Advertisement

ಸಚಿವ ಸ್ಥಾನವಲ್ಲ, ರೈತರು ಮುಖ್ಯ, ಹೋರಾಡಲು ಬಿಡಿ

12:03 PM Jul 11, 2017 | Team Udayavani |

ಧಾರವಾಡ: “ನನಗೆ ಸಚಿವ ಸ್ಥಾನಕ್ಕಿಂತ ರೈತರ ಹಿತ ಮುಖ್ಯ, ಕಾಂಗ್ರೆಸ್‌ ಪಕ್ಷದ ಮುಖಂಡರೇ ನನಗಿನ್ನು ಹೋರಾಟಕ್ಕೆ ಅವಕಾಶ ನೀಡಿ, ನನ್ನ ಶಕ್ತಿ ಏನೆಂದು ಬಿಜೆಪಿಯವರಿಗೆ ತೋರಿಸುತ್ತೇನೆ’. 

Advertisement

ಇಲ್ಲಿನ ರಪಾಠಿ ಕಲ್ಯಾಣ ಮಂಟಪದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಧಾರವಾಡ ಗ್ರಾಮೀಣ ಕಾಂಗ್ರೆಸ್‌ ಮತ್ತು ಶಹರ ಘಟಕಗಳ ಬೂತ್‌ ಮಟ್ಟದ ಕಾಂಗ್ರೆಸ್‌ ಕಾರ್ಯಕರ್ತರ ಸಮಾವೇಶದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ವಿನಯ್‌ ಕುಲಕರ್ಣಿ ಕಾಂಗ್ರೆಸ್‌ ಮುಖಂಡ ಎಸ್‌.ಆರ್‌.ಪಾಟೀಲ್‌ ಅವರಿಗೆ ಮಾಡಿಕೊಂಡ ಮನವಿ ಇದು. 

ಜಿಲ್ಲೆಯಲ್ಲಿ ಸತತ ಬರಗಾಲ ಬಿದ್ದು, ರೈತರು ಸಂಕಷ್ಟದಲ್ಲಿದ್ದಾರೆ. ಮೊದಲು ರಾಜ್ಯ ಸರ್ಕಾರ ರೈತರ ಸಾಲ ಮನ್ನಾ ಮಾಡಿ ಎಂದು ಕೂಗುತ್ತಿದ್ದ ಬಿಜೆಪಿ ಮುಖಂಡರು ರೈತರ ಸಾಲ ಮನ್ನಾ ಮಾಡಿದ ಮೇಲೆ ಮೌನಕ್ಕೆ ಶರಣಾಗಿದ್ದಾರೆ. ಈಗ ಕೇಂದ್ರ ಸರ್ಕಾರದ ಸರದಿ. ಅವರು ರೈತರ ಸಾಲ ಮನ್ನಾ ಮಾಡಲೇಬೇಕು.

ಅದಕ್ಕಾಗಿ ನಾನು ಶೀಘ್ರ ಹೋರಾಟ ಆರಂಭಿಸುತ್ತೇನೆ. ನನಗೆ ಸಚಿವ ಸ್ಥಾನಕ್ಕಿಂತ ರೈತರು ಮುಖ್ಯ. ನಾನು ಹೋರಾಟ ಮಾಡುತ್ತೇನೆ ಎಂದರೆ, ನಮ್ಮ ಕಾರ್ಯಾಧ್ಯಕ್ಷರಾದ ಎಸ್‌.ಆರ್‌.ಪಾಟೀಲರು ಬೇಡ ಎನ್ನುತ್ತಾರೆ. ನನಗೆ ಹೋರಾಟ ಮಾಡಲು ಅವಕಾಶ ಕೊಡಿ ಎಂದು ಅವರಲ್ಲಿ ವಿನಂತಿಸುತ್ತೇನೆ ಎಂದು ಹೇಳಿದರು. 

ಪ್ರಧಾನಿ ನರೇಂದ್ರ ಮೋದಿ ಅವರು ಬರೀ ಸುಳ್ಳು ಹೇಳುತ್ತ ಜನರನ್ನು ದಾರಿ ತಪ್ಪಿಸುತ್ತಿದ್ದಾರೆ. ರಾಜ್ಯ ಸರ್ಕಾರ ನೀಡಿದ ಅನುದಾನವನ್ನು ಕೇಂದ್ರ ಸರ್ಕಾರದ್ದು ಎಂದು ಹೇಳುತ್ತಿದ್ದಾರೆ. ಸ್ಮಾರ್ಟ್‌ಸಿಟಿಗೆ ರಾಜ್ಯ ಸರ್ಕಾರ ಶೇ.62 ರಷ್ಟು ಹಣ ನೀಡಿದರೆ, ಕೇಂದ್ರ ಬರೀ ಶೇ.38ರಷ್ಟು ಹಣ ನೀಡುತ್ತಿದೆ.

Advertisement

ಆದರೆ ಯೋಜನೆ ತಮ್ಮದೇ ಎಂದು ಪ್ರಚಾರ ಮಾಡುತ್ತಿದೆ. ಒಂದು ಅಡುಗೆ ಅನಿಲ ಸಿಲಿಂಡರ್‌ ಹಂಚಿ 100 ಕಡೆ ಪೋಸ್ಟರ್‌ ಹಾಕಿಕೊಳ್ಳುವ ಸಂಸದ ಪ್ರಹ್ಲಾದ ಜೋಶಿ ಅವರೇ ಸ್ವಲ್ಪ ತಡೆಯಿರಿ, ಮುಖ್ಯಮಂತ್ರಿ ಅನಿಲ ಭಾಗ್ಯ ಯೋಜನೆ ಅಡಿ ನಾವು ಎಲ್ಲಾ ಬಡವರಿಗೂ ಸಿಲಿಂಡರ್‌ ಜೊತೆ ಅದರ ಒಲೆಯನ್ನೂ ಹಂಚುತ್ತೇವೆ ಎಂದು ಸಚಿವ ವಿನಯ್‌ ವಾಗ್ಧಾಳಿ ನಡೆಸಿದರು. 

ಕಾಂಗ್ರೆಸ್‌ ಮುಖಂಡ ವೀರಣ್ಣ ಮತ್ತಿಕಟ್ಟಿ, ಎ.ಎಂ.ಹಿಂಡಸಗೇರಿ, ವಿಜಯ್‌ ಕುಲಕರ್ಣಿ, ಇಸ್ಮಾಯಿಲ್‌ ತಮಟಗಾರ, ಪ್ರೊ|ಐ.ಜಿ.ಸನದಿ, ಪ್ರಸಾದ್‌ ಅಬ್ಬಯ್ಯ, ಶ್ರೀನಿವಾಸ ಮಾನೆ ಸೇರಿದಂತೆ ಕಾಂಗ್ರೆಸ್‌ ಮುಖಂಡರು, ಕಾರ್ಯಕರ್ತರು ಸಮಾವೇಶದಲ್ಲಿ ಹಾಜರಿದ್ದರು. ಹಳ್ಳಿಗಳಿಂದ 5 ಸಾವಿರದಷ್ಟು ಕಾಂಗ್ರೆಸ್‌ ಕಾರ್ಯಕರ್ತರು ಸಮಾವೇಶದಲ್ಲಿ ಭಾಗಿಯಾಗಿದ್ದು ವಿಶೇಷವಾಗಿತ್ತು. 

Advertisement

Udayavani is now on Telegram. Click here to join our channel and stay updated with the latest news.

Next