ಮಂಡ್ಯ: “ನಾನು ಯಾವುದೇ ಪಕ್ಷ ಸೇರುವ ಬಗ್ಗೆ ಯೋಚಿಸಿಲ್ಲ’ ಎಂದು ಸಂಸದೆ ಸುಮಲತಾ ಅಂಬರೀಶ್ ಸ್ಪಷ್ಟಪಡಿಸಿದ್ದಾರೆ.
ಬಿಜೆಪಿ ಕಚೇರಿಯಲ್ಲಿ ಮಾತನಾಡಿ, ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ನನ್ನನ್ನು ಬೆಂಬಲಿಸಲಿಲ್ಲ. ಆ ಪಕ್ಷದ ಕಾರ್ಯಕರ್ತರು ಮಾತ್ರ ನನಗೆ ಶಕ್ತಿಯಾಗಿ ನಿಂತರು. ಬಿಜೆಪಿ ನನಗೆ ಬಹಿರಂಗವಾಗಿಯೇ ಬೆಂಬಲ ಘೋಷಿಸಿತು.
ಹಾಗಾಗಿ, ನಾನು ಬಿಜೆಪಿ ಕಚೇರಿಗೆ ಬಂದು ಕಾರ್ಯಕರ್ತರಿಗೆ ಕೃತಜ್ಞತೆ ಸಲ್ಲಿಸುತ್ತಿದ್ದೇನೆ. ಸದ್ಯದ ಪರಿಸ್ಥಿತಿಯಲ್ಲಿ ನಾನು ಕಾಂಗ್ರೆಸ್ ಪಕ್ಷದ ಕಚೇರಿಗೆ ಹೋಗಲಾಗುವುದಿಲ್ಲ. ಆದರೆ, ಪಕ್ಷದ ಕಾರ್ಯಕರ್ತರಿಗೆ ಈಗಾಗಲೇ ಹಲವಾರು ವೇದಿಕೆಗಳಲ್ಲಿ ಕೃತಜ್ಞತೆ ಸಲ್ಲಿಸಿದ್ದೇನೆ ಎಂದರು.
“ಈಗಲೂ ನಾನು ಪಕ್ಷೇತರ ಸಂಸದೆ. ಈವರೆಗೂ ಯಾವ ಪಕ್ಷದವರೂ ನನ್ನನ್ನು ಆಹ್ವಾನಿಸಿಲ್ಲ. ಈ ಪಕ್ಷವನ್ನೇ ಸೇರಬೇಕು ಎಂಬ ಬಗ್ಗೆ ನಾನೂ ಯಾವುದೇ ನಿರ್ಧಾರ ಮಾಡಿಲ್ಲ. ನಾನು ಎಲ್ಲ ಪಕ್ಷದ ಕಾರ್ಯಕರ್ತರ ಒತ್ತಾಸೆಯಿಂದ ಪಕ್ಷೇತರ ಅಭ್ಯರ್ಥಿಯಾಗಿ ಗೆಲುವು ಸಾಧಿಸಿದ್ದೇನೆ. ಪಕ್ಷಾತೀತವಾಗಿ ಕೆಲಸ ಮಾಡುತ್ತೇನೆ’ ಎಂದು ಸ್ಪಷ್ಟಪಡಿಸಿದರು.
ರೈತರು ಹಾಗೂ ಜಿಲ್ಲೆಯ ಜ್ವಲಂತ ಸಮಸ್ಯೆಗಳ ನಿವಾರಣೆಗೆ ಈಗಾಗಲೇ ಸಂಸತ್ತು ಹಾಗೂ ಪ್ರಧಾನಿಯವರ ಗಮನ ಸೆಳೆದಿದ್ದು, ಸಮಸ್ಯೆಗಳಿಗೆ ಸಕಾರಾತ್ಮಕವಾಗಿ ಸ್ಪಂದಿಸುವ ಭರವಸೆ ಪ್ರಧಾನಿಯಿಂದ ಸಿಕ್ಕಿದೆ ಎಂದರು.
ಮಂಡ್ಯ ಜಿಲ್ಲೆಯಲ್ಲಿ ಜೆಡಿಎಸ್ ಪಕ್ಷದ ಎಂಟು ಮಂದಿ ಶಾಸಕರಿದ್ದಾರೆ. ಅಭಿವೃದ್ಧಿ ವಿಚಾರವಾಗಿ ಅಧಿಕಾರದಲ್ಲಿರುವ ಶಾಸಕರನ್ನು ಒತ್ತಾಯಿಸುವ ಬದಲು ಜೋಡೆತ್ತುಗಳನ್ನು ಟೀಕೆ ಮಾಡಿದರೆ ಏನು ಪ್ರಯೋಜನ? ನಾನೊಬ್ಬಳು ಗೆದ್ದ ಮಾತ್ರಕ್ಕೆ ಉಳಿದವರ ಜವಾಬ್ದಾರಿಗಳೆಲ್ಲವೂ ಮುಗಿದಿದೆಯಾ ಅಥವಾ ಅವರ ಸೌಲಭ್ಯಗಳು ಕಡಿತವಾಗಿವೆಯೇ?
– ಸುಮಲತಾ, ಸಂಸದೆ