Advertisement

ಬೆಂಗಳೂರು ಮೂಲಸೌಕರ್ಯಕ್ಕೆ ಅಡ್ಡಿಪಡಿಸಿಲ್ಲ: ಸವಾಲು ಹಾಕಿದ ಹೆಚ್ ಡಿಕೆ

04:34 PM Sep 19, 2022 | Team Udayavani |

ಬೆಂಗಳೂರು: ರಾಜಧಾನಿ ಬೆಂಗಳೂರು ಮಹಾನಗರದ ಮೂಲ ಸೌಕರ್ಯಗಳಿಗೆ ನಾನು ಮುಖ್ಯಮಂತ್ರಿ ಆಗಿದ್ದಾಗ ಅಡ್ಡಿಪಡಿಸಿದ್ದೇನೆ ಎಂಬ ಬಗ್ಗೆ ಒಂದು ಪ್ರಕರಣವನ್ನು ತೋರಿಸಿದರೆ ರಾಜಕೀಯ ನಿವೃತ್ತಿ ತೆಗೆದುಕೊಳ್ಳುತ್ತೇನೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಸವಾಲು ಹಾಕಿದ್ದಾರೆ.

Advertisement

ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇದ್ದಕ್ಕಿದ್ದ ಹಾಗೆ ಒತ್ತುವರಿ ತೆರವಿನ ಡ್ರಾಮಾ ನಡೆಯುತ್ತಿದೆ. ನಾನು ಈಗಾಗಲೇ ಕಲಾಪದಲ್ಲಿ ಹೇಳಿದ್ದೇನೆ. ಯುದ್ಧ ಕಾಲದಲ್ಲಿ ಶಸ್ತ್ರಾಸ್ತ್ರ ಅಭ್ಯಾಸ ಮಾಡುವ ಬದಲಾಗಿ, ನಾಲ್ಕೈದು ಕಡೆದ ತೆರವು ಮಾಡಿ ಸುಮ್ಮನಾಗುವುದಲ್ಲ. ಕಳೆದ 25 ವರ್ಷಗಳಿಂದ ಆದ ಅನಾಹುತಗಳು ಸೇರಿ ಕಳೆದ ಕಳೆದ ಐದು ವರ್ಷಗಳಿಂದ ನಗರದಲ್ಲಿ ಆಗಿರುವ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಕಂಡುಕೊಳ್ಳಬೇಕು ಎಂದು ಅವರು ಸರಕಾರವನ್ನು ಒತ್ತಾಯಿಸಿದರು.

ಜೆಡಿಎಸ್ ಕಾಲದಲ್ಲಿ ಆಗಿರುವ ನಿರ್ಧಾರಗಳಿಂದ ಲೋಪ ಆಗಿದೆ ಎಂದು ಕೆಲವರು ಆರೋಪ ಮಾಡಿದ್ದಾರೆ. ನಾನು ಅಧಿಕಾರದಲ್ಲಿ ಇದ್ದಾಗ ಏನಾದರೂ ಲೋಪ ಆಗಿದ್ದರೆ, ಆರೋಪ ಮಾಡಿರುವ ಕಾಂಗ್ರೆಸ್ ಮತ್ತು ಬಿಜೆಪಿ ಸಾಬೀತು ಮಾಡಿದರೆ ರಾಜಕೀಯ ನಿವೃತ್ತಿ ಘೋಷಣೆ ಮಾಡ್ತೀನಿ. ನಾನು ಬೆಂಗಳೂರು ಮೂಲಭೂತ ಸೌಕರ್ಯಗಳ ಅಭಿವೃದ್ಧಿಗೆ ಪ್ರಾಮಾಣಿಕ ಪ್ರಯತ್ನ ಮಾಡಿದ್ದೇನೆ ಎಂದು ಮಾಜಿ ಮುಖ್ಯಮಂತ್ರಿಗಳು ತೀಕ್ಷ್ಣವಾಗಿ ಹೇಳಿದರು.

ಹಗರಣದ ಬಗ್ಗೆ ನಾಳೆ ಮಾತನಾಡುತ್ತೇನೆ
ಹರಗಣವೊಂದನ್ನು ಬಯಲಿಗೆ ತರುವ ಬಗ್ಗೆ ಸದನದಲ್ಲಿ ಮಾತನಾಡಲು ಅವಕಾಶ ಕೊಡಬೇಕು ಈಗಾಗಲೇ ಸಭಾದ್ಯಕ್ಷರಿಗೆ ಮನವಿ ಮಾಡಿದ್ದೇನೆ. ಆದರೆ, ಸುಖಾಸುಮ್ಮನೆ ಮಾತನಾಡಿ ಸದನದಲ್ಲಿ ನ್ಯೂಸೆನ್ಸ್ ಮಾಡೋಕೆ ನನಗೆ ಇಷ್ಟವಿಲ್ಲ. ಇಂದು ಬೆಳಗ್ಗೆ ಕೂಡ ಸಭಾದ್ಯಕ್ಷರಿಗೆ ದೂರವಾಣಿ ಕರೆ ಮಾಡಿ ಮತ್ತೊಮ್ಮೆ ಮನವಿ ಮಾಡಿದ್ದೇನೆ. ಬೇರೆ ಬೇರೆ ವಿಚಾರಗಳ ಚರ್ಚೆಗೆ ಅವಕಾಶ ನೀಡಲಾಗಿದ್ದ ಕಾರಣದಿಂದ ತಡವಾಗಿ ಅವಕಾಶ ನೀಡುವುದಾಗಿ ತಿಳಿಸಿದ್ದಾರೆ. ಬಹುಶಃ ನಾಳೆ (ಮಂಗಳವಾರ) ಅವಕಾಶ ಸಿಗಬಹುದು ಎಂದರು.

ಸದನದಲ್ಲಿ ನಾನು ಪ್ರಸ್ತಾಪ ಮಾಡಲಿರುವ ವಿಷಯ ಅತ್ಯಂತ ಗಂಭೀರ ವಿಚಾರ. ಪೂರ್ಣವಾಗಿ ದಾಖಲೆಗಳನ್ನು ಇಟ್ಟುಕೊಂಡೇ ಮಾತನಾಡುತ್ತೇನೆ. ಗಾಳಿಯಲ್ಲಿ ಗುಂಡು ಹಾರಿಸೋನು, ಕುಮಾರಸ್ವಾಮಿ ಹಿಟ್ ಆಂಡ್ ರನ್ ಮಾಡ್ತಾರೆ ಎಂದು ಹೇಳುವವರಿಗೆ ಉತ್ತರ ಕೊಡುತ್ತೇನೆ. ಸಾರ್ವಜನಿಕ ಹಿತಾಸಕ್ತಿ ಹೊಂದಿರುವ ಸಾವಿರಾರು ಕೋಟಿ ವ್ಯವಹಾರಕ್ಕೆ ಸಂಬಂಧಪಟ್ಟ ವಿಷಯ ಅದು. ಈ ಒಂದು ವಿಷಯದಲ್ಲಿ ಸರ್ಕಾರ ಆಘಾತಕಾರಿ ತೀರ್ಮಾನ ತೆಗೆದುಕೊಂಡಿದೆ ಎಂದು ಅವರು ಪ್ರಶ್ನೆಯೊಂದಕ್ಕೆ ಉತ್ತರ ನೀಡಿದರು.

Advertisement

ಎಸ್.ಟಿ.ಸೋಮಶೇಖರ್ ರಾಜೀನಾಮೆ ನೀಡಲಿ
ಸಹಕಾರ ಸಚಿವ ಎಸ್.ಟಿ.ಸೋಮಶೇಖರ್ ಅವರು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡುವುದು ಒಳಿತು ಎಂದು ಕುಮಾರಸ್ವಾಮಿ ಅವರು ಇದೇ ವೇಳೆ ಹೇಳಿದರು.ಬಿಡಿಎ ವಸತಿ ಯೋಜನೆಯಿಂದಕ್ಕೆ ಸಂಬಂಧಿಸಿ ಲಂಚದ ಆರೋಪದ ಹಿನ್ನೆಲೆಯಲ್ಲಿ ಲೋಕಾಯುಕ್ತ ಪೊಲೀಸರು ಸಚಿವರ ವಿರುದ್ಧ ಆರೋಪ ಪಟ್ಟಿ (ಎಫ್ ಐ ಅರ್ ) ದಾಖಲು ಮಾಡಿದ್ದಾರೆ. ಅಲ್ಲದೆ, ಇದರ ತನಿಖೆಗೆ ಹೈಕೋರ್ಟ್ ಸೂಚನೆ ಕೊಟ್ಟಿದೆ ಎಂದರು.

ನೈತಿಕ ಹೊಣೆ ಹೊತ್ತು ಅವರು ಸಚಿವ ಸ್ಥಾನಕ್ಕೆ ರಾಜೀನಾಮೆ ಕೊಡಬೇಕು.ಎಫ್ ಐಆರ್ ಮೇಲೆ ತನಿಖೆ ಪ್ರಾರಂಭ ಮಾಡುವುದಾದರೇ, ಸೋಮಶೇಖರ್ ಅವರು ಹಾಲಿ ಮಂತ್ರಿ. ಅವರು ಬಿಡಿಎ ಅಧ್ಯಕ್ಷರಾಗಿದ್ದಾಗ ತೆಗೆದುಕೊಂಡಿರುವ ನಿರ್ಧಾರದ ವಿರುದ್ಧ ಈಗ ಎಫ್ ಐ ಅರ್ ದಾಖಲಾಗಿದೆ. ಸಚಿವರು ಪ್ರಭಾವೀ ಸ್ಥಾನದಲ್ಲಿ ಇರುವುದರಿಂದ ಸತ್ಯಾಸತ್ಯತೆಗಳನ್ನು ಮರೆ ಮಾಚುವುದಕ್ಕೆ ಅವಕಾಶಗಳು ಇರುತ್ತವೆ. ಈ ಹಿನ್ನೆಲೆಯಲ್ಲಿ ಸಚಿವರು ರಾಜೀನಾಮೆ ನೀಡುವುದು ಸೂಕ್ತ ಎನ್ನುವುದು ನನ್ನ ಅಭಿಪ್ರಾಯ ಎಂದರು.

ಇಡಿ ನೋಟಿಸ್ ಗೆ ಉತ್ತರ ಕೊಡುವ ಶಕ್ತಿ ಡಿಕೆಶಿಗೆ ಇದೆ
ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ವಿರುದ್ಧ ಇಡಿ ತನಿಖೆ ವಿಚಾರದ ಬಗ್ಗೆ ಮಾಧ್ಯಮಗಳು ಕೇಳಿದ ಪ್ರಶ್ನೆಗೆ ಉತ್ತರ ನೀಡಿ, ಡಿಕೆ ಶಿವಕುಮಾರ್ ಅವರು ತಾವೊಬ್ಬ ರಾಜಕಾರಣಿ, ರೈತ, ಬ್ಯುಸಿನೆಸ್‌ಮನ್, ನನ್ನದೇ ಆದಂತಹ ವೃತಿಗಳಿವೆ. ನಾನು ಭ್ರಷ್ಟಾಚಾರ ಮಾಡಿಲ್ಲ ಎಂದು ಸ್ವತಃ ಹೇಳಿಕೊಂಡಿದ್ದಾರೆ. ಅವರು ಭ್ರಷ್ಟಾಚಾರ ಮಾಡದೆ ಇದ್ದಲ್ಲಿ ಇಡಿ ನೋಟಿಸ್ ಕೊಟ್ಟಿದ್ದರೂ ಅದಕ್ಕೆ ಅವರು ಉತ್ತರ ಕೊಡುವ ಸಾಮರ್ಥ್ಯ ಹೊಂದಿದ್ದಾರೆ. ಅದರಿಂದ ಹೊರಗೆ ಬರುವ ವಿಶ್ವಾಸ ಅವರಿಗೆ ಇದ್ದಾಗ ನಾನು ಅದರ ಬಗ್ಗೆ ಟೀಕೆ ಮಾಡಲು ಹೋಗುವುದಿಲ್ಲ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next