Advertisement
ಬಗರ್‌ಹುಕುಂ ಸಾಗುವಳಿ ಭೂಮಿಗೆ ಹಕ್ಕುಪತ್ರ ನೀಡಲು ಮಾರ್ಚ್ ಅಂತ್ಯದ ಗಡುವು ವಿಧಿಸಿದ್ದರೂ ಅರ್ಧಕ್ಕಿಂತಲೂ ಹೆಚ್ಚು ಕೆಲಸ ಬಾಕಿ ಇರುವ ಬಗ್ಗೆ ಹಾಗೂ ನಗರ ಅಕ್ರಮ-ಸಕ್ರಮ (94ಸಿಸಿ) ಮತ್ತು ಗ್ರಾಮೀಣ ಅಕ್ರಮ-ಸಕ್ರಮ (94 ಸಿ) ಯೋಜನೆಯಡಿ ಅರ್ಜಿಗಳು ಇತ್ಯರ್ಥವಾಗದ ಬಗ್ಗೆ ಈ ರೀತಿ ತಮ್ಮ ಬೇಸರ ಹೇಳಿಕೊಂಡಿದ್ದು ಸ್ವತಃ ಕಂದಾಯ ಸಚಿವ ಕಾಗೋಡು.ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಗರ್‌ಹುಕುಂ ಅರ್ಜಿಗಳನ್ನು ಇತ್ಯರ್ಥಪಡಿಸಲು ಶಾಸಕರ ಅಧ್ಯಕ್ಷತೆಯಲ್ಲಿ ಸಮಿತಿ ರಚಿಸಲಾಗಿತ್ತು. ಸಭೆಗೆ ಶಾಸಕರು ಸರಿಯಾಗಿ ಬಾರದೆ ಅರ್ಜಿಗಳು ವಿಲೇವಾರಿಯಾಗುತ್ತಿಲ್ಲ ಎಂದು ಹೆಚ್ಚುವರಿ ಸಮಿತಿಗಳನ್ನು ಮಾಡಲು ಹೊರಟರೆ ಅದಕ್ಕೂ ತಾವೇ ಅಧ್ಯಕ್ಷರಾಗಬೇಕು ಎಂದು ಶಾಸಕರು ಹೇಳುತ್ತಾರೆ. ಇನ್ನು ಕಾಲಮಿತಿಯಲ್ಲಿ ಕೆಲಸ ನಿರ್ವಹಿಸುವಂತೆ ಸರ್ಕಾರ ಸಾಕಷ್ಟು ಬಾರಿ ಸುತ್ತೋಲೆ, ಆದೇಶ ಹೊರಡಿಸಿದರೂ ಅಧಿಕಾರಿಗಳು ಅದನ್ನು ಪಾಲಿಸುತ್ತಿಲ್ಲ. ಹಾಗೆಂದು ಅವರ ವಿರುದ್ಧ ಕಠಿಣ ಕ್ರಮ ಕೈಗೊಂಡು ಅಮಾನತುಗೊಳಿಸಿದರೆ ಕೆಲಸ ಮಾಡಲು ಅಧಿಕಾರಿಗಳೇ ಇಲ್ಲ ಎನ್ನುವಂತಾಗುತ್ತದೆ. ಈ ಸಂಕಟದಲ್ಲಿ ನಾನಿದ್ದೇನೆ ಎಂದು ಹೇಳಿದರು.
ಬಗರ್‌ಹುಕುಂ ಸಾಗುವಳಿ ಭೂಮಿಗೆ ಹಕ್ಕುಪತ್ರ ನೀಡಲು ಸರ್ಕಾರ ಅರ್ಜಿ ಆಹ್ವಾನಿಸಿದ್ದು, ಮಾರ್ಚ್ ಅಂತ್ಯದೊಳಗೆ ಅರ್ಜಿ ಸಲ್ಲಿಸಿದವರಿಗೆ ಹಕ್ಕುಪತ್ರ ನೀಡಲು ತೀರ್ಮಾನಿಸಿತ್ತು. ಅದರಂತೆ ಸುಮಾರು 5 ಲಕ್ಷ ಅರ್ಜಿಗಳು ಬಂದಿದ್ದು, ಇದುವರೆಗೆ ಎರಡು ಲಕ್ಷ ಅರ್ಜಿ ಮಾತ್ರ ವಿಲೇವಾರಿಯಾಗಿ ಇನ್ನೂ ಮೂರು ಲಕ್ಷ ಅರ್ಜಿ ಬಾಕಿ ಉಳಿದಿದೆ. ಇವುಗಳನ್ನು ತ್ವರಿತವಾಗಿ ವಿಲೇವಾರಿ ಮಾಡಲು ಅರ್ಜಿ ಸಮಿತಿಯ ಮೂವರು ಸದಸ್ಯರದಲ್ಲಿ ಇಬ್ಬರು ಇದ್ದರೂ ಇತ್ಯರ್ಥಪಡಿಸುವಂತೆ ಸೂಚಿಸಲಾಗಿತ್ತು. ಅದರಂತೆ ಇಬ್ಬರು ಕುಳಿತು ಅರ್ಜಿ ಇತ್ಯರ್ಥಪಡಿಸಿದರೂ ಹಕ್ಕುಪತ್ರ ವಿತರಿಸಲು ಅಡ್ಡಿಪಡಿಸಲಾಗುತ್ತಿದೆ ಎಂದು ಸಚಿವರು ಬೇಸರ ವ್ಯಕ್ತಪಡಿಸಿದರು. ಈ ಮಧ್ಯೆ ಬಾಕಿ ಅರ್ಜಿಗಳ ಸಂಖ್ಯೆ ಹೆಚ್ಚಾಗಿರುವುದರಿಂದ ತಾಲೂಕಿನಲ್ಲಿ ಹೆಚ್ಚುವರಿ ಸಮಿತಿ ರಚಿಸಲು ತೀರ್ಮಾನಿಸಲಾಗಿದೆ. ಆದರೆ, ಈ ಸಮಿತಿಗೂ ತಮ್ಮನ್ನೇ ಅಧ್ಯಕ್ಷರನ್ನಾಗಿ ಮಾಡಬೇಕು ಎಂದು ಕೆಲವು ಶಾಸಕರು ಹೇಳುತ್ತಿದ್ದಾರೆ. ಮೊದಲ ಸಮಿತಿಯಲ್ಲೇ ಸರಿಯಾಗಿ ಕೆಲಸ ನಿರ್ವಹಿಸದ ಶಾಸಕರನ್ನು ಎರಡನೇ ಸಮಿತಿಗೂ ಅಧ್ಯಕ್ಷರನ್ನಾಗಿ ಮಾಡಿದರೆ ಹೇಗೆ ಕೆಲಸವಾಗುತ್ತದೆ ಎಂದು ಅವರು ಪ್ರಶ್ನಿಸಿದರು.
Related Articles
Advertisement
ಅಕ್ರಮ-ಸಕ್ರಮ:ನಗರ ಮತ್ತು ಗ್ರಾಮೀಣ ಪ್ರದೇಶದಲ್ಲಿ ಸರ್ಕಾರಿ ಜಮೀನಿನಲ್ಲಿ ನಿರ್ಮಿಸಿಕೊಂಡಿರುವ ಮನೆಗಳನ್ನು 94ಸಿ ಮತ್ತು 94 ಸಿಸಿ ಅಡಿ ಸಕ್ರಮ ಮಾಡಿಕೊಡಲು ಸಲ್ಲಿಸಿರುವ ಅರ್ಜಿಗಳನ್ನು ಕಾಲಮಿತಿಯೊಳಗೆ ಇತ್ಯರ್ಥಪಡಿಸಲು ವೇಳಾಪಟ್ಟಿ ಸಿದ್ಧಪಡಿಸಲಾಗಿದೆ. ಅಲ್ಲದೆ, ಗ್ರಾಮೀಣ ಪ್ರದೇಶದಲ್ಲಿ ಗ್ರಾಮ ಲೆಕ್ಕಿಗರು, ಕಾರ್ಯದರ್ಶಿ ಮತ್ತು ಕಂದಾಯ ಇನ್ಸ್‌ಪೆಕ್ಟರ್ ಅವರು ಗ್ರಾಮನಕ್ಷೆ ಪರಿಶೀಲಿಸಿ ಯಾವ ಸರ್ವೇ ನಂಬರ್‌ನಲ್ಲಿ ಮನೆ ಇದೆ ಎಂಬುದನ್ನು ಗುರುತಿಸಿ ಸ್ಥಳದಲ್ಲೇ ಮನೆ ಮಾಲೀಕರಿಂದ ಅರ್ಜಿ ಪಡೆದು ಸಕ್ರಮಕ್ಕೆ ಕ್ರಮ ಕೈಗೊಳ್ಳಬೇಕು ಎಂದು ನಿರ್ದೇಶನ ನೀಡಲಾಗಿದೆ. ಇನ್ನು ಎರಡು ತಿಂಗಳಲ್ಲಿ ಅಕ್ರಮ ಮನೆಗಳನ್ನು ಸಕ್ರಮಗೊಳಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು. ಮತ್ತೆ ಅರ್ಜಿ ಸಲ್ಲಿಸಲು ಅವಕಾಶ
ಬಗರ್‌ಹುಕುಂ ಹಾಗೂ ನಗರ ಮತ್ತು ಗ್ರಾಮೀಣ ಅಕ್ರಮ-ಸಕ್ರಮಕ್ಕೆ ಅರ್ಜಿ ಸಲ್ಲಿಸಲು ಮತ್ತೆ ಒಂದು ಅಥವಾ ಎರಡು ತಿಂಗಳು ಅವಕಾಶ ನೀಡುವ ಬಗ್ಗೆ ಸದ್ಯದಲ್ಲೇ ತೀರ್ಮಾನ ಕೈಗೊಳ್ಳಲಾಗುವುದು ಎಂದು ಕಂದಾಯ ಸಚಿವ ಕಾಗೋಡು ತಿಮ್ಮಪ್ಪ ಹೇಳಿದ್ದಾರೆ. ಬಗರ್ ಹುಕುಂ ಸಾಗುವಳಿ ಪತ್ರಕ್ಕೆ ಅರ್ಜಿ ಸಲ್ಲಿಸಲು ಡಿಸೆಂಬರ್ ಕೊನೆಯವರೆಗೆ ಕಾಲಾವಕಾಶ ವಿಸ್ತರಿಸಲಾಗಿತ್ತು. ಆದರೂ ಇನ್ನೂ ಸಾಕಷ್ಟು ಮಂದಿ ಅರ್ಜಿ ಸಲ್ಲಿಸದ ಕಾರಣ ಅವಧಿ ವಿಸ್ತರಿಸುವ ಅನಿವಾರ್ಯತೆ ಇದೆ. ಅದೇ ರೀತಿ ಅಕ್ರಮ-ಸಕ್ರಮಕ್ಕೆ ಅರ್ಜಿ ಸಲ್ಲಿಸುವ ಕಾಲಮಿತಿಯನ್ನೂ ವಿಸ್ತರಿಸಬೇಕಾಗಿದೆ. ಹೀಗಾಗಿ ಅರ್ಜಿ ಸಲ್ಲಿಕೆ ಅವಧಿ ವಿಸ್ತರಿಸಲಾಗುವುದು ಎಂದು ತಿಳಿಸಿದರು.