Advertisement

2ನೇ ವರದಿ ಬರುವವರೆಗೂ ಮನೆಗೆ ಕಳಿಸಲ್ಲ: ಜಿಲ್ಲಾಧಿಕಾರಿ

01:54 PM Jun 22, 2020 | Suhan S |

ಕಾರವಾರ: ಕ್ವಾರಂಟೈನ್‌ನಲ್ಲಿದ್ದವರ ಎರಡನೇ ಬಾರಿಯ ಗಂಟಲು ದ್ರವದ ಕೋವಿಡ್‌-19 ಪರೀಕ್ಷಾ ವರದಿ ಬರುವವರೆಗೂ ಅವರನ್ನು ಮನೆಗೆ ಕಳುಹಿಸುವುದಿಲ್ಲ. ಈ ಬಗ್ಗೆ ಅಧಿಕಾರಿಗಳಿಗೂ ಸೂಚನೆ ನೀಡಿದ್ದೇನೆ ಎಂದು ಜಿಲ್ಲಾಧಿಕಾರಿ ಹರೀಶ್‌ ಕುಮಾರ್‌ ತಿಳಿಸಿದ್ದಾರೆ.

Advertisement

ಪ್ರಯೋಗಾಲಯದ ವರದಿಗಳಲ್ಲಿ ಮೊದಲ ವರದಿಯಲ್ಲಿ ನೆಗೆಟಿವ್‌ ಬಂದು, ಎರಡನೇ ವರದಿಗೆ ಕೆಲವರದ್ದು ಪಾಸಿಟಿವ್‌ ಬರುತ್ತಿದೆ. ಹೀಗಾಗಿ ಹೋಮ್‌ ಕ್ವಾರಂಟೈನ್‌ಗೆ ತೆರಳಿದ ಕೆಲವರು ತಮ್ಮದು ನೆಗೆಟಿವ್‌ ಬಂದಿದೆ ಎಂದು ಕ್ವಾರಂಟೈನ್‌ ನಿಯಮ ಪಾಲನೆ ಮಾಡದೆ ಅಸಡ್ಡೆ ತೋರುತ್ತಿದ್ದಾರೆ. ಜತೆಗೆ ಎರಡನೇ ವರದಿ ಬರುವವರೆಗೆ ಆತ ಕುಟುಂಬದ ಸದಸ್ಯರ ಸಂಪರ್ಕಕ್ಕೆ ಬಂದು ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದೆ. ಹೀಗಾಗಿ ಎರಡನೇ ವರದಿ ಬರುವವರೆಗೂ ಇನ್ನುಮುಂದೆ ಯಾರನ್ನೂ ಹೋಮ್‌ ಕ್ವಾರಂಟೈನ್‌ಗೆ ಕಳುಹಿಸುವುದಿಲ್ಲ ಎಂದು ಜಿಲ್ಲಾಧಿಕಾರಿ ಹೇಳಿದ್ದಾರೆ.

ಸದ್ಯ ಸ್ಥಳೀಯವಾಗಿ ಯಾರಲ್ಲೂ ಕೋವಿಡ್‌-19 ಪತ್ತೆಯಾಗುತ್ತಿಲ್ಲ. ಆದರೆ, ಮಹಾರಾಷ್ಟ್ರ ಸೇರಿದಂತೆ ಇತರ ರಾಜ್ಯಗಳಿಂದ ವಾಪಸ್ಸಾದವರಲ್ಲಿ ಸೋಂಕು ಪತ್ತೆಯಾಗುತ್ತಿದೆ. ಹೊರ ರಾಜ್ಯಗಳಿಂದ ಬಂದವರಿಗೆ ಸರ್ಕಾರದ ಮಾರ್ಗಸೂಚಿಯಂತೆ ನಿಗದಿತ ದಿನಗಳವರೆಗೆ ಸಾಂಸ್ಥಿಕ ಕ್ವಾರಂಟೈನ್‌ ಮಾಡಲಾಗುತ್ತಿದೆ. ಸಾಂಸ್ಥಿಕ ಕ್ವಾರಂಟೈನ್‌ ಮುಗಿದ ಬಳಿಕ ಹೋಮ್‌ ಕ್ವಾರಂಟೈನ್‌ ವಿಧಿಸಲಾಗುತ್ತಿದೆ. ಆದರೆ, ಈ ನಡುವೆ ಹೋಮ್‌ ಕ್ವಾರಂಟೈನ್‌ ಕಡ್ಡಾಯ ಪಾಲನೆ ಮಾಡುವಂತೆ ನೋಡಿಕೊಳ್ಳುವುದು ಸ್ವಲ್ಪ ಕಷ್ಟದ ಕೆಲಸವೇ ಆಗಿದೆ. ಹೀಗಾಗಿ ಕ್ವಾರಂಟೈನ್‌ಗೆ ಬಂದ ನಂತರದ ಮೊದಲ ಅಥವಾ ಮೂರು ದಿನಗಳಲ್ಲಿ ಗಂಟಲು ದ್ರವ ಪಡೆದು ಪರೀಕ್ಷೆ ನಡೆಸಿದಾಗ ಅನೇಕರದ್ದು ನೆಗೆಟಿವ್‌ ಬರುತ್ತಿದ್ದು, ಕ್ವಾರಂಟೈನ್‌ ಪೂರ್ಣಗೊಳಿಸಿ ಹೋಮ್‌ ಕ್ವಾರಂಟೈನ್‌ ವಿಧಿಸಿದ ಬಳಿಕ ಪಾಸಿಟಿವ್‌ ಬರುತ್ತಿರುವುದು ಆತಂಕಕ್ಕೆ ಕಾರಣವಾಗಿದೆ. ಜೊತೆಗೆ, ಓರ್ವ ಸೋಂಕಿತನಿಂದಾಗಿ ಮನೆ ಮಂದಿಯೆಲ್ಲ ಸೋಂಕಿತರಾಗುವಂತಾಗುತ್ತಿದೆ. ಈ ಬಗ್ಗೆ ಈಗ ನಿಗಾ ವಹಿಸಲಾಗುತ್ತಿದೆ ಎಂದು ಜಿಲ್ಲಾಡಳಿತ ಹೇಳಿದೆ.

Advertisement

Udayavani is now on Telegram. Click here to join our channel and stay updated with the latest news.

Next