಎಂಸಿ ಸದಸ್ಯ ಹನುಮಂತೇಗೌಡ, ಕೆಂಗೇರಿ ಪುರಸಭೆಯ ಮಾಜಿ ಅಧ್ಯಕ್ಷ ಕೆ.ಆರ್. ಸತ್ಯನಾರಾಯಣ, ಅಗರ ಗ್ರಾ. ಪಂ. ಮಾಜಿ ಅಧ್ಯಕ್ಷ ಟಿ.ನಾರಾಯಣ, ಕುಂಬಳಗೋಡು ಗ್ರಾ. ಪಂ. ಅಧ್ಯಕ್ಷ ಚಿಕ್ಕರಾಜು, ತಾ. ಪಂ. ಸದಸ್ಯ ಕೆ.ವೈ.ಶಿವಣ್ಣ, ಕೆ.ಗೊಲ್ಲಹಳ್ಳಿ ಗ್ರಾ.ಪಂ. ಅಧ್ಯಕ್ಷ ಎಂ.ಮುನಿಸ್ವಾಮಿ, ಮುಖಂಡರಾದ ಕೆ.ಆರ್. ಗೋವಿಂದಸ್ವಾಮಿ, ಅನಿಲ್ ಕುಮಾರ್ ಮತ್ತಿತರರು ಉಪಸ್ಥಿತರಿದ್ದರು.
ಚಿತ್ರ 1 : ಕೆಂಗೇರಿ ಹೋಬಳಿಯ ಕೆ.ಗೊಲ್ಲಹಳ್ಳಿಯ ಬಸವೇಶ್ವರ ನಗರದಲ್ಲಿ ಮಂಗಳವಾರ ಆಯೋಜಿಸಿದ್ದ ಬಸವ ಜಯಂತಿ ಕಾರ್ಯಕ್ರಮದಲ್ಲಿ ಸಿದ್ಧಗಂಗ ಮಠದ ಸಿದ್ಧಲಿಂಗಸ್ವಾಮಿಗಳು ಶಾಸಕ ಎಸ್.ಟಿ.ಸೋಮಶೇಖರ್ ಅವರಿಗೆ ಸೇವಾರತ್ನ ಪ್ರಶಸ್ತಿ ಪ್ರದಾನ ಮಾಡಿದರು. ವಿಶ್ವಒಕ್ಕಲಿಗ ಪೀಠದ ಕುಮಾರ ಚಂದ್ರಶೇಖರನಾಥ ಸ್ವಾಮೀಜಿ, ಕೆ.ಗೊಲ್ಲಹಳ್ಳಿ ಗ್ರಾ.ಪಂ. ಮಾಜಿ ಅಧ್ಯಕ್ಷ ಆರ್. ಲಕ್ಷ್ಮಯ್ಯ ಮತ್ತಿತರರು ಉಪಸ್ಥಿತರಿದ್ದರು.