Advertisement

ಆರ್‌.ಸಿ.ಇ.ಪಿ. ಒಪ್ಪಂದದಿಂದ ದೂರ ಉಳಿಯುವ ಕೇಂದ್ರದ ನಿರ್ಧಾರಕ್ಕೆ ಸಚಿವ ಪ್ರಭು ಚವ್ಹಾಣ್ ಸಂತಸ

10:08 AM Nov 07, 2019 | Team Udayavani |

ಬೆಂಗಳೂರು: ಆರ್‌ಸಿಇಪಿ ಅಡಿಯಲ್ಲಿ ಯಾವುದೇ ಡೈರಿ ಉತ್ಪನ್ನಗಳ ಆಮದನ್ನು ಅನುಮತಿಸುವುದು ಭಾರತೀಯ ಡೈರಿ ಉದ್ಯಮ ಮತ್ತು ದೇಶದ ಇಡೀ ಕೃಷಿ ಸಮುದಾಯಕ್ಕೆ ಸವಾಲಾಗುವ ಸಾಧ್ಯತೆಯಿರುವ ಬಗ್ಗೆ ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕೆ ಸಚಿವ ಪಿಯುಶ್ ಗೋಯಲ್ ಅವರಿಗೆ ಕಳೆದ ತಿಂಗಳು ಪಶುಸಂಗೋಪನೆ ಸಚಿವ ಪ್ರಭು ಚವ್ಹಾಣ್ ಪತ್ರದ ಮೂಲಕ ಮನವಿ ಮಾಡುವುದರೊಂದಿಗೆ ಮುಖ್ಯಮಂತ್ರಿ ಯಡಿಯೂರಪ್ಪನವರ ಗಮನಕ್ಕೂ ತಂದು ರಾಜ್ಯ ಸರ್ಕಾರದಿಂದ ಸಹ ಮನವರಿಕೆ ಮಾಡಲು ಯತ್ನಿಸಲಾಗಿತ್ತು.

Advertisement

ದೇಶದಲ್ಲಿ ಹೈನುಗಾರಿಕೆ ಸಹಕಾರಿ ಮಾದರಿಯಲ್ಲಿ ನಡೆಯುತ್ತಿದ್ದು ರೈತರು ವ್ಯಾಪಾರಿಗಳ ಹಿತರಕ್ಷಣೆ ದೃಷ್ಟಿಯಿಂದ ಕೇಂದ್ರ ಸರ್ಕಾರ 15 ರಾಷ್ಟ್ರಗಳ ಮುಕ್ತ ವ್ಯಾಪಾರ ಒಪ್ಪಂದದಿಂದ ಹೊರಬಂದಿರುವುದು ಹೈನುಗಾರಿಕೆಯನ್ನು ಅವಲಂಬಿಸಿದವರ ಮೊಗದಲ್ಲಿ ಮಂದಹಾಸ ಮುಡಿಸಿದೆ ಎಂದು ಸಚಿವ ಪ್ರಭು ಚವ್ಹಾಣ್ ಹೇಳಿದರು.

ಕರ್ನಾಟಕ ಹಾಲು ಸಂಗ್ರಹಣೆಯಲ್ಲಿ ದೇಶದಲ್ಲಿ 2ನೇ ಸ್ಥಾನದಲ್ಲಿದೆ ಮತ್ತು ದಕ್ಷಿಣ ಭಾರತದಲ್ಲಿ ಮೊದಲ ಸ್ಥಾನದಲ್ಲಿದೆ. ರಾಜ್ಯದಲ್ಲಿ 23569 ಹಳ್ಳಿಗಳಲ್ಲಿ ಹಾಲನ್ನು ಸಂಗ್ರಹಿಸಲಾಗುತ್ತಿದೆ. ಅದರಲ್ಲಿ 16229 ಹಾಲು ಸಹಕಾರ ಸಂಘಗಳು ನೋಂದಣಿಯಾಗಿವೆ.

ಅದರಲ್ಲಿ 4302 ಮಹಿಳಾ ಸಂಘಗಳು ಕಾರ್ಯನಿವಹಿಸುತ್ತಿವೆ. ಒಟ್ಟು 25 ಲಕ್ಷ ರೈತರು ಕರ್ನಾಟಕ ರಾಜ್ಯದಲ್ಲಿ ಹೈನುಗಾರಿಕೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಅದರಲ್ಲಿ 9 ಲಕ್ಷ ಮಹಿಳೆಯರಿರುವುದು ವಿಶೇಷ. ಹೈನುಗಾರಿಕೆಯನ್ನು ಪರ್ಯಾಯ ಕೃಷಿಯಾಗಿ ಅಳವಡಿಸಿಕೊಂಡು ಜೀವನ ನಡಿಸುತ್ತಿದ್ದ ರೈತರು ಪ್ರಧಾನಿ ನರೇಂದ್ರ ಮೋದಿ ಅವರ ಈ ನಿರ್ಣಯದಿಂದ ನಿರಾಳರಾಗಿದ್ದಾರೆ ಎಂದು ಸಚಿವ ಚೌಹಾಣ್ ಅವರು ಅಭಿಪ್ರಾಯಪಟ್ಟಿದ್ದಾರೆ.

ರಾಜ್ಯದಲ್ಲಿ ನಿತ್ಯ 77.22 ಲಕ್ಷ ಕೆ.ಜಿ ಹಾಲು ಸಂಗ್ರಹಣೆ ಆಗುತ್ತಿದ್ದು ನಿತ್ಯ 19.88 ಕೋಟಿ ರೂ ಹಣ ರೈತರಿಗೆ ಪಾವತಿಯಾಗುತ್ತಿದೆ. 2018-19 ರಲ್ಲಿ 14,446 ಕೋಟಿ ರೂ ಗಳ ವಹಿವಾಟನ್ನು ಕರ್ನಾಟಕ ಹಾಲು ಮಹಾಮಂಡಳಿ ನಡೆಸಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next