ಹೊಸದಿಲ್ಲಿ : ಬಿಲಿಯಾಧಿಪತಿ ವಜ್ರಾಭರಣ ಉದ್ಯಮಿ ನೀರವ್ ಮೋದಿ ಮತ್ತು ಆತನ ಚಿಕ್ಕಪ್ಪ ಮೆಹುಲ್ ಚೋಕ್ಸಿ ಮಾತ್ರವಲ್ಲದೆ ಇನ್ನೂ ಕನಿಷ್ಠ 31 ಆರ್ಥಿಕ ಅಪರಾಧ ಶಂಕಿತ ಉದ್ಯಮಿಗಳು ದೇಶದಿಂದ ಪಲಾಯನ ಮಾಡಿದ್ದಾರೆ.
ಈ ಆಘಾತಕಾರಿ ಮಾಹಿತಿಯನ್ನು ಇಂದು ಸರಕಾರ ಲೋಕಸಭೆಗೆ ತಿಳಿಸಿತು.
ದೇಶದಲ್ಲಿ ಆರ್ಥಿಕ ಅಪರಾಧಗಳ ಹಗರಣ ಗೈದು ಕಾನೂನು ಕ್ರಮಕ್ಕೆ ಗುರಿಯಾಗುವ ಮುನ್ನವೇ ಈ ಶಂಕಿತ ಅಪರಾಧೀ ಉದ್ಯಮಿಗಳು ದೇಶ ಬಿಟ್ಟು ಓಡಿ ಹೋಗಿ ವಿವಿಧ ದೇಶಗಳಲ್ಲಿ ನೆಲೆಸಿದ್ದಾರೆ ಎಂದು ವಿದೇಶ ವ್ಯವಹಾರಗಳ ಕೇಂದ್ರ ಸಹಾಯಕ ಸಚಿವ ಎಂ ಜೆ ಅಕ್‌ಬರ್ ತಿಳಿಸಿದರು.
ಜಾರಿ ನಿರ್ದೇಶನಾಲಯ ಮತ್ತು ಸಿಬಿಐ ನಿಂದ ತನಿಖೆ ಗುರಿಯಾಗಿರುವ ಮತ್ತು ದೇಶದಿಂದ ಪಲಾಯನ ಮಾಡಿರುವ ಶಂಕಿತ ಆರ್ಥಿಕ ಅಪರಾಧೀ ಉದ್ಯಮಿಗಳ ಪಟ್ಟಿಯಲ್ಲಿ ಮುಖ್ಯವಾಗಿ ಕಾಣಿಸಿಕೊಂಡಿರುವವರೆಂದರೆ ನೀರವ್ ಮೋದಿ, ಅವರ ಪತ್ನಿ ಅಮಿ ನೀರವ್ ಮೋದಿ, ಪುತ್ರ ನೀಶಾಲ್ ಮೋದಿ, ಮದ್ಯ ದೊರೆ ವಿಜಯ್ ಮಲ್ಯ, ಕ್ರಿಕೆಟ್ ದೊರೆ ಲಲಿತ್ ಮೋದಿ, ಶಸ್ತ್ರಾಸ್ತ್ರ ವ್ಯಾಪಾರಿ ಸಂಜಯ್ ಭಂಡಾರಿ. ಇವರಲ್ಲಿ ಕೆಲವರು ಯಾವಾಗ ವಿದೇಶಕ್ಕೆ ಪರಾರಿಯಾದರೆಂಬ ಮಾಹಿತಿ ಗೊತ್ತಾಗಿಲ್ಲ.
ಆರ್ಥಿಕ ಅಪರಾಧ ಎಸಗಿ ವಿದೇಶಕ್ಕೆ ಪಲಾಯನ ಮಾಡಿರುವವರಲ್ಲಿ ಸಿಬಿಐನಿಂದ ಗಡೀಪಾರು ಕೋರಿಕೆಯನ್ನು ಸ್ವೀಕರಿಸಲಾಗಿದ್ದು ಆ ವ್ಯಕ್ತಿಗಳೆಂದರೆ : ವಿಜಯ್ ಮಲ್ಯ, ಆಶಿಶ್ ಜಬನ್‌ಪುತ್ರ, ಪುಷ್‌ಪೇಶ್ ಕುಮಾರ್ ಬೈದ್, ಸಂಜಯ್ ಕಾರ್ಲಾ, ವರ್ಷಾ ಕಾರ್ಲಾ, ಮತ್ತು ಆರತಿ ಕಾರ್ಲಾ.
ಆರ್ಥಿಕ ಅಪರಾಧಿಗಳ ಪಟ್ಟಿ ಇಂತಿದೆ : ಸೌಮಿತ್ ಜೆನಾ, ವಿಜಯ್ ಕುಮಾರ್ ರೇವಾಭಾಯ್ ಪಟೇಲ್, ಸುನೀಲ್ ರಮೇಶ್ ರೂಪಾಣಿ. ಪುಷ್‌ಪೇಶ್ ಕುಮಾರ್ ಬೈದ್, ಸುರೇಂದರ್ ಸಿಂಗ್, ಅಂಗದ್ ಸಿಂಗ್, ಹರ್‌ಸಾಹಿಬ್ ಸಿಂಗ್, ಹರ್‌ಲೀನ್ ಕೌರ್, ಆಶಿಶ್ ಜಬನ್‌ಪುತ್ರ, ಜತಿನ್ ಮೆಹ್ತಾ, ಚೇತನ್ ಜಯಂತಿಲಾಲ್ ಸಂದೇಸರ, ದೀಪ್ತಿ ಚೇತನ್ ಸಂದೇಸರ, ನಿತಿನ್ ಜಯಂತಿಲಾಲ್ ಸಂದೇಸರ, ಸಭ್ಯ ಸೇಟ್, ನೀಲೇಶ್ ಪಾರೇಖ್, ಉಮೇಶ್ ಪಾರೇಖ್, ಸನ್ನಿ ಕಾರ್ಲಾ, ಆರತಿ ಕಾರ್ಲಾ, ಸಂಜಯ್ ಕಾರ್ಲಾ, ವರ್ಷಾ ಕಾರ್ಲಾ, ಹೇಮಂತ್ ಗಾಂಧಿ, ಈಶ್ವರ್‌ಭಾಯಿ ಭಟ್, ಎಂ ಜಿ ಚಂದ್ರಶೇಖರ್, ಚೆರಿಯ ವಣ್ಣಾರ್ಕಳ ಸುಧೀರ್, ನೌಶಾ ಕದೀಜಾತ್ ಮತ್ತು ಚೆರಿಯಾ ವೆಟ್ಟಿಲ್ ಸಾದಿಕ್.