Advertisement

ಕಾಂಗ್ರೆಸ್‌ ತೊರೆಯಲ್ಲ, ಒತ್ತಡಕ್ಕೆ ಮಣಿಯಲ್ಲ: ರಾಜೇಗೌಡ

07:24 AM Jul 11, 2019 | Lakshmi GovindaRaj |

ಬೆಳ್ತಂಗಡಿ: “ನಾನು ಯಾವುದೇ ಕಾರಣಕ್ಕೂ ಪಕ್ಷ ಬಿಟ್ಟು ಹೋಗುವುದಿಲ್ಲ. ನನ್ನ ಕ್ಷೇತ್ರದ ಗೌರವ ಉಳಿಸುವ ದೃಷ್ಟಿಯಿಂದ ಆಮಿಷಕ್ಕೆ, ಒತ್ತಡಕ್ಕೆ ಒಳಗಾಗಲಾರೆ’ ಎಂದು ಕಾಂಗ್ರೆಸ್‌ ಶಾಸಕ ರಾಜೇಗೌಡ ಪ್ರತಿಕ್ರಿಯಿಸಿದ್ದಾರೆ. ಧರ್ಮಸ್ಥಳದ ಪ್ರಕೃತಿ ಚಿಕಿತ್ಸಾಲಯದಲ್ಲಿ ಚಿಕಿತ್ಸೆ ಪಡೆಯುತ್ತಿರುವ ಅವರು “ಉದಯವಾಣಿ’ ಜೊತೆ ಮಾತನಾಡಿದರು.

Advertisement

“ನನಗೆ ರಾಜ್ಯದ ಪ್ರಸ್ತುತ ರಾಜಕೀಯ ಬೆಳೆವಣಿಗೆ ಕುರಿತು ಮಾಹಿತಿ ಇರಲಿಲ್ಲ. ಶನಿವಾರ ಕಾರ್ಯಕ್ರಮ ನಿಮಿತ್ತ ಬಂದು ಪ್ರಕೃತಿ ಚಿಕಿತ್ಸೆಗೆ ದಾಖಲಾಗಿದ್ದೆ. ಬಳಿಕ ಇಷ್ಟೊಂದು ಹೈಡ್ರಾಮಾ ನಡೆದಿದೆ. ಬಿ.ಎಸ್‌.ಯಡಿಯೂರಪ್ಪ ಅವರು ದೂರವಾಣಿ ಮೂಲಕ ನನ್ನನ್ನು ಸಂಪರ್ಕಿಸಿದ್ದು, ನನಗೂ ಒತ್ತಡಗಳು ಬಂದಿದೆ. ಆದರೆ, ಇದಾವುದಕ್ಕೂ ನಾನು ತಲೆಕೆಡಿಸಿಕೊಂಡಿಲ್ಲ. ಅಧಿಕಾರದ ದುರಾಸೆ ನನಗಿಲ್ಲ. ಹಲವರಿಂದ ಆಮಿಷದ ಕರೆಗಳೂ ಬರುತ್ತಿವೆ’ ಎಂದರು.

“ಬೆಳ್ತಂಗಡಿ ಶಾಸಕ ಹರೀಶ್‌ ಪೂಂಜ ಅವರು ನನ್ನನ್ನು ಸಂಪರ್ಕಿಸಿದ್ದು, ಮುಂದಿನ ನಡೆ ಕುರಿತು ವಿಚಾರಿಸಿದ್ದಾರೆ. ಆದರೂ ಯಾವುದೇ ಕಾರಣಕ್ಕೂ ಪಕ್ಷ ಬಿಟ್ಟು ಹೋಗುವುದಿಲ್ಲ. ಪಕ್ಷದ ತತ್ವ-ಸಿದ್ಧಾಂತಗಳಿಗೆ ಬದ್ಧನಾಗಿದ್ದೇನೆ ಎಂದು ತಿಳಿಸಿದ್ದೇನೆ. ಶೃಂಗೇರಿಯಿಂದ ಪ್ರಥಮ ಬಾರಿಗೆ ಶಾಸಕನಾಗಿ ಆಯ್ಕೆಯಾಗಿದ್ದೇನೆ. ಪಕ್ಷ ನನಗೆ ಅವಕಾಶ ಕೊಟ್ಟಿದೆ. ಸರಕಾರ ಸಹಕಾರ ನೀಡಿದೆ’ ಎಂದರು.

“ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಚರ್ಚೆ ಮಾಡಿ ತೀರ್ಮಾನ ತೆಗೆದುಕೊಳ್ಳಬಹುದಿತ್ತು ಏಕಾಏಕಿ ಸರಕಾರವನ್ನು ಅಸ್ಥಿರಗೊಳಿಸುತ್ತಿರುವ ರಾಜಕೀಯ ನಡೆ ಸರಿಯಲ್ಲ. ಶುಕ್ರವಾರ ಅಧಿವೇಶನವಿದೆ. ಸೋಮವಾರ ತೆರಳಬೇಕೆಂದಿದ್ದೇನೆ. ಶುಕ್ರವಾರ ಬರಲೇಬೇಕು ಎನ್ನುವ ಆದೇಶ ಪಕ್ಷದಿಂದ ಬಂದಲ್ಲಿ ಶುಕ್ರವಾರ ತೆರಳುತ್ತೇನೆ. ಆ ಮೂಲಕ ನಾನು ಕಾಂಗ್ರೆಸ್‌ ಪಕ್ಷದಲ್ಲೇ ಮುಂದುವರಿವ ದೃಢಸಂಕಲ್ಪ ತೊಟ್ಟಿದ್ದೇನೆ’ ಎಂದು ಸ್ಪಷ್ಟ ಪಡಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next