Advertisement

ಸುಳ್ಳು ಹೇಳಿದ್ರೆ ಸುಮ್ಮನಿರಲ್ಲ

12:18 PM Jan 25, 2018 | Team Udayavani |

ಬೆಂಗಳೂರು: “ರಾಜ್ಯದಲ್ಲಿ ಹಿಂದೂ ಸಂಘಟನೆಗಳ ಕಾರ್ಯಕರ್ತರ ಹತ್ಯೆಯಾಗುತ್ತಿದ್ದರೂ ರಾಜ್ಯ ಸರ್ಕಾರ ಕಣ್ಮುಚ್ಚಿ ಕುಳಿತಿದೆ ಎಂದು ಸುಳ್ಳು ಆರೋಪ ಮಾಡುತ್ತಿರುವ ಬಿಜೆಪಿ ಇನ್ನು ಮುಂದೆ ಸುಳ್ಳು ಹೇಳಿದರೆ ನಾವು ಸುಮ್ಮನಿರಲ್ಲ,’ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ದಿನೇಶ್‌ ಗುಂಡೂರಾವ್‌ ಎಚ್ಚರಿಕೆ ನೀಡಿದ್ದಾರೆ.

Advertisement

ಕೆಪಿಸಿಸಿ ಕಚೇರಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಯಾರಾದರು ಹಿಂದೂಗಳು ಸತ್ತರೆ ಬಿಜೆಪಿಯವರು ಅಲ್ಲಿಗೆ ರಣ ಹದ್ದುಗಳಂತೆ ಓಡಿ ಹೋಗುತ್ತಾರೆ. ಅದಕ್ಕೆ ಕೋಮು ಬಣ್ಣ ಬಳಿದು ರಾಜಕೀಯ ಲಾಭಕ್ಕಾಗಿ ಹೋರಾಟ ಮಾಡುತ್ತಿದ್ದಾರೆ. ಇದುವರೆಗೂ ಸುಳ್ಳುಗಳನ್ನು ಹೇಳಿರುವುದನ್ನು ಸಹಿಸಿಕೊಂಡು ಬಂದಿದ್ದೇವೆ. ಇನ್ನು ಮುಂದೆ ಸುಳ್ಳು ಹೇಳಿದರೆ, ಮಾನನಷ್ಟ ಮೊಕದ್ದಮೆ ಹೂಡುತ್ತೇವೆ ಎಂದು ಹೇಳಿದರು.

ರಾಜ್ಯ ಸರ್ಕಾರದ ಉತ್ತಮ ಆಡಳಿತದಿಂದ ಕಂಗೆಟ್ಟಿರುವ ಬಿಜೆಪಿಯವರು ಸುಳ್ಳನ್ನೇ ನೂರು ಬಾರಿ ಹೇಳಿ ಸತ್ಯ ಮಾಡಲು ಪ್ರಯತ್ನ ನಡೆಸುತ್ತಿದ್ದಾರೆ. ಸಂಸದ ಪ್ರತಾಪ್‌ ಸಿಂಹ ರಾಜ್ಯದಲ್ಲಿ ಗಲಭೆ ಸೃಷ್ಠಿಸಲು ಅಮಿತ್‌ ಶಾ ಹೇಳಿದ್ದಾರೆ ಎಂದು ಅವರೇ ಹೇಳಿಕೊಂಡಿದ್ದಾರೆ. ಕೇಂದ್ರ ಸಚಿವ ಅನಂತಕುಮಾರ್‌ ಸಚಿವರಾಗಿ ದಲಿತರು, ಕುವೆಂಪು ಹಾಗೂ ಸಂವಿಧಾನದ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡುತ್ತಿದ್ದಾರೆ. ರಾಜ್ಯದ ಜನತೆ ಎಲ್ಲವನ್ನೂ ಗಮನಿಸುತ್ತಿದ್ದಾರೆ ಎಂದರು.

ರಾಜ್ಯದಲ್ಲಿ ಚುನಾವಣೆ ಬಂದಿರುವುದರಿಂದ ಸುಳ್ಳುಗಳನ್ನೇ ಹರಡಿ ಚುನಾವಣೆ ಗೆಲ್ಲಲು ಪ್ರಯತ್ನ ನಡೆಸುತ್ತಿದ್ದಾರೆ. ಅಭಿವೃದ್ಧಿ ವಿಚಾರದಲ್ಲಿ ಚರ್ಚೆ ಮಾಡಲು ಬಿಜೆಪಿಯವರಿಗೆ ಮನಸಿಲ್ಲ. ಹಿಂದೂಗಳು ಹಿಂದೂಗಳನ್ನು ಕೊಂದರೆ ಅದು
ಜಿಹಾದಿ ಆಗುವುದಿಲ್ಲವೇ. ಪ್ರಶಾಂತ ಪೂಜಾರಿ, ಹರೀಶ್‌ ಪೂಜಾರಿ ಹಾಗೂ ಧನ್ಯಶ್ರೀ ಕೊಲೆ ಪ್ರಕರಣಗಳಲ್ಲಿ ಹಿಂದೂ ಕಾರ್ಯಕರ್ತರ ಕೈವಾಡ ಇದೆ ಎಂದು ಆರೋಪಿಸಿದರು.

ಬಿಜೆಪಿಯವರು ಕೇಂದ್ರ ಸಚಿವ ಅನಂತಕುಮಾರ್‌, ಸಂಸದರಾದ ಶೋಭಾ ಕರಂದ್ಲಾಜೆ, ಪ್ರತಾಪ್‌ ಸಿಂಹ, ನಳಿನ್‌ ಕುಮರ್‌ ಕಟೀಲ್‌ ಹಾಗೂ ಶಾಸಕ ಸಿ.ಟಿ. ರವಿ ಅವರ ಬಾಯಿ ಮುಚ್ಚಿಸಿದರೆ, ವಿಧಾನ ಸಭೆ ಚುನಾವಣೆ ಶಾಂತಿಯುತವಾಗಿ ನಡೆಯಲಿದೆ ಎಂದರು. 

Advertisement

ಬಂದ್‌ನಲ್ಲಿ “ಕೈ’ವಾಡ ಇಲ್ಲ: ಮಹದಾಯಿ ನೀರಿಗಾಗಿ ಕನ್ನಡ ಪರ ಸಂಘಟನೆಗಳು ನಡೆಸುತ್ತಿರುವ ಬಂದ್‌ ಹಿಂದೆ ಕಾಂಗ್ರೆಸ್‌ ಪಕ್ಷದ ಕೈವಾಡ ಇಲ್ಲ. ಬಿಜೆಪಿಯವರು ಯಾಕೆ ಕಾಂಗ್ರೆಸ್‌ ಮೇಲೆ ಗೂಬೆ ಕೂರಿಸುತ್ತಿದ್ದಾರೋ ಗೊತ್ತಿಲ್ಲ. ಬಂದ್‌ ಆಚರಿಸುವುದು ಸಂಘಟನೆಗಳಿಗೆ ಬಿಟ್ಟ ವಿಚಾರ. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ ಹಾಗೂ ಪ್ರಧಾನಿ ಮೋದಿ ಆಗಮಿಸುವಾಗ ನಾವು ಕಪ್ಪು ಪಟ್ಟಿ ಪ್ರದರ್ಶನ ಮಾಡುತ್ತಿಲ್ಲ. ರಾಹುಲ್‌ ಗಾಂಧಿ ಆಗಮನ ವೇಳೆ ಬಂದ್‌ ಆಚರಿಸುವುದು ಬಿಜೆಪಿಗೆ ಬಿಟ್ಟ ವಿಚಾರ ಎಂದು ಹೇಳಿದರು. 

ಸಂಖ್ಯೆ ಹೆಚ್ಚಿಸಿಕೊಳ್ಳಲು ಬದುಕಿರುವವರನ್ನೂ ಸಾಯಿಸಿದ್ದಾರೆ!
ರಾಜ್ಯದಲ್ಲಿ 23 ಹಿಂದೂಗಳನ್ನು ಜಿಹಾದಿಗಳೇ ಕೊಂದಿದ್ದಾರೆ ಎಂದು ಆರೋಪ ಮಾಡುತ್ತಿರುವ ಬಿಜೆಪಿ ವಿರುದ್ಧ ದಾಖಲೆ ಬಿಡುಗಡೆ ಮಾಡುವ ಮೂಲಕ ಗೃಹ ಸಚಿವ ರಾಮಲಿಂಗಾ ರೆಡ್ಡಿ ತಿರುಗೇಟು ನೀಡಿದ್ದಾರೆ.

ಕೆಪಿಸಿಸಿ ಕಚೇರಿಯಲ್ಲಿ ಬುಧವಾರ ಸುದ್ದಿಗಾರರ ಜತೆ ಮಾತನಾಡಿದ ಅವರು, “23 ಹಿಂದೂ ಕಾರ್ಯಕರ್ತರನ್ನು ಜಿಹಾದಿಗಳು ಕೊಂದಿದ್ದಾರೆ. ಆದರೂ ರಾಜ್ಯ ಸರ್ಕಾರ ಕಣ್ಣು ಮುಚ್ಚಿ ಕುಳಿತಿದೆ ಎಂದು ಸಂಸದೆ ಶೋಭಾ ಕರಂದ್ಲಾಜೆ ಕೇಂದ್ರ ಗೃಹ ಸಚಿವರಿಗೆ ಪತ್ರ ಬರೆದಿದ್ದಾರೆ. ಅವರು ಕಳುಹಿಸಿ ರುವ ಪಟ್ಟಿಯಲ್ಲಿರುವ ಅಶೋಕ್‌ ಪೂಜಾರಿ ಎಂಬ ವ್ಯಕ್ತಿ ಇನ್ನೂ ಜೀವಂತವಾಗಿದ್ದಾನೆ. ಸತ್ತವರ ಸಂಖ್ಯೆ ಹೆಚ್ಚಿಸಿಕೊಳ್ಳಲು ಬದುಕಿದ್ದವರ ನ್ನೂ ಸಾಯಿಸಿದ್ದಾರೆ.’ ಎಂದು ಆರೋಪಿಸಿದರು.

ವಸಂತ ಕೊಟ್ಯಾನ್‌ ಮತ್ತು ರಾಜು ಕನ್ನಡಬಾನೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಪ್ರಶಾಂತ ಪೂಜಾರಿ, ಡಿ.ಕೆ. ಕುಟ್ಟಪ್ಪ, ಮೈಸೂರು ರಾಜು, ರಾಜೇಶ್‌ ಕೊಟ್ಯಾನ್‌, ಮಡಿಕೇರಿಯ ಪ್ರವೀಣ ಪೂಜಾರಿ, ಚರಣ್‌ ಪೂಜಾರಿ, ಶಿವಮೊಗ್ಗ ವಿಶ್ವನಾಥ,
ರುದ್ರೇಶ್‌, ಶರತ್‌ ಕೋಮು ದ್ವೇಷಕ್ಕೆ ಬಲಿಯಾಗಿದ್ದಾರೆ. 23ರಲ್ಲಿ 9 ಜನರು ಹಿಂದು ಮುಸ್ಲಿಂ ಕೋಮು ದ್ವೇಷದ ಹಿನ್ನೆಲೆಯಲ್ಲಿ ಸಾವಿಗೀಡಾಗಿದ್ದು, ಇಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. 10 ಜನರು ವೈಯಕ್ತಿಕ ಕಾರಣ ಹಾಗೂ ಭೂ ವ್ಯವಹಾರದ ಹಿನ್ನೆಲೆಯಲ್ಲಿ ಕೊಲೆಗೀಡಾಗಿದ್ದಾರೆ. ಒಬ್ಬರು ಅಪಘಾತದಲ್ಲಿ ಮೃತ ಪಟ್ಟಿದ್ದಾರೆ ಎಂದು ಪಟ್ಟಿ ಬಿಡುಗಡೆ
ಮಾಡಿದರು.

ಬಿಜೆಪಿ ತಪ್ಪು ಮಾಹಿತಿ ನೀಡಿ ಜನರ ದಾರಿ ತಪ್ಪಿಸುವ ಪ್ರಯತ್ನ ಮಾಡುತ್ತಿರುವುದನ್ನು ಕೇಂದ್ರ ಸರ್ಕಾರದ ಗಮನಕ್ಕೆ ತರಲಾಗುವುದು. ಅಲ್ಲದೇ ಪುಸ್ತಕಗಳನ್ನು ಮುದ್ರಿಸಿ ಸಾರ್ವಜನಿಕರಿಗೆ ಹಂಚಿಕೆ ಮಾಡಲಾವುದು ಎಂದು ಹೇಳಿದರು. ರಾಜ್ಯ ಸರ್ಕಾರ ಎಲ್ಲವನ್ನು ನೋಡಿ ಸುಮ್ಮನೆ ಕುಳಿತಿಲ್ಲ. ಎಲ್ಲ ಪ್ರಕರಣಗಳಲ್ಲಿ ಭಾಗಿಯಾಗಿರುವ ಆರೋಪಿಗಳನ್ನು ಈಗಾಗಲೇ ಬಂಧಿಸಲಾಗಿದೆ ಎಂದು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next