Advertisement
ಅಂದು…ಬಾಲ್ಯದಿಂದಲೂ ನನ್ನದು ಸ್ವಲ್ಪ ಸಪೂರ (ತೆಳ್ಳಗಿನ) ದೇಹ ಪ್ರಕೃತಿ. ಚಿಕ್ಕಂದಿನಲ್ಲಿ ಅಕ್ಕ ಮತ್ತು ತಮ್ಮ ನನ್ನನ್ನು ಸಪುಲ್ಮಾಯಿ ಎಂದು ಛೇಡಿಸುತ್ತಿದ್ದರು. ಕಾಲೇಜು ಮೆಟ್ಟಿಲು ಹತ್ತಿದರೂ, ನನ್ನನ್ನು ಏಳನೇ ಅಥವಾ ಎಂಟನೇ ಕ್ಲಾಸಾ? ಅಂತ ಕೇಳುತ್ತಿದ್ದರು. ಮದುವೆ ನಿಶ್ಚಯವಾಗುವಾಗ ನಮ್ಮನೆಯವರು ಕೂಡಾ, “ಹುಡುಗಿ ತುಂಬಾ ಸಪೂರ ಅಲ್ವಾ?’ ಎಂದಿದ್ದರಂತೆ. ಆಗ ನಾನು, “ಒಂದಲ್ಲ ಒಂದು ದಿನ ನಾನು ದಪ್ಪ ಆಗೇ ಆಗುತ್ತೇನೆ’ ಎಂದಿದ್ದಕ್ಕೆ, “ನೀನು ದಪ್ಪ ಆಗಬೇಕಾದರೆ ನಿನಗೆ ಜೇಡಿಮಣ್ಣು ಲೇಪಿಸಬೇಕು’ ಎಂದು ಹೇಳಿ ನಕ್ಕಿದ್ದರು. “ನಾನೇನು ಗಣಪತಿಯಾ? ಜೇಡಿಮಣ್ಣು ಲೇಪಿಸಲು’ ಎಂದು ನಾನು ಸಿಟ್ಟಾಗಿದ್ದೆ. ಅಳಿಯನಾಗುವವನ ಆ ಮಾತು ಕೇಳಿ ನಮ್ಮಮ್ಮ ಪಣ ತೊಟ್ಟರು, “ಮದುವೆ ಸಮಯದೊಳಗೆ ಮಗಳನ್ನು ದಪ್ಪ ಮಾಡಿ ತೋರಿಸುತ್ತೇನೆ’ ಅಂತ.
Related Articles
ಬೇಕು ಎಂದಾಗ ಏರದ ತೂಕ ಬೇಡವೆಂದರೂ ಏರಲು ಶುರುವಾಯಿತು. ತೂಕದ ಕಡ್ಡಿ ತಿರುಗಿ ನಿಂತು ಅರವತ್ಮೂರು ತೋರಿಸಿತು. ಒಂದು ದಿನ ನಾನು ಇವರ ಜೊತೆ ಬೈಕ್‌ನಲ್ಲಿ ಹೋಗುತ್ತಿದ್ದೆ, ಬೈಕ್ ಯಾಕೋ ಕೊಂಯ್ ಎಂದು ಶಬ್ದ ಮಾಡುತ್ತಿತ್ತು. “ಏನ್ರೀ ಅದು ಶಬ್ದ?’ ಎಂದೆ. “ಅದು ಬೈಕ್ ಅಳ್ತಾ ಇದೆ, ನನ್ನ ಕೈಯಲ್ಲಿ ಎಳೀಲಿಕ್ಕೆ ಆಗುವುದಿಲ್ಲ ಹಿಂದೆ ಭಾರ ಜಾಸ್ತಿಯಾಗಿದೆ ಎಂದು’ ಅಂತ ಎನ್ನಬೇಕೆ! ಎಲಾ ಇವರ, ವರ್ಷಗಳ ಹಿಂದೆ ಜೇಡಿಮಣ್ಣು ಲೇಪಿಸಬೇಕು ಅಂದವರ ಬಾಯಿಂದ ಇಂಥ ಮಾತೇ? ಆಗ ನನಗೆ ನಾನೇ ಪ್ರತಿಜ್ಞೆ ಮಾಡಿದೆ. ಏನಾದರೂ ಆಗಲಿ, ನಾನು ಸಪೂರ ಆಗಿ ಇವರಿಗೆ ತೋರಿಸಲೇಬೇಕು ಎಂದು. ಅವತ್ತು ಅಮ್ಮನ ಪಣ, ಈಗ ಮಗಳದ್ದು.
Advertisement
ಮರುದಿನದಿಂದಲೇ ಶುರುವಾಯಿತು ನನ್ನ ಡಯಟ್. ರಾತ್ರಿ ಅನ್ನದ ಬದಲು ಚಪಾತಿ ತಿಂತೀನಿ ಅಂದೆ. ಉಳಿದ ಮೂವರೂ ಕೈಯೆತ್ತಿದರು, “ನನಗೂ ಚಪಾತಿ’ ಎಂದು. ನನಗೆ ಡಯಟ್, ನಿಮಗೇನು? ಎಂದು ಬಾಯಿ ಬಿಡಲಾಗುತ್ತದೆಯೇ. ಯಾಕಂದ್ರೆ, ಸಪೂರ ಆಗ್ತಿನಿ ಅಂತ ಮೌನ ಪ್ರತಿಜ್ಞೆ ಮಾಡಿದ್ದನ್ನು ಯಾರಿಗೂ ಹೇಳಿರಲಿಲ್ಲ. ತೆಪ್ಪಗೆ ನಾಲ್ಕೂ ಮಂದಿಗೆ ಚಪಾತಿ ಮಾಡಲು ಆರಂಭಿಸಿದೆ. ಶುರುವಾಯಿತು ರಾಗ, ಬೆಳಗ್ಗೆ ಅನ್ನಕ್ಕೆ ಮಾಡಿದ ಸಾರು, ಹುಳಿ ಇದಕ್ಕೆ ಸೇರುವುದಿಲ್ಲ ಎಂದು. ಸರಿ ಮತ್ತೆ ಶುರು ನನ್ನ ಗುದ್ದಾಟ, ಚಪಾತಿಗೆ ಆಗುವಂಥ ಪಲ್ಯ, ಚಪಾತಿ ಎಲ್ಲಾ ಮಾಡಿ ಹಸಿವು ಜಾಸ್ತಿಯಾಯಿತೋ ಏನೋ ಎರಡರ ಬದಲು ಮೂರು ಚಪಾತಿ ತಿನ್ನತೊಡಗಿದೆ. ತೂಕ ಇಳಿಯಲಿಲ್ಲ.
ಮತ್ತೆ ಶುರು ಇನ್ನೊಂದು ಪ್ರಯೋಗ, ವಾಕಿಂಗ್ ಹೋಗುವುದು. ಒಬ್ಬಳೇ ಹೋಗಲು ಬೇಜಾರು ಎಂದು ಪಾಪದ ಮಗಳನ್ನು ಜೊತೆಯಲ್ಲಿ ಎಳೆದುಕೊಂಡು ಹೊರಟೆ. ಸಿಟಿಗೆ ಹೋದರೆ ಮೂರು ನಾಲ್ಕು ಕಿ.ಮೀ. ನಡೆದೇ ಹೋಗುವುದು, ಮತ್ತೆ ಇವರ ಕೈಯಲ್ಲಿ ಬೈಸಿಕೊಳ್ಳುವುದು. “ಎಷ್ಟು ಕಂಜೂಸ್ತನ ಮಾಡ್ತೀಯಾ? ರಿಕ್ಷಾದಲ್ಲಿ ಹೋಗಲಿಕ್ಕೆ ಏನು?’ ಎಂದು. ನನ್ನ ಎಲ್ಲಾ ಪ್ರಯತ್ನಗಳು ಹೊಳೆಯಲ್ಲಿ ಹುಣಿಸೆಹಣ್ಣು ಕಿವುಚಿದ ಹಾಗೇ ಆಯಿತು.
ನಾವು ಶಾಲೆಯಲ್ಲಿರುವಾಗ ಓದಿದ್ದ ಕೆ.ಎಸ್.ನರಸಿಂಹಸ್ವಾಮಿಯವರ ಪದ್ಯ ನೆನಪಿಗೆ ಬಂತು, “ಚಳಿಗಾಲ ಬಂದಾಗ ಎಷ್ಟು ಚಳಿ ಎಂದರು, ಬಂತಲ್ಲ ಬೇಸಿಗೆ ಕೆಟ್ಟ ಬಿಸಿಲೆಂದರು’ ಅಂತೇನೋ. ಅದೇ ತರಹ ಸಪೂರ ಇದ್ದರೆ ಸಣಕಲು ಕಡ್ಡಿ ಅಂತಾರೆ, ದಪ್ಪಗಾದರೆ ಡುಮ್ಮಿ ಅಂತಾರೆ. ಈ ಜನರನ್ನು ಮೆಚ್ಚಿಸಲು ಬ್ರಹ್ಮನಿಂದಲೂ ಸಾಧ್ಯವಿಲ್ಲ. ಇನ್ನು ನನ್ನಿಂದಾಗುತ್ತದೆಯೇ ಎಂದು ಸಪೂರ ಆಗುವ ಪ್ರಯತ್ನ ಕೈಬಿಟ್ಟೆ.
ನನ್ನ ಪ್ರಾಣಪ್ರಿಯವಾದ ಹಾಲು, ಮೊಸರು, ಬೆಣ್ಣೆ, ತುಪ್ಪಗಳನ್ನು ಪುನಃ ತಿನ್ನಲು ಪ್ರಾರಂಭಿಸಿದೆ. ಆದರೆ, ಸಿಟಿಗೆ ಮಾತ್ರ ನಡೆದುಕೊಂಡೇ ಹೋಗುತ್ತೇನೆ. ನಿಜಕ್ಕೂ ನಾನು ಕಂಜೂಸಾ? ಅಂತ ಪ್ರಶ್ನೆ ಎದ್ದಾಗ, ನಾಲ್ಕು ನಾಲ್ಕು ಹೆಜ್ಜೆಯ ಅಂತರದಲ್ಲಿರುವ ಅಂಗಡಿಗಳ ಮುಂದೆಲ್ಲ ನಿಲ್ಲಿಸಿ ನನಗಾಗಿ ಕಾಯಲು ರಿಕ್ಷಾದವರೇನು ನನ್ನ ಸಂಬಂಧಿಕರಲ್ಲವಲ್ಲ ಅಂತ ಸಮಾಧಾನ ಮಾಡಿಕೊಳ್ಳುತ್ತೇನೆ. ನೀವೇ ಹೇಳಿ, ಭಗವಂತನ ಇಚ್ಛೆಯಿಲ್ಲದಿದ್ದರೆ ನಾವೆಷ್ಟೇ ಪ್ರಯತ್ನಿಸಿದರೂ ಯಾವುದೇ ಕಾರ್ಯ ಸಾಧ್ಯವಿಲ್ಲ ತಾನೇ?
– ಅನಿತಾ ಪೈ.