Advertisement

ಬಾಹ್ಯಾಕಾಶದಲ್ಲೂ ಸೋಲುಂಡ ಚೀನ

12:29 AM Sep 24, 2020 | mahesh |

ಹೊಸದಿಲ್ಲಿ: ಭಾರತದ ಕೆಲವು ಉಪಗ್ರಹ ಸಂಪರ್ಕಗಳ ಮೇಲೆ ಚೀನದ ಹ್ಯಾಕರ್‌ಗಳು ದಾಳಿಗೆ ಯತ್ನಿಸಿದ್ದು, ವಿಫ‌ಲಗೊಳಿಸಲಾಗಿದೆ ಎಂದು ಇಸ್ರೋ ವಿಜ್ಞಾನಿಗಳು ಬಹಿರಂಗಪಡಿಸಿದ್ದಾರೆ. ಈ ಮೂಲಕ ಬಾಹ್ಯಾಕಾಶದಲ್ಲೂ ಚೀನವು ಸೋತಿದೆ.

Advertisement

ಅಮೆರಿಕ ಮೂಲದ “ಚೀನ ಬಾಹ್ಯಾಕಾಶ ಅಧ್ಯಯನ ಸಂಸ್ಥೆ’ (ಸಿಎಎಸ್‌ಐ) ಬಹಿರಂಗಪಡಿಸಿದ 142 ಪುಟಗಳ ವರದಿಯಲ್ಲಿ ಈ ದುಷ್ಕೃತ್ಯಗಳು ಬಯಲಾಗಿವೆ. ಚೀನದ ಕಂಪ್ಯೂಟರ್‌ ನೆಟ್‌ವರ್ಕ್‌ಗಳಿಂದ ಬಾಹ್ಯಾಕಾಶದಲ್ಲಿ ನಾಸಾ ಸ್ಥಾಪಿಸಿರುವ ಜೆಟ್‌ ನೆಟ್‌ವರ್ಕ್‌ ಲ್ಯಾಬೊರೇಟರಿ (ಜೆಪಿಎಲ್‌) ಸಂಶೋಧನ ಕೇಂದ್ರದ ಮೇಲೆ ದಾಳಿ ನಡೆಸಲಾಗಿತ್ತು. ಆದರೆ ಜೆಪಿಎಲ್‌ ತನ್ನ ನೆಟ್‌ವರ್ಕ್‌ಗಳ ಮೇಲೆ ಸಂಪೂರ್ಣ ನಿಯಂತ್ರಣ ಹೊಂದಿದ್ದರಿಂದ ಏನೂ ಮಾಡಲಾಗಿರಲಿಲ್ಲ ಎಂದು ವರದಿ ಹೇಳಿದೆ ಎಂಬುದಾಗಿ ಆಂಗ್ಲ ಪತ್ರಿಕೆಯೊಂದು ವರದಿ ಮಾಡಿದೆ.

ಇಸ್ರೋ ಮೇಲೂ ಕಣ್ಣು
ಇಸ್ರೋ ಸ್ಥಾಪಿತ ಉಪಗ್ರಹ ವ್ಯವಸ್ಥೆ ಮೇಲೂ ಚೀನದ ಹ್ಯಾಕರ್‌ಗಳ ವಕ್ರದೃಷ್ಟಿ ಬಿದ್ದಿತ್ತು. ಭಾರತೀಯ ಉಪಗ್ರಹ ಸಂಪರ್ಕಗಳ ಮೇಲೆ ದಾಳಿ ನಡೆಸಿ ದೂರಸಂಪರ್ಕ ವ್ಯವಸ್ಥೆಗೆ ಹಾನಿ ತರಲು ಚೀನ ಉದ್ದೇಶಿಸಿತ್ತು. 2019ರಲ್ಲಿ ಭಾರತ ಅಭಿವೃದ್ಧಿಪಡಿಸಿದ್ದ ಉಪಗ್ರಹ ಪ್ರತಿರೋಧ ಕ್ಷಿಪಣಿ ತಂತ್ರಜ್ಞಾನ ವ್ಯವಸ್ಥೆ (ಎ-ಸ್ಯಾಟ್‌)ಯನ್ನು ಹ್ಯಾಕರ್‌ಗಳು ಗುರಿ ಮಾಡಿದ್ದರು ಎಂದು ವರದಿ ಹೇಳಿದೆ.

ಸೋಲುಂಡ ಚೀನ
ಬೀಜಿಂಗ್‌ನ ಹ್ಯಾಕರ್‌ಗಳು 2012 ಮತ್ತು 18ರ ಅವಧಿಯಲ್ಲಿ ಬಹುಮಾದರಿಯ ಸೈಬರ್‌ ದಾಳಿಗೆ ಹೊಂಚು ಹಾಕಿದ್ದರು. ಆದರೆ ಇಸ್ರೋ ತನ್ನ ವ್ಯವಸ್ಥೆಗಳನ್ನು ಸುರಕ್ಷಿತವಾಗಿರಿಸಿಕೊಂಡಿದೆ ಎಂದು ವರದಿ ಹೇಳಿದೆ. “ಸೈಬರ್‌ ಬೆದರಿಕೆಗಳ ಹಿಂದೆ ಯಾರಿದ್ದರೆಂದು ತಿಳಿದಿರಲಿಲ್ಲ. ದಾಳಿಯ ಮುನ್ಸೂಚನೆಗಳು ಸಿಗುವಂತೆ ನಾವು ಬಾಹ್ಯಾಕಾಶದಲ್ಲಿ ತಂತ್ರಜ್ಞಾನ ಅಳವಡಿಸಿದ್ದೇವೆ. ಬಹುಶಃ ಚೀನೀಯರು ದಾಳಿ ಮಾಡಿರಬಹುದು. ಆದರೆ ಅದರಲ್ಲಿ ವಿಫ‌ಲರಾಗಿದ್ದಾರೆ’ ಎಂದು ಹಿರಿಯ ವಿಜ್ಞಾನಿಯೊಬ್ಬರು ತಿಳಿಸಿದ್ದಾರೆ.

ಲಾಮಾ ವಿರುದ್ಧ ಚೀನ ಗೂಢಚರ್ಯೆ
ಚೀನವು ಬೌದ್ಧರ ಪರಮಗುರು ದಲಾಯಿ ಲಾಮಾ ಬಗ್ಗೆ ರಹಸ್ಯ ವಾರ್ತೆ ಸಂಗ್ರಹ ಮತ್ತು ಅವರ ವಿರುದ್ಧ ದಂಗೆಯೇಳಲು ರಾಜ್ಯದ ಬೈಲಕುಪ್ಪೆ ಮತ್ತು ಮುಂಡಗೋಡಿನ ಕೆಲವು ಬೌದ್ಧ ಸನ್ಯಾಸಿಗಳಿಗೆ ಲಂಚದ ಆಮಿಷ ಒಡ್ಡಿರುವ ಅಂಶ ಬಹಿರಂಗವಾಗಿದೆ. ಲಾಮಾ ಬಗ್ಗೆ ಗೂಢಚರ್ಯೆ ನಡೆಸುವುದಕ್ಕಾಗಿ ಭಾರತಕ್ಕೆ ಬಂದಿದ್ದ ಚೀನದ ಚಾರ್ಲಿ ಪೆಂಗ್‌ ಎಂಬಾತ ಬೈಲಕುಪ್ಪೆ ಮತ್ತು ಮುಂಡಗೋಡಿನ ಸನ್ಯಾಸಿಗಳಿಗೆ ಲಕ್ಷಾಂತರ ರೂ. ನೀಡಿದ್ದ ಎಂದು ಖಾಸಗಿ ಟಿವಿ ವಾಹಿನಿಯೊಂದು ವರದಿ ಮಾಡಿದೆ. ಈತನ ಎಸ್‌.ಕೆ. ಟ್ರೇಡಿಂಗ್‌ ಕಂಪೆನಿಯ ಖಾತೆಯಿಂದ ಬೈಲಕುಪ್ಪೆಯ ಬೌದ್ಧಾಲಯದ ಜಮಾಯಂಗ್‌ ಜಿಂಪಾ ಖಾತೆಗೆ 30 ಲಕ್ಷ ರೂ. ವರ್ಗಾವಣೆಯಾಗಿದೆ ಎಂದು ತನಿಖಾಧಿಕಾರಿಯೊಬ್ಬರು ತಿಳಿಸಿದ್ದಾರೆ.

Advertisement

ಮುಂಡಗೋಡಿಗೂ ಹಣ
ಮುಂಡಗೋಡಿನಲ್ಲೂ ಮೂರು ಸನ್ಯಾಸಿಗಳು ಹಣ ಸ್ವೀಕರಿಸಿದ ಆರೋಪ ಎದುರಿಸುತ್ತಿದ್ದಾರೆ. ಚಾರ್ಲಿ ಪೆಂಗ್‌ ಹಲವು ಬೌದ್ಧ ಸನ್ಯಾಸಿಗಳಿಗೆ ಲಂಚ ನೀಡಿ, ದಲಾಯಿ ಲಾಮಾ ಮತ್ತು ಅವರ ಸಹಚರರ ಕುರಿತು ಮಾಹಿತಿ ಕಲೆಹಾಕುತ್ತಿದ್ದ ಎಂದು ತನಿಖಾಧಿಕಾರಿಗಳು ಶಂಕಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next