ಇಸ್ಲಾಮಾಬಾದ್: ಕಾನೂನು, ಸಂವಿಧಾನಾತ್ಮಕ ಹಾಗೂ ವ್ಯವಸ್ಥೆಯ ಸವಾಲಿನ ಹಿನ್ನೆಲೆಯಲ್ಲಿ ಮೂರು ತಿಂಗಳಿನಲ್ಲಿಯೇ ಸಾರ್ವತ್ರಿಕ ಚುನಾವಣೆ ನಡೆಸಲು ಸಾಧ್ಯವಿಲ್ಲ ಎಂದು ಪಾಕಿಸ್ತಾನದ ಚುನಾವಣಾ ಆಯೋಗ ಮಂಗಳವಾರ (ಏ.05) ತಿಳಿಸಿದೆ.
ಇದನ್ನೂ ಓದಿ:ಚೈತ್ರ ನವರಾತ್ರಿ ಆರಂಭ; ಮಾಂಸ ಮಾರಾಟದ ಅಂಗಡಿ ಬಂದ್ ಮಾಡಿಸಿ: ದಕ್ಷಿಣ ದೆಹಲಿ ಮೇಯರ್
ಪಾಕಿಸ್ತಾನದ ಸಂಸತ್ ಅನ್ನು ವಿಸರ್ಜಿಸಿದ್ದ ನಿರ್ಗಮಿತ ಪ್ರಧಾನಿ ಇಮ್ರಾನ್ ಖಾನ್, ಮೂರು ತಿಂಗಳಿನಲ್ಲಿಯೇ ಸಾರ್ವತ್ರಿಕ ಚುನಾವಣೆ ನಡೆಸುವಂತೆ ಶಿಫಾರಸು ಮಾಡುವ ಮೂಲಕ ವಿಪಕ್ಷಗಳನ್ನು ಕಟ್ಟು ಹಾಕುವ ಪ್ರಯತ್ನ ಮಾಡಿರುವುದಾಗಿ ವರದಿ ತಿಳಿಸಿತ್ತು.
342 ಸದಸ್ಯ ಬಲದ ಪಾಕಿಸ್ತಾನದ ರಾಷ್ಟ್ರೀಯ ಅಸೆಂಬ್ಲಿಯನ್ನು ವಿಸರ್ಜಿಸಲು ಇಮ್ರಾನ್ ಖಾನ್ ಪಾಕ್ ಅಧ್ಯಕ್ಷ ಅರಿಫ್ ಅಲ್ವಿ ಅವರ ಅನುಮತಿ ಸಿಕ್ಕಿತ್ತು. ಮತ್ತೊಂದೆಡೆ ಇಮ್ರಾನ್ ಖಾನ್ ವಿರುದ್ಧದ ಅವಿಶ್ವಾಸ ನಿರ್ಣಯವನ್ನು ತಿರಸ್ಕರಿಸಿದ ಡೆಪ್ಯುಟಿ ಸ್ಪೀಕರ್ ವಿರುದ್ಧದ ಸಲ್ಲಿಕೆಯಾಗಿದ್ದ ಅರ್ಜಿಯ ವಿಚಾರಣೆಯನ್ನು ಸುಪ್ರೀಂಕೋರ್ಟ್ ಮುಂದೂಡಿದೆ.
ಡಾನ್ ಪತ್ರಿಕೆಗೆ ಚುನಾವಣಾ ಆಯೋಗದ ಹಿರಿಯ ಅಧಿಕಾರಿಯೊಬ್ಬರು ನೀಡಿದ ಮಾಹಿತಿ ಪ್ರಕಾರ, ಮುಖ್ಯವಾಗಿ ಖೈಬರ್ ಪಖ್ತುನ್ ಖಾವಾ ಸೇರಿದಂತೆ ಹಲವು ಕ್ಷೇತ್ರಗಳನ್ನು ಪುನರ್ವಿಂಗಡಣೆ ಮಾಡಲಾಗಿದೆ. ಇದರಿಂದಾಗಿ ಸ್ಥಾನಗಳ ಸಂಖ್ಯೆ ಹೆಚ್ಚಳವಾಗಲಿದೆ. ಜಿಲ್ಲಾವಾರು ಮತ್ತು ಕ್ಷೇತ್ರವಾರು ಮತದಾರರ ಪಟ್ಟಿಯನ್ನು ಖಚಿತಪಡಿಸುವುದು ಸವಾಲಿನ ಕೆಲಸವಾಗಿದೆ. ಹೀಗಾಗಿ ಸಾರ್ವತ್ರಿಕ ಚುನಾವಣೆ ನಡೆಸಲು ಕನಿಷ್ಠ ಆರು ತಿಂಗಳ ಕಾಲಾವಧಿ ಅಗತ್ಯವಿದೆ ಎಂದು ತಿಳಿಸಿದ್ದಾರೆ.