ಮಟ್ಟದಿಂದಲೇ ದೇಣಿಗೆ ಸಂಗ್ರಹ ಮಾಡುವ ಜನ ಸಂಪರ್ಕ ಅಭಿಯಾನಕ್ಕೆ ತೀವ್ರ ಹಿನ್ನಡೆಯಾಗಿದ್ದು, ಐದು ಜಿಲ್ಲೆಗಳಿಗೆ ಬಿಟ್ಟರೆ ಉಳಿದೆಡೆ ಈ ಯೋಜನೆಗೆ ಇನ್ನೂ ಚಾಲನೆಯೇ ದೊರೆತಿಲ್ಲ. ಅ.2ರಿಂದ ಜನಸಂಪರ್ಕ ಅಭಿಯಾನಕ್ಕೆ ಚಾಲನೆ ನೀಡಿ ರಾಜ್ಯದಲ್ಲಿ ಸುಮಾರು 60 ಸಾವಿರ ಬೂತ್‌ಗಳಿಂದ ಪ್ರತಿ ಬೂತ್‌ನಿಂದ ತಲಾ 10 ರಿಂದ 55 ಸಾವಿರ ರೂ. ಸಂಗ್ರಹಿಸುವಂತೆ ಜಿಲ್ಲಾ ಹಾಗೂ ಬ್ಲಾಕ್ ಮಟ್ಟದ ಅಧ್ಯಕ್ಷರಿಗೆ ಸೂಚನೆ ನೀಡಲಾಗಿತ್ತು. ಸಾರ್ವಜನಿಕರಿಂದ 100, 500 ಹಾಗೂ 1000 ರೂ. ಸಂಗ್ರಹಿಸಬೇಕು. ಬೂತ್ ಮಟ್ಟದಲ್ಲಿ ಬೂತ್ ಕಮಿಟಿ ಸದಸ್ಯರು ಸಂಗ್ರಹಿಸಿರುವ ಹಣದಲ್ಲಿ ಎಐಸಿಸಿಗೆ ಶೇ. 50 ರಷ್ಟು, ಕೆಪಿಸಿಸಿಗೆ ಶೇ. 25 ರಷ್ಟು, ಜಿಲ್ಲಾ ಘಟಕಕ್ಕೆ ಶೇ. 15 ಹಾಗೂ ಬ್ಲಾಕ್ ಕಾಂಗ್ರೆಸ್ ಘಟಕಕ್ಕೆ ಶೇ. 10 ರಷ್ಟು ಹಣ ಹಂಚಿಕೆ ಮಾಡಲು ಎಐಸಿಸಿ ನಿರ್ದೇಶನ ನೀಡಿತ್ತು. ಬೆಳಗಾವಿ, ಬೆಂಗಳೂರು ಕೇಂದ್ರ, ದಕ್ಷಿಣ, ಉತ್ತರ ಹಾಗೂ ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಲ್ಲಿ ಮಾತ್ರ ಈ ಯೋಜನೆ ಆರಂಭವಾಗಿದ್ದು ಉಳಿದ ಜಿಲ್ಲೆಗಳಲ್ಲಿ ಈ ಯೋಜನೆ ಇನ್ನೂ ಆರಂಭವಾಗಿಲ್ಲ.
Advertisement
ಈ ಮಧ್ಯೆ, ರಾಹುಲ್ ಗಾಂಧಿಯವರು ಪಕ್ಷದ ಬೂತ್ ಮಟ್ಟದ ಕಾರ್ಯಕರ್ತರೊಂದಿಗೆ ನೇರ ಸಂಪರ್ಕ ಹೊಂದಲು ಜುಲೈನಲ್ಲಿ ಆರಂಬಿಸಿದ್ದ ಪ್ರೊಜೆಕ್ಟ್ ಶಕ್ತಿ ಯೋಜನೆ ಈಗ ಚುರುಕುಗೊಳ್ಳುತ್ತಿದೆ. ಇಂತಹ ಸಂದರ್ಭದಲ್ಲಿ ಪಕ್ಷದ ಸದಸ್ಯರಾಗುವಂತೆ ಸಾರ್ವಜನಿಕರನ್ನು ಸಂಪರ್ಕಿಸಿ ಅವರಿಂದ ಹಣ ಕೇಳಿದರೆ ಸದಸ್ಯತ್ವವೂ ಸಿಗುವುದಿಲ್ಲ ಎಂಬ ಕಾರಣಕ್ಕೆ ಅನೇಕ ಜಿಲ್ಲೆಗಳಲ್ಲಿ ಪ್ರೊಜೆಕ್ಟ್ ಶಕ್ತಿ ಮುಗಿಯುವವರೆಗೂ ಜನ ಸಂಪರ್ಕ ಅಭಿಯಾನವನ್ನುನಿಲ್ಲಿಸಿದ್ದಾರೆ ಎಂದು ತಿಳಿದು ಬಂದಿದೆ.
ಎಐಸಿಸಿಯಿಂದ ಬಂದ ನಿರ್ದೇಶನ ರಾಜ್ಯ ಹಾಗೂ ಜಿಲ್ಲಾ ಮಟ್ಟದ ನಾಯಕರಿಗೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ. ಪಕ್ಷದ ಕಾರ್ಯಕರ್ತರು ಜನರ ಬಳಿಗೆ ತೆರಳಿ ಪಕ್ಷಕ್ಕೆ ದೇಣಿಗೆ ನೀಡಿ ಎಂದು ಕೇಳಿದರೆ, ಗ್ರಾಮೀಣ ಮಟ್ಟದಲ್ಲಿ ಸಾರ್ವಜನಿಕರು ಹಣ ನೀಡುವ ಸ್ಥಿತಿಯಲ್ಲಿ ಇಲ್ಲ ಎಂಬ ಅಭಿಪ್ರಾಯ ಬೂತ್ ಮತ್ತು ಬ್ಲಾಕ್ ಮಟ್ಟದ ಪಕ್ಷದ ಕಾರ್ಯಕರ್ತರು ರಾಜ್ಯ ನಾಯಕರ ಗಮನಕ್ಕೆ ತಂದಿದ್ದಾರೆ ಎಂದು ಹೇಳಲಾಗಿದೆ. ಚುನಾವಣೆ ವೇಳೆ ಜನರಿಗೆ ಹಣ ನೀಡಿ ಮತ ಕೇಳಿ ರಾಜಕೀಯ ಪಕ್ಷಗಳು ರೂಢಿ ಮಾಡಿರುವುದರಿಂದ ಈಗ ಜನರ ಬಳಿ ಹಣ ಕೇಳಲು ಹೋದರೆ, ಅದೇ ತಿರುಗುಬಾಣವಾಗುವ ಸಾಧ್ಯತೆ ಇದೆ. ಈ ರೀತಿಯ ಪ್ರಯತ್ನ ಲೋಕಸಭಾ ಚುನಾವಣೆಯಲ್ಲಿ ಪಕ್ಷದ ಹಿನ್ನಡೆಗೆ ಕಾರಣವಾಗುತ್ತದೆ ಎಂಬ ಅಭಿಪ್ರಾಯ ತಳಮಟ್ಟದಲ್ಲಿ ವ್ಯಕ್ತವಾಗುತ್ತಿದೆ ಎಂದು ತಿಳಿದು ಬಂದಿದೆ. ಆದರೆ, ರಾಜ್ಯ ನಾಯಕರು ಹೈ ಕಮಾಂಡ್ ಆದೇಶವಿರುವುದರಿಂದ ಹೇಗಾದರೂ ಮಾಡಿ ಜನ ಸಂಪರ್ಕ ಯಾತ್ರೆಯನ್ನು ಯಶಸ್ವಿಗೊಳಿಸುವಂತೆ ಒತ್ತಡ ಹೇರುತ್ತಿದ್ದಾರೆ ಎನ್ನಲಾಗಿದೆ. ಶಂಕರ ಪಾಗೋಜಿ