Advertisement

ತಮಿಳುನಾಡಿಗೆ ನೀರು ಬಿಡಲ್ಲ; ಸಿದ್ದರಾಮಯ್ಯ

06:00 AM Jan 14, 2018 | |

ಬೆಂಗಳೂರು: ನಮಗೇ ನೀರಿಲ್ಲದಿರುವುದರಿಂದ ತಮಿಳುನಾಡಿಗೆ ಕಾವೇರಿ ನೀರು ಬಿಡಲು ಸಾಧ್ಯವಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಪಷ್ಟವಾಗಿ ಹೇಳಿದ್ದಾರೆ.

Advertisement

ತಮಿಳುನಾಡು ಮುಖ್ಯಮಂತ್ರಿ ಪಳನಿಸ್ವಾಮಿ, ಸಾಂಬಾ ಬೆಳೆ ರಕ್ಷಣೆಗೆ ತಕ್ಷಣವೇ 7 ಟಿಎಂಸಿ ನೀರು ಬಿಡುವಂತೆ ಸಿಎಂ ಸಿದ್ದರಾಮಯ್ಯ ಅವರಿಗೆ ಶನಿವಾರ ಪತ್ರ ಬರೆದಿದ್ದಾರೆ. ಇದಕ್ಕೆ ಪ್ರತಿಕ್ರಿಯೆ ನೀಡಿರುವ ಸಿಎಂ ನೀರು ಬಿಡುವುದು ಅಸಾಧ್ಯವೆಂದಿದ್ದಾರೆ.

ಸಂಕ್ರಾಂತಿ ಹಬ್ಬದ ಶುಭಾಶಯ ಕೋರಿ ಪತ್ರ ಬರೆದಿರುವ ತಮಿಳುನಾಡು ಮುಖ್ಯಮಂತ್ರಿ ಪಳನಿಸ್ವಾಮಿ, ಕಾವೇರಿ ನ್ಯಾಯಮಂಡಳಿ ಆದೇಶದಂತೆ ತಮಿಳುನಾಡಿಗೆ  ಕರ್ನಾಟಕ ಪ್ರತಿ ವರ್ಷ 192 ಟಿಎಂಸಿ ನೀರು ಬಿಡಬೇಕು. ಜನವರಿ 9ರೊಳಗೆ 179.871 ಟಿಎಂಸಿ ನೀರು ಬಿಡುಗಡೆ ಮಾಡಬೇಕು ಆದರೆ, ಇದುವರೆಗೂ 111.647 ಟಿಎಂಸಿ ನೀರು ಮಾತ್ರ ಬಿಳಿಗುಂಡ್ಲು ಮಳೆ ಮಾಪನ ಕೇಂದ್ರದ ಮೂಲಕ ಬಂದು ತಲುಪಿದೆ. ನ್ಯಾಯಮಂಡಳಿ ಆದೇಶದ ಪ್ರಕಾರ ಜನವರಿ 9 ರೊಳಗೆ ಬಿಡಬೇಕಾಗಿದ್ದ ಇನ್ನೂ 68.224 ಟಿಎಂಸಿ ನೀರು ಬಿಡಬೇಕಿದೆ.

2017-18 ನೇ ಸಾಲಿನ ಮಳೆ ವರ್ಷದಲ್ಲಿ ಅಕ್ಟೋಬರ್‌ ತಿಂಗಳಿನಲ್ಲಿ ವಿಪರೀತ ಮಳೆಯ ಪರಿಣಾಮ ರೈತರು ಬಿತ್ತನೆ ಮಾಡಿದ್ದ ಸಾಂಬಾ ಬೆಳೆ ನಾಶವಾಗಿ ರೈತರು ಮತ್ತೂಂದು ಬಾರಿ ಬಿತ್ತನೆ ಮಾಡಬೇಕಾದ ಅನಿವಾರ್ಯತೆ ನಿರ್ಮಾಣವಾಯಿತು. ಹೀಗಾಗಿ ಹಿಂಗಾರು ವಿಳಂಬವಾಗಿದ್ದು, ಜನವರಿ ತಿಂಗಳಲ್ಲಿ ಬೆಳೆದು ನಿಂತ ಬೆಳೆಗೆ ನೀರಿನ ಅಗತ್ಯವಿದೆ.

ಸಾಧ್ಯವಿಲ್ಲ
ತಮಿಳುನಾಡು ಮುಖ್ಯಮಂತ್ರಿ ಪತ್ರಕ್ಕೆ ಪ್ರತಿಕ್ರಿಯಿಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ, ತಮಿಳುನಾಡಿಗೆ ನೀರು ಬಿಡಲು ಸಾಧ್ಯವಿಲ್ಲ. ನಮಗೆ ನೀರಿಲ್ಲದಿರುವುದರಿಂದ ಕಾವೇರಿ ನೀರು ಬಿಡುಗಡೆ ಮಾಡಲಾಗದು ಎಂದು ಸ್ಪಷ್ಟಪಡಿಸಿದ್ದಾರೆ. ಮುಂದಿನ ತಿಂಗಳು ಕಾವೇರಿ ನೀರು ಹಂಚಿಕೆ ಕುರಿತು ತೀರ್ಪು ಬರಲಿದ್ದು, ತೀರ್ಪು ನಮ್ಮ ಪರವಾಗಿ ಬರುವ ನಿರೀಕ್ಷೆ ಇದೆ ಎಂದು ಭರವಸೆ ವ್ಯಕ್ತಪಡಿಸಿದರು.

Advertisement

ಮಹದಾಯಿ: ಸರ್ವ ಪಕ್ಷ ಸಭೆ
ಮಹದಾಯಿ ವಿಷಯದಲ್ಲಿ ಶೀಘ್ರವೇ ಸರ್ವ ಪಕ್ಷಗಳ ಸಭೆ ಕರೆದು ಚರ್ಚಿಸಿ ಮುಂದಿನ ತೀರ್ಮಾನ ಕೈಗೊಳಲಾಗುವುದು. ಪ್ರಧಾನಿ ನರೇಂದ್ರ ಮೋದಿಯಿಂದ ಮಾತ್ರ ಮಹದಾಯಿ ಸಮಸ್ಯೆಗೆ ಪರಿಹಾರ ಸಾಧ್ಯ. ಹೀಗಾಗಿ, ರಾಜ್ಯ ಬಿಜೆಪಿ ನಾಯಕರು ಇದನ್ನು ಪ್ರಧಾನಿಗೆ ಮನವರಿಕೆ ಮಾಡಿಕೊಡಲಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next