ಬೆಳಗಾವಿ: “ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರಿಂದ ಪಾಠ ಕೇಳಬೇಕಾದ ಅಗತ್ಯ ನನಗಿಲ್ಲ. ನಾವು ಟಿಪ್ಪು ಅಷ್ಟೇ ಅಲ್ಲ, ಎಲ್ಲ ಜಯಂತಿ ಆಚರಣೆ ಮಾಡುತ್ತೇವೆ. ಕಣ್ಣು ಮುಚ್ಚಿಕೊಂಡು ರಾಜ್ಯಕ್ಕೆ ಬಂದು ಮಾತನಾಡಬಾರದು’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಯೋಗಿ ಆದಿತ್ಯನಾಥ ವಿರುದ್ಧ ವಾಗ್ಧಾಳಿ ನಡೆಸಿದರು.
ಹುಕ್ಕೇರಿ ತಾಲೂಕಿನ ಯಮಕನಮರಡಿಯಲ್ಲಿ ಶುಕ್ರವಾರ ನಡೆದ “ಸಾಧನಾ ಸಂಭ್ರಮ’ ಸಮಾವೇಶದಲ್ಲಿ ಅವರು ಮಾತನಾಡಿದರು. “ಉತ್ತರ ಪ್ರದೇಶವನ್ನು ಜಂಗಲ್ ರಾಜ್ ಎಂದು ಕರೆಯುತ್ತಾರೆ. ಯೋಗಿಯವರು ಅಲ್ಲಿಯ ಕಾನೂನು ವ್ಯವಸ್ಥೆ ನೋಡಿಕೊಳ್ಳಲಿ. ಇಲ್ಲಿಗೆ ಬಂದು ಬಾಯಿಗೆ ಬಂದಂತೆ ಮಾತನಾಡುವುದಲ್ಲ’ ಎಂದು ಟೀಕಿಸಿದರು.
“ನಮ್ಮಲ್ಲಿ ಟಿಪ್ಪು ಸುಲ್ತಾನ್ ಜಯಂತಿ ಅಷ್ಟೇ ಅಲ್ಲ, ಡಾ| ಅಂಬೇಡ್ಕರ್, ಬಸವಣ್ಣ, ಕನಕದಾಸ, ಶಿವಾಜಿ, ವಾಲ್ಮೀಕಿ, ಅಕ್ಕ ಮಹಾದೇವಿ, ಚನ್ನಮ್ಮ…ಹೀಗೆ 26 ಜಯಂತಿ ಆಚರಿಸುತ್ತೇವೆ. ಬಿಜೆಪಿಯವರ ತರಹ ಒಂದನ್ನು ಮಾಡಿ ಇನ್ನೊಂದನ್ನು ಬಿಡುವುದಿಲ್ಲ. ಶ್ರೀರಾಮ, ಶ್ರೀಕೃಷ್ಣ ಇವರಿಗಷ್ಟೇ ಇದಾರಾ? ಬಿಜೆಪಿ ಅವಧಿಯಲ್ಲಿ ಶ್ರೀ ಕೃಷ್ಣ ಜಯಂತಿಯನ್ನು ಏಕೆ ಆಚರಿಸಲಿಲ್ಲ. ನಮ್ಮ ಆಡಳಿತದಲ್ಲಿ ಶ್ರೀ ಕೃಷ್ಣ ಜಯಂತಿ ಆರಂಭಿಸಿದ್ದೇವೆ’ ಎಂದರು.
ನಾವು ಹಿಂದುತ್ವ, ಇಸ್ಲಾಂ, ಕ್ರೈಸ್ತ, ಜೈನ ಧರ್ಮದ ವಿರೋಧಿಗಳಲ್ಲ. ಹಿಂದುತ್ವವನ್ನು ಕೋಮುವಾದಿಗಳು ಗುತ್ತಿಗೆ ಪಡೆದುಕೊಂಡಿದ್ದಾರೆಯೇ ಎಂದು ಪ್ರಶ್ನಿಸಿದ ಅವರು, ಇಲ್ಲಿ ಸೇರಿರುವ ಬಹುತೇಕ ಜನರು ಹಿಂದೂಗಳೇ ಎನ್ನುವುದನ್ನು ಅವರು ಅರ್ಥ ಮಾಡಿಕೊಳ್ಳಲಿ ಎಂದರು.
ಬಿಎಸ್‌ವೈ ವೇದಿಕೆಗೆ ಬಂದು ಚರ್ಚಿಸಲಿ: ನಾವು ನೀರಾವರಿಗೆ ಕೇವಲ 5,500 ಕೋಟಿ ರೂ.ನೀಡಿದ್ದೇವೆ ಎಂದು ಯಡಿಯೂರಪ್ಪ ಹೇಳಿದ್ದಾರೆ. ಆದರೆ, ಕಾಂಗ್ರೆಸ್ ಸರಕಾರ ಕೇವಲ ನಾಲ್ಕೂವರೆ ವರ್ಷದ ಆಡಳಿತದಲ್ಲಿ ನೀರಾವರಿಗೆ 45 ಸಾವಿರ ಕೋಟಿ ರೂ. ನೀಡಿದೆ. ಯಡಿಯೂರಪ್ಪಗೆ ತಾಕತ್ತಿದ್ದರೆ ವೇದಿಕೆಗೆ ಬಂದು ಚರ್ಚಿಸಲಿ ಎಂದು ಪಂಥಾಹ್ವಾನ ನೀಡಿದರು. ಮುಂದಿನ ಮಾರ್ಚ್‌ವರೆಗೆ ಒಟ್ಟು 50 ಸಾವಿರ ಕೋಟಿ ರೂ.ಗಳನ್ನು ನೀರಾವರಿ ಇಲಾಖೆಗೆ ನಾವು ಕೊಡುತ್ತೇವೆ. ಈ ಬಗ್ಗೆ ಜಾಹೀರಾತು ಮೂಲಕ ರಾಜ್ಯದ ಜನರ ಗಮನಕ್ಕೆ ತರುತ್ತೇವೆ. ಬಿಜೆಪಿ ಸರಕಾರ ಕೇವಲ 18 ಸಾವಿರ ಕೋಟಿ ರೂ.ನೀಡಿದ್ದರೆ, ನಾವು 50 ಸಾವಿರ ಕೋಟಿ ರೂ.ಕೊಡುತ್ತೇವೆ ಎಂದರು.
ಯುಪಿ ಸಿಎಂ ಹೆಸರು ಮರೆತರು
ಯಮಕನಮರಡಿಯಲ್ಲಿ ಶುಕ್ರವಾರ ನಡೆದ ಸಾಧನಾ ಸಂಭ್ರಮ ಸಮಾವೇಶದಲ್ಲಿ ಉತ್ತರ ಪ್ರದೇಶ ಮುಖ್ಯಮಂತ್ರಿ ವಿರುದ್ಧ ವಾಗ್ಧಾಳಿ ನಡೆಸಿದ ಸಿದ್ದರಾಮಯ್ಯ, ತಮ್ಮ ಭಾಷಣದಲ್ಲಿ ಕೇವಲ ಯುಪಿ ಸಿಎಂ ಎಂದೇ ಹೇಳುತ್ತಿದ್ದರು. ನಂತರ, ಉತ್ತರ ಪ್ರದೇಶ ಮುಖ್ಯಮಂತ್ರಿಯ ಹೆಸರೇನು ಹೇಳಿ? ಎಂದು ವೇದಿಕೆ ಮೇಲಿದ್ದವರನ್ನು ಕೇಳಿದರು. ಯೋಗಿ ಆದಿತ್ಯನಾಥ ಎಂದು ಹೇಳಿದಾಗ ನಂತರ ಸಿದ್ದರಾಮಯ್ಯ ಅವರು ಆ ಹೆಸರನ್ನು ಸಂಬೋಧಿಸಿದರು.