ಗಿರೀಶ್ ಹಾಗೂ ಗಿರಿಜಾ ಒಂದೇ ಆಫೀಸಿನಲ್ಲಿ ಉದ್ಯೋಗಿಗಳು. ಇಬ್ಬರೂ ಪರಸ್ಪರ ಮೆಚ್ಚಿಕೊಂಡು ಮದುವೆಯಾಗಿ ಎರಡು ವರ್ಷಗಳಾಗಿವೆ. 2020ರಲ್ಲಿ ಮಕ್ಕಳನ್ನು ಮಾಡಿಕೊಳ್ಳೋಣ ಎಂದು ಅವರು ನಿರ್ಧರಿಸಿದ್ದರು. ಜನವರಿಯಲ್ಲಿ ಗಿರಿಜಾ ಚೆಕಪ್ ಮಾಡಿಸಿಕೊಂಡರು. ಆಗ ವೈದ್ಯರು, ಮಕ್ಕಳಾಗಲು ಸಮಸ್ಯೆಯಿಲ್ಲ ಎಂದು ಹೇಳಿದಾಗ ಇಬ್ಬರೂ ಖುಷಿಪಟ್ಟಿದ್ದರು.
ಅದೇ ಸಮಯಕ್ಕೆ, ಕೋವಿಡ್ ಭಾರತಕ್ಕೆ ಕಾಲಿಟ್ಟಾಗ, ಗಿರಿಜಾಗೆ ಹೆದರಿಕೆ ಶುರುವಾಯ್ತು. ಲಾಕ್‌ಡೌನ್ ಘೋಷಣೆಯಾದಾಗ, ಕೆಲಸ ಹೋಗಬಹುದೆಂಬ ಗಾಳಿಸುದ್ದಿ
ವಾಟ್ಸಾಪ್‌ನಲ್ಲಿ ಹರಡ ತೊಡಗಿದಾಗ, ಗಿರೀಶ್ ಕೂಡಾ ಖನ್ನತೆಗೆ ಜಾರಿದರು.
ಉದ್ಯೋಗದ ಅನಿಶ್ಚಿತತೆ ಇದ್ದರೂ, ಮಕ್ಕಳನ್ನು ಮಾಡಿಕೊಳ್ಳೋಣ ಎಂದು ಗಿರಿಜಾ ಹೇಳಿದಾಗ, ಗಿರೀಶ್ ಸಿಕ್ಕಾಪಟ್ಟೆ ರೇಗಾಡಿದ್ದಾರೆ. ಮನೆಯ ಬಾಡಿಗೆ, ಕಾರಿನ ಕಂತು, ಊರಿಗೆ ಕಳಿಸುವ ಹಣ ಮತ್ತು ದಿನನಿತ್ಯದ ಖರ್ಚು, ಇದರ ನಡುವೆ ಬಸಿರು-ಬಾಣಂ ತನಕ್ಕೆ ಹಣವಿಲ್ಲ ಎಂದಿದ್ದಾರೆ. ಈ ಮಾತು ಕೇಳಿ, ಗಿರಿಜಾಗೆ ಸಿಟ್ಟು-ಸಿಡಿಮಿಡಿ ಜಾಸ್ತಿಯಾಗಿದೆ. ಅದೇ ಕಾರಣಕ್ಕೆ ನಿದ್ದೆ ಹತ್ತದೆ ಹದಿನೈದು ದಿನಗಳಾಗಿವೆ.
ಮನೆಕೆಲಸ, ಆಫೀಸ್ ಕೆಲಸವನ್ನು ಯಾಂತ್ರಿಕವಾಗಿ ಮಾಡುತ್ತಿದ್ದಾರೆ. ಗಿರೀಶ್ ಬಳಿಯೂ ಮಾತನಾಡುತ್ತಿಲ್ಲ. ಹೀಗಾಗಿ, ನನ್ನ ಬಳಿ ಆನ್‌ಲೈನ್ ಕೌನ್ಸೆಲಿಂಗ್‌ಗೆ ಬಂದರು. ಸಮಸ್ಯೆ ಗಿರಿಜಾರದ್ದು ಅಂತ ಮೇಲ್ನೋಟಕ್ಕೆ ಕಂಡು ಬಂದರೂ, ಸಮಾಧಾನ ಮೊದಲು ಗಿರೀಶ್‌ಗೇ ಬೇಕಾಗಿತ್ತು. ನಿಧಾನವಾಗಿ ಇಬ್ಬರಿಗೂ ಧೈರ್ಯ ತುಂಬಿದೆ. “ತಾಯಿಯಾಗುವುದು, ಹೆಣ್ಣಿಗೆ ಭಾವನಾತ್ಮಕ ಪ್ರಕ್ರಿಯೆ. ವಯಸ್ಸು ಕಳೆದು ಹೋದಮೇಲೆ ಮಕ್ಕಳಾಗಲು ತೊಂದರೆಯಾದರೆ, ಪಶ್ಚಾತ್ತಾಪವಾಗುತ್ತದೆ. ಮಗು ಹುಟ್ಟಿದ ನಂತರ ಮೂರು ವರ್ಷಗಳು, ಇತರೆ ಅನಗತ್ಯ ಖರ್ಚುಗಳಿಗೆ ಕಡಿವಾಣ ಹಾಕಿದರೆ, ಆರ್ಥಿಕ ಮುಗ್ಗಟ್ಟಿನಿಂದ ಪಾರಾಗಬಹುದು. ಮನೆಯಿಂದಲೇ ಕೆಲಸ ಮಾಡುವ ಪರಿಸ್ಥಿತಿ ಮುಂದುವರಿದರೆ, ಹುಟ್ಟೂರಿಗೆ ಮರಳಬಹುದು. ಆಗ ಬಾಡಿಗೆ ಉಳಿಯುತ್ತದೆ. ಮನೆಯವರ ಪ್ರೀತಿ, ಸಹಾಯವೂ ದೊರೆಯುತ್ತದೆ.’ ಅಂದೆ. ಇದನ್ನೆಲ್ಲ ಕೇಳಿದ ಮೇಲೆ, ಗಿರೀಶ್, ಕೂಲ್ ಆದರು. ವಿಪತ್ತಿನಲ್ಲಿ, ಸಾಂದರ್ಭಿಕ ಖಿನ್ನತೆ ಕೆಲವರನ್ನು ಕಾಡುತ್ತದೆ. ಭಯದ ಜಾಗದಲ್ಲಿ ದೇಶಪ್ರೇಮವನ್ನು ಬೆಳೆಸಿಕೊಂಡರೆ ಆತ್ಮಸ್ಥೈರ್ಯ ತಂತಾನೇ ಬರುತ್ತದೆ.
ಕೊನೆ ಮಾತು: ಅಗತ್ಯಗಳಿಗೆ ಹಣವಿದ್ದರೆ ಸಾಕು, ಬಾಕಿ ಜೀವನ ನಡೆಸಲು ತಾಳ್ಮೆ ಮತ್ತು ತೃಪ್ತಿ ಬೇಕು.