ಬಿಡು, ಅಷ್ಟಕ್ಕೂ ಬಲವಂತದ ಸ್ನೇಹ ಎಷ್ಟು ದಿನ ಇದ್ದೀತು? ಕೊನೆಯದಾಗಿ ಒಂದು ಮಾತು. ನೀನು ಎಲ್ಲಿದ್ದರೂ ಚೆನ್ನಾಗಿರು.
ಕೊಟ್ಟ ಮಾತನ್ನು ನೀನು ಉಳಿಸಿಕೊಳ್ಳಲಿಲ್ಲ. ಅದಕ್ಕೇ ನಾನು ನಿನ್ನಿಂದ ದೂರವಾಗಿದ್ದು. ದಿನಕ್ಕೆ ಒಮ್ಮೆಯಾದರೂ ಮಾತಾಡುತ್ತಿದ್ದ ನಮ್ಮಿಬ್ಬರ ಮಧ್ಯೆ ಇದ್ದಕ್ಕಿದ್ದಂತೆ ಅದೇನಾಯಿತು? ಬಹುಶಃ ಅದಕ್ಕೆ ಉತ್ತರ ನಿನಗೇ ತಿಳಿದಿರಬೇಕು. ನೀನೇಕೆ ನನ್ನನ್ನು ಅವಾಯ್ಡ ಮಾಡಿದೆ? ಈ ಪ್ರಶ್ನೆಗೂ ನನ್ನ ಬಳಿ ಉತ್ತರವಿಲ್ಲ. ಪರಿಚಯವಾದ ಮೊದಲು, ಎಷ್ಟೇ ಕಷ್ಟವಾದರೂ ಸರಿ, ನಿನ್ನ ಫ್ರೆಂಡ್‌ಶಿಪ್ ಬಿಡಲ್ಲ. ಕೊನೆಯವರೆಗೂ ಜೊತೆಗೇ ಇರುತ್ತೇನೆ ಅಂತ ಹೇಳಿದ್ದವಳು ನೀನು. ಆದರೆ, ಹೇಳಿದಷ್ಟೇ ಸುಲಭವಾಗಿ ಮಾತು ಮರೆತವಳೂ ನೀನೇ! ಭಾಷೆ, ಆಣೆ, ಪ್ರಮಾಣದ ಜೊತೆಗಿದ್ದ ಮಾತುಗಳು ಎಲ್ಲಿ ಹೋದವು?
ಆರಂಭದಲ್ಲಿ ದಿನವೂ ಕರೆ ಮಾಡಿ ತಲೆ ತಿನ್ನುತ್ತಿದ್ದ ನೀನು, ಕಡೆಗೆ ನಾನೇ ಕರೆ ಮಾಡಿದರೂ ಸ್ವೀಕರಿಸದಷ್ಟು ಬ್ಯುಸಿಯಾಗಿಬಿಟ್ಟೆಯಾ? ಖಂಡಿತ ಇಲ್ಲ, ಮಾತನಾಡಲು ಇಷ್ಟವಿಲ್ಲದವರಷ್ಟೇ ಈ ಬ್ಯುಸಿ ಎನ್ನುವ ಪದವನ್ನು ಬಳಸಿಕೊಳ್ಳುತ್ತಾರೆ ಎನ್ನುವ ಕಹಿ ಸತ್ಯವನ್ನು ನಾನಾಗಲೇ ಬಲ್ಲೆ. ನನ್ನನ್ನು ನೋಡಲಿಕ್ಕೆ ಇಷ್ಟವಿಲ್ಲದಿದ್ದರೆ ಅದನ್ನು ನೇರವಾಗಿ ಹೇಳಿದ್ದರೆ ಆಗುತ್ತಿರಲಿಲ್ಲವೆ?
ಖಂಡಿತ ನಾನು ನಿನ್ನನ್ನು ದೂಷಿಸುತ್ತಿಲ್ಲ. ಯಾಕಂದ್ರೆ ಎಲ್ಲವೂ ನಿನ್ನದೇ ತಪ್ಪಲ್ಲ, ಇದರಲ್ಲಿ ನನ್ನದೂ ತಪ್ಪಿದೆ. ನಿನ್ನನ್ನು ಜಾಸ್ತಿ ಹಚ್ಚಿಕೊಳ್ಳಬಾರದಾಗಿತ್ತು. ನಿಜ ಹೇಳಲಾ? ನಾನೊಬ್ಬ ಹುಚ್ಚ. ಸ್ನೇಹ ಬಯಸಿ ನನ್ನ ಬಳಿ ಬಂದ ಯಾರನ್ನೂ ದೂರಮಾಡಿಕೊಳ್ಳುವುದಿಲ್ಲ, ಹಾಗೆಯೇ ಒಮ್ಮೆ ಬಿಟ್ಟು ಹೋದರೆ ನನ್ನಷ್ಟು ಮರುಗುವ ಇನ್ನೊಬ್ಬ ಯಾರೂ ಸಿಗಲಾರ. ಅಷ್ಟರ ಮಟ್ಟಿಗಿನ ಹುಚ್ಚ ನಾನು. ಪ್ರೀತಿಯ ಹಿಂದೆ ಬಿದ್ದರೆ ಮೋಸ ಮಾಡುತ್ತಾರೆ, ಆದರೆ ಸ್ನೇಹದಲ್ಲಿ ಮೋಸವಿರುವುದಿಲ್ಲ ಎಂದಿದ್ದೆಯಲ್ಲವೆ? ಹಾಗಿದ್ದರೆ ನೀನು ಮಾಡಿದ್ದೇನು? ಇದೂ ಮೋಸವಲ್ಲವೇ? ನಿನಗೂ ನನ್ನ ಸ್ನೇಹ ಇಷ್ಟವಿಲ್ಲವೆಂದು ಅನಿಸುತ್ತಿದೆ. ಬಿಡು, ಅಷ್ಟಕ್ಕೂ ಬಲವಂತದ ಸ್ನೇಹ ಎಷ್ಟು ದಿನ ಇದ್ದೀತು? ಕೊನೆಯದಾಗಿ ಒಂದು ಮಾತು. ನೀನು ಎಲ್ಲಿದ್ದರೂ ಚೆನ್ನಾಗಿರು.
– ಪುರುಷೋತ್ತಮ ವೆಂಕಿ