Advertisement

ನಾನು ಕಪಾಳಕ್ಕೆ ಹೊಡೆದಿಲ್ಲ, ಅವರೇ ಕುಡಿದಿರಬೇಕು: ಎಂ.ಪಿ.ಕುಮಾರಸ್ವಾಮಿ ಸ್ಪಷ್ಟನೆ

11:52 AM Jan 29, 2022 | Team Udayavani |

ಬೆಂಗಳೂರು : ನಾನು ಪೊಲೀಸರ ಕಪಾಳಕ್ಕೆ ಹೊಡೆದಿಲ್ಲ, ನನ್ನನ್ನು ಶಾಸಕ ಎಂದು ಗುರುತಿಸುವಲ್ಲಿ ಅವರೇ ವಿಫಲರಾಗಿ ವಿವಾದ ಸೃಷ್ಟಿಸಿದರು ಎಂದು ಶಾಸಕ ಎಂ.ಪಿ.ಕುಮಾರಸ್ವಾಮಿ ಸ್ಪಷ್ಟನೆ ನೀಡಿದ್ದಾರೆ.

Advertisement

ವಿಧಾನಸೌಧದಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಅವರು, ಪೊಲೀಸರು ನನ್ನನ್ನು ತಡೆಯುವುದು ಇದೇ‌ ಮೊದಲಲ್ಲ. ಹಿಂದೆ ವಿಧಾನಸೌಧ ಪ್ರವೇಶ ಮಾಡುವಾಗಲೂ ಹೀಗೆ ಆಗಿತ್ತು. ಶಾಸಕರು ಎಂದರೆ ಹೀಗೆ ಇರಬೇಕು ಎಂದು ಪೊಲೀಸರು ಭಾವಿಸಿರಬೇಕು. ವಿಧಾನಸೌಧ, ಶಾಸಕರ ಭವನಕ್ಕೆ ಬರುವ ಶಾಸಕರ ಹಿಂದೆ ಹತ್ತಾರು ಜನ ಇರಬೇಕು, ಮೈ ತುಂಬಾ ಬಂಗಾರ ಇರಬೇಕೆಂದು ಅವರು ಭಾವಿಸಿರಬಹುದು ಎಂದು ಬೇಸರ ವ್ಯಕ್ತಪಡಿಸಿದರು.

ನಾನು ಶಾಸಕರ ಭವನಕ್ಕೆ ಬಂದಾಗ ಪೊಲೀಸರು‌ ಹೊಯ್ಸಳ ವಾಹನದಲ್ಲಿ ಗೇಟ್ ಗೆ ಅಡ್ಡವಾಗಿ ನಿಂತಿದ್ದರು. ನಾನು ಎಂಎಲ್ಎ. ಶಾಸಕರ ಭವನದ ರೂಂಗೆ ಹೋಗಬೇಕು ಎಂದರೂ ಬಿಡಲಿಲ್ಲ. ನನ್ನ ಕಾರಿಗೆ ಎಂಎಲ್ಎ ಪಾಸ್ ಇದ್ದರೂ ಉದ್ದಟತನ ಮಾಡಿದರು. ಹೀಗಾಗಿ ನಾನೇ ಕೆಳಗಿಳಿದು ಮಾತನಾಡಿದೆ. ಆದರೆ ಕಪಾಳಕ್ಕೆ ಹೊಡೆದಿಲ್ಲ. ನಂತರ ಆತ ಮೇಲಾಧಿಕಾರಿಗೆ ಕರೆ ಮಾಡಿ ವಿವರಣೆ ನೀಡಿದ.ಅವರು ಬಂದ ನಂತರ ಪ್ರಕರಣ ತಿಳಿ ಆಗಿದೆ. ಬಹುಶಃ ಆತ ಕುಡಿದಿರಬೇಕು. ಅದಕ್ಕೆ ಈ ರೀತಿ ಆಗಿದೆ ಎಂದು ವಿವರಿಸಿದರು.

ನಾನು ಈ ಪ್ರಕರಣ ಬೆಳೆಸುವುದಿಲ್ಲ. ಆದರೂ ಗೃಹ ಸಚಿವರಿಗೆ ವಿವರಣೆ ನೀಡಿದ್ದೇನೆ. ಇಲಾಖೆ ಈ ಬಗ್ಗೆ‌ ನೋಡಿಕೊಳ್ಳುತ್ತದೆ ಎಂದು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next