Advertisement

ಬೂದಿಕೋಟೆ ಮಹಿಳಾ ಸಂಘಗಳಿಗೆ ಸಿಕ್ಕಿಲ್ಲ ಸಾಲದ ಹಣ

02:58 PM Sep 16, 2019 | Team Udayavani |

ಬಂಗಾರಪೇಟೆ: ಮಹಿಳಾ ಸಂಘಗಳಿಗೆ ಡಿಸಿಸಿ ಬ್ಯಾಂಕ್‌ನಿಂದ ಸಾಲ ವಿತರಣೆ ಕಾರ್ಯಕ್ರಮಕ್ಕೆ ಸಂಸದ ಎಸ್‌.ಮುನಿಸ್ವಾಮಿ ಅವರನ್ನು ಆಹ್ವಾನಿಸಿದ್ದಕ್ಕೆ ಬೂದಿಕೋಟೆ ವಿಎಸ್‌ಎಸ್‌ಎನ್‌ ಆಡಳಿತ ಮಂಡಳಿಯಲ್ಲಿ ಭಿನ್ನಮತ ಉಂಟಾಗಿದೆ. ಇದರಿಂದ ಸಾಲ ಘೋಷಣೆಯಾಗಿ 15 ದಿನ ಕಳೆದರೂ 46 ಮಹಿಳಾ ಸಂಘಗಳಿಗೆ ಇನ್ನೂ ಡಿಸಿಸಿ ಬ್ಯಾಂಕ್‌ನಿಂದ ಸಾಲದ ಹಣ ವಿತರಣೆ ಮಾಡಿಲ್ಲ.

Advertisement

ತಾಲೂಕಿನ ಬೂದಿಕೋಟೆ ಸೇರಿ ಐದು ವಿಎಸ್‌ಎಸ್‌ಎನ್‌ ವ್ಯಾಪ್ತಿಯ ಮಹಿಳಾ ಸಂಘಗಳಿಗೆ 7.69 ಕೋಟಿ ರೂ. ಸಾಲದ ಆದೇಶ ಪ್ರತಿ ಇತ್ತೀಚೆಗೆ ವಿತರಣೆ ಮಾಡಲಾಗಿತ್ತು. ಈ ಕಾರ್ಯಕ್ರಮಕ್ಕೆ ಬಿಜೆಪಿ ಸಂಸದ ಎಸ್‌.ಮುನಿಸ್ವಾಮಿ ಅವರನ್ನು ಆಹ್ವಾನಿಸುವ ವಿಚಾರದಲ್ಲಿ ವಿಎಸ್‌ಎಸ್‌ಎನ್‌ನ ಅಧ್ಯಕ್ಷ ಸೀತಾರಾಮಪ್ಪ ಹಾಗೂ ಕೆಲವು ನಿರ್ದೇಶಕರ ನಡುವೆ ಗೊಂದಲ ಸೃಷ್ಟಿಯಾಗಿತ್ತು.

ಸಂಸದ ಎಸ್‌.ಮುನಿಸ್ವಾಮಿ, ಜಿಲ್ಲಾ ಬಿಜೆಪಿ ಅಧ್ಯಕ್ಷ ಬಿ.ಪಿ.ವೆಂಕಟಮುನಿಯಪ್ಪ ಅವರನ್ನು ಯಾವುದೇ ಕಾರಣಕ್ಕೂ ಸಾಲ ವಿತರಣೆ ಕಾರ್ಯಕ್ರಮಕ್ಕೆ ಆಹ್ವಾನ ನೀಡಬಾರದೆಂದು ಷರತ್ತು ವಿಧಿಸಿ, ಸಂಘದ ಅಧ್ಯಕ್ಷ ಸೀತಾರಾಮಪ್ಪ ವಿರುದ್ಧ ಮುನಿಸಿಕೊಂಡಿದ್ದ ನಿರ್ದೇಶಕರ ಸಹಮತ ವಿಲ್ಲದೇ, ಇದ್ದರೂ ಕಾರ್ಯಕ್ರಮ ಆಯೋಜಿಸಿದ್ದನ್ನು ಖಂಡಿಸಿದರು.

ಸೂಪರ್‌ಸೀಡ್‌ ಆಗುವ ಆತಂಕ: ನಂತರ ನಡೆದ ಕಾರ್ಯಕ್ರಮದಲ್ಲಿ ಸಂಸದ ಎಸ್‌.ಮುನಿಸ್ವಾಮಿ ಹಾಗೂ ಮಾಜಿ ಶಾಸಕ ಬಿ.ಪಿ.ವೆಂಕಟಮುನಿಯಪ್ಪ ಹಾಜರಾ ಗಿದ್ದರು. ಇದರಿಂದ ಕೋಪಿಸಿಕೊಂಡಿದ್ದ ನಿರ್ದೇಶ ಕರಾದ ಮಾರ್ಕಂಡೇಯಗೌಡ, ಮುನಿವೆಂಕಟಪ್ಪ, ಆನಂದ್‌, ನಾರಾಯಣಸ್ವಾಮಿ ಹಾಗೂ ಜಯಮ್ಮ ತಮ್ಮ ಸ್ಥಾನಗಳಿಗೆ ರಾಜೀನಾಮೆ ನೀಡಿದ್ದರು. 12 ನಿರ್ದೇಶಕ ಬಲದ ವಿಎಸ್‌ಎಸ್‌ಎನ್‌ನಲ್ಲಿ ಐದು ನಿರ್ದೇಶಕರು ರಾಜೀನಾಮೆ ನೀಡಿದ್ದರು. ಸಂಸ್ಥೆ ಸೂಪರ್‌ಸೀಡ್‌ ಮಾಡುವ ಭೀತಿಯನ್ನು ಅಧ್ಯಕ್ಷ ಸೀತಾರಾಮಪ್ಪರಿಗೆ ಸೃಷ್ಟಿಸಿದ್ದರು.

ಸಾಲ ವಿತರಣೆ ಕಾರ್ಯಕ್ರಮ ಮುಗಿದು 15 ದಿನ ಕಳೆದರೂ ಡಿಸಿಸಿ ಬ್ಯಾಂಕ್‌ ಇದುವರೆಗೂ ಹಣ ನೀಡಿಲ್ಲ. ಕಾರ್ಯಕ್ರಮದಲ್ಲಿ ಎಲ್ಲರಿಗೂ ಸಾಲ ನೀಡಲಾಗುವುದೆಂದು ಘೋಷಣೆ ಮಾಡಿದ್ದರೂ ಇದುವರೆಗೂ ಸಾಲದ ಹಣ ಫ‌ಲಾನುಭವಿಗಳ ಕೈಸೇರಿಲ್ಲ. ಬೂದಿಕೋಟೆ ವ್ಯಾಪ್ತಿಯಲ್ಲಿ 46 ಮಹಿಳಾ ಸಂಘಗಳಿಗೆ 2.03 ಕೋಟಿ ರೂ. ಹಣ ಬಂದಿಲ್ಲ. ಇದರಿಂದ ಮಹಿಳಾ ಸಂಘಗಳು ತೀವ್ರ ಆತಂಕಕ್ಕೆ ಒಳಗಾಗಿವೆ. ಐದಾರು ದಿನಗಳ ಹಿಂದೆ ಮಹಿಳಾ ಸಂಘಗಳಿಗೆ ತಾಲೂಕಿನ ಹುಣಸನಹಳ್ಳಿ ವಿಎಸ್‌ಎಸ್‌ಎನ್‌ನಿಂದ 3 ಕೋಟಿ ರೂ. ವಿತರಣೆ ಮಾಡಲಾಗಿದೆ. ಆಲಂಬಾಡಿ ಜ್ಯೋತನಹಳ್ಳಿ ವಿಎಸ್‌ಎಸ್‌ಎನ್‌ಗೂ ಸಾಲದ ಹಣ ನೀಡಿಲ್ಲ. ಉಳಿದ ಬಲಮಂದೆ ಹಾಗೂ ಗುಲ್ಲಹಳ್ಳಿ ವಿಎಸ್‌ಎಸ್‌ಎನ್‌ ವ್ಯಾಪ್ತಿಯ ಮಹಿಳಾ ಸಂಘಗಳು ಸಾಲ ವಿತರಣೆಗೆ ಅರ್ಜಿ ಹಾಕಿದ್ದು, ಇನ್ನೂ ಡಿಸಿಸಿ ಬ್ಯಾಂಕ್‌ ಮಂಜೂರಾತಿ ಪತ್ರ ನೀಡೇ ಇಲ್ಲ. ಸಾಲ ವಿತರಣೆ ಕಾರ್ಯಕ್ರಮಲ್ಲಿ ಮೌಖೀಕವಾಗಿ ಘೋಷಣೆ ಮಾಡಿದ್ದಾರೆ ಹೊರತು, ಅಧಿಕೃತವಾಗಿ ಮಂಜೂರಾತಿಯೇ ನೀಡಿಲ್ಲ.

Advertisement

ತಾಲೂಕಿನ ಬೂದಿಕೋಟೆ ವಿಎಸ್‌ಎಸ್‌ಎನ್‌ನಲ್ಲಿ ಆಡಳಿತ ಮಂಡಳಿಯಲ್ಲಿ ಎರಡು ಗುಂಪುಗಳ ನಡುವೆ ವಿವಾದವು ಏರ್ಪಟ್ಟಿರುವುದರಿಂದ ಮಹಿಳಾ ಸಂಘಗಳಿಗೆ ಸಾಲದ ಹಣ ನೀಡುವುದಿಲ್ಲ ಎಂಬ ಸುದ್ದಿ ವ್ಯಾಪಕವಾಗಿ ಕೇಳಿ ಬರುತ್ತಿರುವುದರಿಂದ ಮಹಿಳಾ ಸಂಘಗಳಲ್ಲಿ ತೀವ್ರ ಅಸಮಾಧಾನ ಉಂಟಾಗಿದೆ.

ಆಡಳಿತ ಮಂಡಳಿಯ ರಾಜಕೀಯ ಜಿದ್ದಾಜಿದ್ದಿಗಾಗಿ ಮಹಿಳಾ ಸಂಘಗಳಿಗೆ ಸಾಲದ ಹಣ ನೀಡದೇ ನಿರ್ಲಕ್ಷ್ಯವಹಿಸಿದ್ದಾರೆ. ವಿಎಸ್‌ಎಸ್‌ಎನ್‌ ಅಧ್ಯಕ್ಷ ಸೀತಾರಾಮಪ್ಪ ನನಗೆ ಏನೂ ಗೊತ್ತಿಲ್ಲ ಎಂದು ಹೇಳಿ ಮೊಬೈಲ್ ಸ್ವಿಚ್ ಆಫ್ ಮಾಡಿಕೊಂಡು ಯಾರಿಗೂ ಸಿಗದೆ ತೋಟದ ಕೆಲಸದಲ್ಲಿ ಬ್ಯೂಸಿಯಾಗಿ ದ್ದಾರೆ ಎನ್ನಲಾಗಿದೆ.

 

● ಎಂ.ಸಿ.ಮಂಜುನಾಥ್‌

Advertisement

Udayavani is now on Telegram. Click here to join our channel and stay updated with the latest news.

Next