ಕಲಬುರಗಿ: ಕೆ ಆರ್ ಡಿ ಎಲ್ ಕಾಮಗಾರಿಗಳ ತನಿಖೆ ಮುಗಿಯುವರೆಗೂ ಸದನಕ್ಕೆ ಹೋಗೋದಿಲ್ಲ ಎಂದು ಎರಡನೇ ಬಾರಿಗೆ ಸಿಎಂಗೆ ಪತ್ರ ಬರೆದಿರುವ ಆಳಂದ ಕ್ಷೇತ್ರದ ಶಾಸಕ ಬಿ.ಆರ್.ಪಾಟೀಲ್ ತಿಳಿಸಿದ್ದಾರೆ.
ಪತ್ರ ಬರೆದು ಬೆಂಗಳೂರಿನಿಂದ ಬೆಳಿಗ್ಗೆ ನಗರಕ್ಕಾಗಮಿಸಿದ ಅವರು ಸುದ್ದಿಗಾರರೊಂದಿಗೆ ಮಾತನಾಡಿ, ಸ್ವಾಭಿಮಾನಕ್ಕೆ ಧಕ್ಕೆಯಾಗಿದ್ದರಿಂದ ಸಿಎಂಗೆ ಪತ್ರ ಬರೆದಿರುವುದಾಗಿ ತಿಳಿಸಿದರು.
ಕೆ ಆರ್ ಡಿ ಎಲ್ ಕಾಮಗಾರಿಗಳ ವಿಳಂಬ ಹಾಗೂ ಅರ್ಧಂಬರ್ದ ಕಾಮಗಾರಿಗಳ ಕುರಿತಾಗಿ ಕಳೆದ ಅಧಿವೇಶನದಲ್ಲಿ ಪ್ರಶ್ನೆ ಕೇಳಿ ಸದನ ಗಮನ ಸೆಳೆಯಲಾಗಿತ್ತು. ಆದರೆ ಕಂದಾಯ ಸಚಿವ ಕೃಷ್ಣ ಬೈರೇಗೌಡ ಅವರು ಉತ್ತರ ಕೊಡವಾಗ ತಮ್ಮ ಮೇಲೆಯೇ ಆರೋಪ ಹೊರಿಸಿದ ರೀತಿಯಲ್ಲಿ ಮಾತನಾಡಿದ್ದರು. ತಾವು ಹಣ ಪಡೆದು ಕೆಲಸ ಕೊಟ್ಟಿದ್ದೀನಿ ಎಂಬುದಾಗಿ ಆರೋಪ ಮಾಡಿದ್ದರು. ಆಗ ಪ್ರತಿಭಟನೆ ಸಹ ಮಾಡಿದ್ದೇ, ಆದರೆ ಯಾರೊಬ್ಬರು ತಮ್ಮ ಬೆಂಬಲಕ್ಕೆ ಬರಲಿಲ್ಲ. ಶಾಸಕಾಂಗ ಸಭೆಯಲ್ಲಿ ಇಂಡಿ ಕ್ಷೇತ್ರದ ಶಾಸಕ ಯಶ್ವಂತರಾಯ ಪಾಟೀಲ್ ಮಾತ್ರ ತಮ್ಮ ಬೆಂಬಲಕ್ಕೆ ನಿಂತರು. ಆದರೆ ಜಿಲ್ಲೆಯ ಶಾಸಕರು ಬೆಂಬಲ ನಿಲ್ಲಲ್ಲ. ಪಂಚ ರಾಜ್ಯಗಳ ಚುನಾವಣೆ ಹಿನ್ನೆಲೆಯಲ್ಲಿ ಈ ವಿಷಯ ಪ್ರಸ್ತಾಪಿಸಿರಲಿಲ್ಲ ಎಂದು ವಿವರಣೆ ನೀಡಿದರು.
ಸಚಿವ ಕೃಷ್ಣ ಬೈರೇಗೌಡ ತಮ್ಮ ಬಗ್ಗೆ ಮಾಡಿರೋ ಆರೋಪ ಬಗ್ಗೆ ತನಿಖೆಯಾಗಬೇಕು. ತಾವು ಸ್ವಾಭಿಮಾನದಿಂದ ಬದುಕಿದವನು. ತನಿಖೆಯಾಗಿ ಸತ್ಯಾಂಶ ಹೊರ ಬರದಿದ್ದರೆ ತಾವು ಸತ್ತಂತೆ. ಹೀಗಾಗಿ ಅಧಿಕಾರಿಗಳಿಂದ ಮಾಹಿತಿ ಪಡೆದು ಉನ್ನತ ಮಟ್ಟದ ತನಿಖೆಯಾಗಬೇಕು. ತನಿಖೆ ಮುಗಿದು ತಾವು ಸದನಕ್ಕೆ ಹೋಗೋದಿಲ್ಲ ಎಂದು ಬಿ.ಆರ್.ಪಾಟೀಲ್ ಗುಡುಗಿದರು.
ತಾವು ಇಷ್ಟು ದಿನ ಎಲ್ಲಾ ರೀತಿಯ ಅವಮಾನಗಳನ್ನು ಸಹಿಸಿಕೊಂಡಿದ್ದೇನೆ. ಆದರೆ ಯಾವುದಕ್ಕೂ ಹಿಂಜರಿರುವುದಿಲ್ಲ. ಇವತ್ತೇ ಸಿಎಂ ಸಿದ್ದರಾಮಯ್ಯ ಅವರು ಸಂಧಾನ ಸಭೆ ಕರೆದಿದ್ದಾರೆ. ಆಳಂದದಲ್ಲಿ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಂಡು ಬೆಂಗಳೂರಿಗೆ ತೆರಳುವುದಾಗಿ ಶಾಸಕ ಬಿ. ಆರ್. ಪಾಟೀಲ್ ತಿಳಿಸಿದರು.