ಮೈಸೂರು: ಇಂದಿನ ವ್ಯವಸ್ಥೆಯಲ್ಲಿ ಸಾಮಾಜಿಕ ಕಳಕಳಿ ಇರುವ ಸಂಸ್ಥೆಗಳು ಕಡಿಮೆ ಇದ್ದು, ಅಂತಹ ಸಾಲಿನಲ್ಲಿ ಮೈಸೂರು ಸಾಮಾಜಿಕ ಹಾಗೂ ಶೈಕ್ಷಣಿಕ ವಿಕಾಸ ವೇದಿಕೆಯೂ ಒಂದಾಗಿದೆ ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ನ್ಯಾಯಾಧೀಶ ಎಸ್.ಕೆ.ವಂಟಿಗೋಡಿ ಹೇಳಿದರು.
ಮೈಸೂರು ಸಾಮಾಜಿಕ ಹಾಗೂ ಶೈಕ್ಷಣಿಕ ವಿಕಾಸ ವೇದಿಕೆಯು ಅಯೋಜಿಸಿದ್ದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಬಡಮಕ್ಕಳ ಸೇವೆ: ಯಾವುದೇ ಸಂಘ-ಸಂಸ್ಥೆಗಳು ಆರಂಭದ ದಿನಗಳಲ್ಲಿ ಉತ್ತಮ ಸೇವಾ ಕೆಲಸಗಳನ್ನು ಮಾಡುತ್ತವೆ. ಅನಂತರದ ದಿನಗಳಲ್ಲಿ ನಿಂತೆ ಹೋಗುತ್ತವೆ. ಈ ನಿಟ್ಟಿನಲ್ಲಿ ಸಂಸ್ಥೆಯನ್ನು ಉತ್ತಮ ಸೇವೆಗಳ ಮುನ್ನಡೆಸುತ್ತಿರುವುದು ಸಂತಸ ವಿಷಯ.
ಜಾತಿ, ಮತ, ಧರ್ಮದ ಬೇಧವಿಲ್ಲದೇ ಬಡತನ ಹಾಗೂ ಗ್ರಾಮೀಣ ಪ್ರದೇಶದಿಂದ ಬಂದ ನೂರಾರು ಮಕ್ಕಳನ್ನು ಗುರುತಿಸಿ ಪ್ರತಿಭಾ ಪುರಸ್ಕಾರ ಮಾಡುತ್ತಿರುವುದು ಪ್ರಶಂಸನೀಯ. ಇಲ್ಲಿ ಪ್ರಶಸ್ತಿ ಸ್ವೀಕರಿಸಿದ ಮಕ್ಕಳು ನೀವು ಬೆಳೆದು ದೊಡ್ಡವರಾದ ಬಳಿಕ ನಿಮ್ಮ ಹೆತ್ತವರನ್ನು ನೋಡಿಕೊಂಡು ಉತ್ತಮ ಸಮಾಜಕ್ಕೆ ಕಾರಣಕರ್ತರಾಗಿ ಎಂದು ಮಕ್ಕಳಿಗೆ ಕಿವಿಮಾತು ಹೇಳಿದರು.
ಭರವಸೆ, ನಂಬಿಕೆ: ಶೈಕ್ಷಣಿಕ ತರಬೇತುದಾರ ಎಂ.ಎಸ್.ರಘು ಮಾತನಾಡಿ, ಮಕ್ಕಳು ತಮ್ಮ ಮೆದುಳಿನ ನಂಬಿಕೆ ಹಾಗೂ ಭರವಸೆ ಮೇಲೆ ಗುರಿ ಸಾಧಿಸುವುದು ಮುಖ್ಯವಾಗುತ್ತದೆ. ಅದರ ಮೇಲಿನ ನಂಬಿಕೆಯನ್ನು ಹೆಚ್ಚಿಸಿ ಶ್ರಮವಹಿಸಿದರೆ ಸಮೃದ್ಧಿಗೆ ಜತೆಗೆ ಹೋಗುತ್ತಾರೆ. ಯಾರು ಸಹ ನಾವು ಬಡವರೆಂಬ ಕೀಳರಿಮೆ ಬೇಡ. ಇಲ್ಲಿ ಯಾರು ಬಡವರಲ್ಲ, ಯಾರು ಶ್ರೀಮಂತರಲ್ಲ. ಎಲ್ಲರೂ ತಮ್ಮ ಮನಸ್ಸನ್ನು ಶ್ರೀಮಂತವಾಗಿರಿಸಿಕೊಂಡಿರಬೇಕು ಎಂದರು.
ಮಕ್ಕಳಿಗೆ ಪುರಸ್ಕಾರ: ಕಾರ್ಯಕ್ರಮದಲ್ಲಿ 300ಕ್ಕೂ ಹೆಚ್ಚು ಮಕ್ಕಳಿಗೆ ಪ್ರತಿಭಾ ಪುರಸ್ಕಾರ ಮಾಡಲಾಯಿತು. ದೊಡ್ಡಬಳ್ಳಾಪುರ 4ನೇ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ ನ್ಯಾಯಾಧೀಶ ಸಿ.ಚಂದ್ರಶೇಖರ್, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಬಿ.ಪಿ.ದೇವಮಾನೆ, ಶಾಸಕ ರಾಯಗೌಡ ವಿ.ಪಾಟೀಲ್, ಬೆಂಗಳೂರು ಅ.ಭಾ.ವಿ.ಮ ಕಾರ್ಯದರ್ಶಿ ಎಚ್.ಎಂ.ರೇಣುಕಾ ಪ್ರಸನ್ನ, ಮೈಸೂರು ಬ್ರಾಹ್ಮಣ ಸಭಾ ಅಧ್ಯಕ್ಷ ಡಿ.ಟಿ.ಪ್ರಕಾಶ್, ವೇದಿಕೆ ಅಧ್ಯಕ್ಷ ವರುಣಾ ಮಹೇಶ್,
ಪ್ರಧಾನ ಕಾರ್ಯದರ್ಶಿ ಡಾ.ಕೆ.ವಸಂತಕುಮಾರ್, ಉಪಾಧ್ಯಕ್ಷ ಎಚ್.ಎಸ್.ವೀರೇಶ್, ಎಸ್.ಬಿ.ಸುರೇಶ್, ಸಂಚಾಲಕರಾದ ಬಿ.ಎಂ.ಷಡಕ್ಷರಿ, ಎಂ.ಎಸ್.ರುದ್ರಸ್ವಾಮಿ, ಎಸ್.ಎಸ್.ಸಿದ್ದೇಶ್, ಎಸ್.ಲೋಕೇಶ್, ಮಹದೇವಸ್ವಾಮಿ, ದೇವನೂರು ಲೋಕೇಶ್, ಶಿವಮಲ್ಲು, ಎಸ್.ರಾಜೇಶ್, ರುಪಿಟ್ರೀ ಮಂಜುನಾಥ್, ಕೆ.ಮಹೇಶ್ ಇನ್ನಿತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.