ನವದೆಹಲಿ/ಇಸ್ಲಾಮಾಬಾದ್: ಜಮ್ಮು ಮತ್ತು ಕಾಶ್ಮೀರದ ವಿಶೇಷ ಸ್ಥಾನಮಾನ ರದ್ದಾದ ಬಳಿಕ ಒಂದಿಲ್ಲೊಂದು ಹೇಳಿಕೆ ನೀಡುತ್ತಾ ಭಾರತವನ್ನು ಪ್ರಚೋದಿಸುವ ಕೆಲಸವನ್ನು ಪಾಕ್ ಮುಂದುವರಿಸಿದೆ. ಭಾರತದ ಜತೆ ಯುದ್ಧದ ಪ್ರಶ್ನೆಯೇ ಇಲ್ಲ ಎಂದು ಪಾಕ್ ಪ್ರಧಾನಿ ಇಮ್ರಾನ್ ಖಾನ್ ಹೇಳಿಕೆ ನೀಡಿದ ಬೆನ್ನಲ್ಲೇ, ಅಲ್ಲಿನ ಸೇನಾ ಮುಖ್ಯಸ್ಥರು ಮತ್ತೆ ಯುದ್ಧದ ಮಾತುಗಳನ್ನಾಡಿದ್ದಾರೆ.
ಶುಕ್ರವಾರ ಇಸ್ಲಾಮಾಬಾದ್‌ನ ಕಾರ್ಯಕ್ರಮವೊಂದರಲ್ಲಿ ಮಾತನಾಡಿರುವ ಸೇನಾ ಮುಖ್ಯಸ್ಥ ಖಮರ್ ಬಾಜ್ವಾ, ‘ಕಾಶ್ಮೀರವು ನಮಗೆ ಇನ್ನೂ ಪೂರ್ಣಗೊಳ್ಳದಂಥ ಅಜೆಂಡಾವಾಗಿದೆ’ ಎಂದಿದ್ದಾರೆ. ಅಷ್ಟೇ ಅಲ್ಲ, ಯುದ್ಧದ ಕಾರ್ಮೋಡ ಆವರಿಸಿದೆ ಎಂದೂ ಹೇಳುವ ಮೂಲಕ ಭಾರತವನ್ನು ಪ್ರಚೋದಿಸುವ ಕೆಲಸಕ್ಕೆ ಕೈಹಾಕಿದ್ದಾರೆ.
‘ಕಾಶ್ಮೀರಿಗರನ್ನು ನಾವು ಕೈಬಿಡುವುದಿಲ್ಲ ಎಂದು ನಾನು ಹೇಳಲಿಚ್ಛಿಸುತ್ತೇನೆ. ಪಾಕಿಸ್ತಾನೀಯರು ಮತ್ತು ಕಾಶ್ಮೀರಿಗರ ಹೃದಯ ಒಟ್ಟಿಗೇ ಬಡಿಯುತ್ತದೆ. ಕಾಶ್ಮೀರದ ಜನರಿಗಾಗಿ ಯಾವುದೇ ರೀತಿಯ ತ್ಯಾಗಕ್ಕೂ ಪಾಕ್ ಸೇನೆ ಸಿದ್ಧವಿದೆ. ಅಲ್ಲಿ ಸಂಭಾವ್ಯ ಸಂಘರ್ಷದ ಸುಳಿವು ಸಿಗುತ್ತಿದೆ. ಯುದ್ಧದ ಕಾರ್ಮೋಡ ಆವರಿಸುತ್ತಿದೆ’ ಎಂದು ಬಾಜ್ವಾ ಹೇಳಿದ್ದಾರೆ.
ಕಂಠಾಭಿದಮನಿ ಇದ್ದಂತೆ: ಇದೇ ಕಾರ್ಯಕ್ರಮದಲ್ಲಿ ಮಾತನಾಡಿರುವ ಪಾಕ್ ಪ್ರಧಾನಿ ಇಮ್ರಾನ್ ಖಾನ್, ‘ಕಾಶ್ಮೀರವು ಪಾಕಿಸ್ತಾನದ ಜೀವನಾಡಿ ಇದ್ದಂತೆ. ಅದಕ್ಕೆ ನೀಡಿದ್ದ ವಿಶೇಷ ಸ್ಥಾನಮಾನವನ್ನು ರದ್ದು ಮಾಡಿರುವುದು, ಪಾಕಿಸ್ತಾನದ ಭದ್ರತೆ ಮತ್ತು ಸಮಗ್ರತೆಗೆ ಸವಾಲೆಸೆದಂತೆ’ ಎಂದು ಹೇಳಿದ್ದಾರೆ. ಅಲ್ಲದೆ, ಭಾರತದ ಅಣ್ವಸ್ತ್ರಗಳ ಸುರಕ್ಷತೆ ಮತ್ತು ಭದ್ರತೆಯನ್ನು ಗಂಭೀರವಾಗಿ ಪರಿಗಣಿಸುವಂತೆ ನಾವು ಅಂತಾರಾಷ್ಟ್ರೀಯ ಸಮುದಾಯವನ್ನು ಕೇಳಿಕೊಂಡಿದ್ದೇನೆ. ಒಂದು ವೇಳೆ ಈ ಕುರಿತು ನಿರ್ಲಕ್ಷ್ಯ ವಹಿಸಿದರೆ, ನಂತರ ಆಗುವ ಅನಾಹುತಗಳಿಗೆ ಜಾಗತಿಕ ಸಮುದಾಯವೇ ಹೊಣೆಯಾಗುತ್ತದೆ ಎಂದೂ ಖಾನ್ ಎಚ್ಚರಿಸಿದ್ದಾರೆ.
ದೇಶದ್ರೋಹ ಕೇಸ್: ಇದೇ ವೇಳೆ, ಕಾಶ್ಮೀರ ಕುರಿತು ಟ್ವೀಟ್ ಮಾಡಿದ್ದ ಜಮ್ಮು -ಕಾಶ್ಮೀರ ಪೀಪಲ್ಸ್ ಮೂವ್‌ಮೆಂಟ್ ನಾಯಕಿ ಶೆಹ್ಲಾ ರಶೀದ್ ವಿರುದ್ಧ ದೇಶದ್ರೋಹದ ಕೇಸು ದಾಖಲಾಗಿದೆ. ಕಣಿವೆ ರಾಜ್ಯದಲ್ಲಿ ಸಶಸ್ತ್ರ ಪಡೆಗಳು ಮನೆಗಳಿಗೆ ನುಗ್ಗಿ ದಾಂದಲೆ ನಡೆಸುತ್ತಿದ್ದು, ನಾಗರಿಕರಿಗೆ ಚಿತ್ರಹಿಂಸೆ ನೀಡುತ್ತಿದೆ ಎಂದು ಆರೋಪಿಸಿ ಶೆಹ್ಲಾ ಆ.17ರಂದು ಸರಣಿ ಟ್ವೀಟ್‌ಗಳನ್ನು ಮಾಡಿದ್ದರು. ಈ ಹಿನ್ನೆಲೆಯಲ್ಲಿ ಸುಪ್ರೀಂ ಕೋರ್ಟ್ ನ ವಕೀಲ ಅಲಾಖ್ ಅಲೋಕ್ ಶ್ರೀವಾಸ್ತವ ಎಂಬವರು ಆಕೆಯ ವಿರುದ್ಧ ದೂರು ನೀಡಿದ್ದಾರೆ. ಸುಳ್ಳು ಟ್ವೀಟ್ ಮಾಡುವ ಮೂಲಕ ಸೇನೆಯ ವರ್ಚಸ್ಸಿಗೆ ಧಕ್ಕೆ ತರುವ ಮತ್ತು ದೇಶದಲ್ಲಿ ಹಿಂಸಾಚಾರಕ್ಕೆ ಕುಮ್ಮಕ್ಕು ನೀಡುವ ಕೆಲಸವನ್ನು ಶೆಹ್ಲಾ ಮಾಡಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.
ದಾಳಿ ನಡೆದರೆ, ನಾವೇನೂ ಸುಮ್ಮನಿರಲ್ಲ: ನಾಯ್ಡು
‘ಪಾಕಿಸ್ತಾನವು ಗಂಭೀರ ಪ್ರಚೋದನೆ ನೀಡುತ್ತಿದ್ದರೂ ಭಾರತ ಸಹನೆ ಕಳೆದುಕೊಂಡಿಲ್ಲ. ಒಂದು ವೇಳೆ, ದಾಳಿ ನಡೆದಿದ್ದೇ ಆದಲ್ಲಿ, ಅದಕ್ಕೆ ತಕ್ಕ ಪ್ರತ್ಯುತ್ತರ ನೀಡಲು ನಾವು ಸನ್ನದ್ಧರಾಗಿದ್ದೇವೆ.’ ಹೀಗೆಂದು ಪಾಕಿಸ್ತಾನಕ್ಕೆ ಖಡಕ್ ಸಂದೇಶ ರವಾನಿಸಿರುವುದು ಉಪರಾಷ್ಟ್ರಪತಿ ಎಂ.ವೆಂಕಯ್ಯ ನಾಯ್ಡು. ನವದೆಹಲಿಯ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ನಾಯ್ಡು, ‘ಭಾರತ ಯಾವತ್ತೂ ಶಾಂತಿ ಮತ್ತು ಸಹಕಾರದ ಮೌಲ್ಯವನ್ನು ಗೌರವಿಸುತ್ತಾ ಬಂದಿದೆ. ಇತಿಹಾಸವನ್ನು ನೋಡಿದರೆ ತಿಳಿಯುತ್ತದೆ, ಭಾರತ ಎಂದೂ ಯಾವ ದೇಶದ ಮೇಲೂ ಆಕ್ರಮಣ ನಡೆಸಿಲ್ಲ. ಅನೇಕರು ಭಾರತದ ಮೇಲೆ ಆಕ್ರಮಣ ಮಾಡಿದರು, ನಮ್ಮನ್ನು ಆಳಿದರು, ದೇಶವನ್ನು ಹಾಳು ಮಾಡಿದರು, ವಂಚಿಸಿದರು… ಆದರೆ ನಾವು ಸಹನೆ ಕಾಯ್ದುಕೊಂಡಿದ್ದೆವು. ಆದರೆ, ಈಗ ಕೆಲವರು ನಮ್ಮನ್ನು ಪ್ರಚೋದಿಸುತ್ತಿದ್ದಾರೆ. ನಮ್ಮನ್ನೇನಾದರೂ ಕೆಣಕಲು ಬಂದರೆ, ಅವರು ಜೀವಮಾನದಲ್ಲೇ ಮರೆಯಲಾಗದಂಥ ಪ್ರತ್ಯುತ್ತರವನ್ನು ನಾವು ನೀಡುತ್ತೇವೆ’ ಎಂದು ಎಚ್ಚರಿಸಿದ್ದಾರೆ.