Advertisement

ಮಾವು ಬೆಳೆಗೆ ವಿಮಾ ರಕ್ಷಣೆ ನೀಡದ ಸಂರಕ್ಷಣೆ

05:22 PM Nov 16, 2018 | |

ಧಾರವಾಡ: ದೇವರು ವರ ಕೊಟ್ಟರು ಪೂಜಾರಿ ಕೊಡಲಿಲ್ಲ ಎನ್ನುವ ಮಾತು ಅಕ್ಷರಶಃ ಧಾರವಾಡ ಜಿಲ್ಲಾಡಳಿತಕ್ಕೆ, ಅದರಲ್ಲೂ ಕೃಷಿ, ತೋಟಗಾರಿಕೆ ಮತ್ತು ಕಂದಾಯ ಇಲಾಖೆಗೆ ಅನ್ವಯವಾಗುತ್ತಿದೆ.

Advertisement

ರೈತರು ಅತಿವೃಷ್ಟಿ, ಅನಾವೃಷ್ಟಿಯಿಂದ ತೊಂದರೆಗೆ ಒಳಗಾದಾಗ ಬೆಳೆವಿಮೆ ಅವರನ್ನು ಬದುಕಿಸಲು ಸಹಾಯಕ್ಕೆ ಬರುತ್ತದೆ. ಈ ಉದ್ದೇಶದಿಂದ ಸರ್ಕಾರವೇ ಈ ಕೆಲಸ ಮಾಡಿದೆ. ಆದರೆ ಹೊಸ ತಾಲೂಕು ರಚನೆ ವೇಳೆ ಅಧಿಕಾರಿಗಳು ಮಾಡಿದ ಪ್ರಮಾದದಿಂದ ಧಾರವಾಡ ಜಿಲ್ಲೆಯ 10ಕ್ಕೂ ಹೆಚ್ಚು ಗ್ರಾಪಂ ರೈತರು ಸರ್ಕಾರ ಒದಗಿಸುವ ಬೆಳೆ ವಿಮೆ ಸೌಲಭ್ಯದಿಂದ ವಂಚಿತರಾಗುವ ಲಕ್ಷಣಗಳು ಗೋಚರಿಸುತ್ತಿವೆ. ಅಧಿಕಾರಿಗಳು ಮಾಡಿದ ಪ್ರಮಾದದಿಂದ ರೈತರು ಮಾವು ಬೆಳೆ ವಿಮೆ ಕಂತು ತುಂಬಲು ಕಳೆದ ಮೂರು ದಿನಗಳ ಕಾಲ ಪಟ್ಟ ಪಾಡು ದೇವರಿಗೆ ಪ್ರೀತಿ ಎನ್ನಬಹುದು.

ಹಿಂಗಾರಿ ಬೆಳೆಗಳಾದ ಕಡಲೆ, ಕುಸುಬಿ, ಜೋಳ ಮತ್ತು ಮಾವಿನ ಬೆಳೆಗೆ ವಿಮೆ ಇರಿಸಲು ಸರ್ಕಾರ ನ.1ರಂದೇ ಅಧಿಸೂಚನೆ ಹೊರಡಿಸಿದೆ. ಈ ಪೈಕಿ ಮಾವು ಬೆಳೆಗೆ ವಿಮೆ ಇರಿಸಲು ನ.15 ಕೊನೆಯ ದಿನ. ತಿಂಗಳಾರಂಭದಲ್ಲಿ ರೈತರು ತಮ್ಮ ಮಾವಿನ ತೋಟದ ದಾಖಲೆಗಳನ್ನು ಹಿಡಿದು ಬ್ಯಾಂಕ್‌ಗಳಿಗೆ ಹೋದರೆ ಮಾವಿನ ಬೆಳೆ ವಿಮೆ ಇರಿಸಿಕೊಳ್ಳುವ ಕುರಿತು ನಮಗೆ ಇನ್ನೂ ಯಾವ ಆದೇಶವೂ ಬಂದಿಲ್ಲ ಎಂದು ರೈತರನ್ನು ಮರಳಿ ಕಳುಹಿಸಲಾಗಿದೆ. ಅದಾದ ಮೇಲೆ ಎರಡನೇ ವಾರದ ತುಂಬಾ ದೀಪಾವಳಿ ಹಬ್ಬ ಆಚರಣೆಗಾಗಿ ಸತತ ರಜೆ ಬಂದವು. ಇದೀಗ ನ.12ರಿಂದ 15ರವರೆಗೆ ಸರ್ವರ್‌ ಸ್ಲೋ ಎನ್ನುವ ಕಾರಣ ಹೇಳಿ ಬಡ ರೈತರನ್ನು ಬ್ಯಾಂಕ್‌ ಅಧಿಕಾರಿಗಳು ಓಡಾಡಿಸಿದ್ದಾರೆ.

ಎಲ್ಲರ ಸಹಿ ಯಾಕೆ ಬೇಕು?: ಇನ್ನು ಗುರುವಾರವೇ ಕೊನೆಯ ದಿನವಾಗಿದ್ದರಿಂದ ಎಲ್ಲ ರೈತರು ಮುಗಿಬಿದ್ದು ಹಣ ಕಟ್ಟಲು ಪರದಾಡಿದರು. ಆದರೆ ಕೆಲವು ಬ್ಯಾಂಕ್‌ ಅಧಿಕಾರಿಗಳು ಮಾತ್ರ ರೈತರೊಂದಿಗೆ ಸೌಜನ್ಯ ಮೀರಿ ನಡೆದುಕೊಂಡಿದ್ದಾರೆ. ಆಸ್ಪತ್ರೆಯಲ್ಲಿ ದಾಖಲಾಗಿದ್ದರೂ ಪರವಾಗಿಲ್ಲ ಅವರು ಖುದ್ದು ಬಂದು ಸಹಿ ಮಾಡಿದರೆ ಮಾತ್ರ ವಿಮೆ ಪಡೆಯುತ್ತೇವೆ ಎಂದು ರೈತರಿಗೆ ಹೇಳಿ ಕಳುಹಿಸಿದ್ದಾರೆ. ಇನ್ನು ನಾಲ್ಕು ಜನರ ಜಂಟಿ ಪಹಣಿ ಪತ್ರಗಳಿದ್ದರಂತೂ ಆ ನಾಲ್ಕು ಜನರು ಖುದ್ದಾಗಿ ಬಂದು ಸಹಿ ಮಾಡುವಂತೆ ಪಟ್ಟು ಹಿಡಿದಿದ್ದರಿಂದ ಎಷ್ಟೋ ಜನ ರೈತರು ಮಾವು ವಿಮೆ ತುಂಬದೇ ಹಿಂದಿರುಗಿದ್ದಾರೆ.

ದಲ್ಲಾಳಿಗಳ ಹಾವಳಿ?: ಮಾವು ವಿಮೆ ತುಂಬುವುದಕ್ಕೆ ಸರ್ಕಾರ ಉಚಿತವಾಗಿ ಫಾರ್ಮ್ಗಳನ್ನು ಕೊಟ್ಟರು ಕಳ್ಳಸಂತೆಯಲ್ಲಿ 10 ರೂ.ಗಳಿಗೆ ಒಂದು ಝೆರಾಕ್ಸ್‌ ಪ್ರತಿ ಮಾರಾಟವಾಗುತ್ತಿವೆ. ಅನಕ್ಷರಸ್ಥ ರೈತರಿಂದ ಫಾರ್ಮ್ ತುಂಬಿಕೊಡಲು 100 ರೂ. ಝೆರಾಕ್ಸ್‌ ಕೇಂದ್ರಗಳಲ್ಲಿನ ದಲ್ಲಾಳಿಗಳು ಪಡೆದುಕೊಳ್ಳುತ್ತಿದ್ದಾರೆ. ಬ್ಯಾಂಕ್‌ ಮತ್ತು ಝೆರಾಕ್ಸ್‌ ಕೇಂದ್ರಗಳ ಮಧ್ಯೆ ಸಂಪರ್ಕವಿದ್ದು, ಬ್ಯಾಂಕ್‌ಗಳಲ್ಲಿ ನೇರವಾಗಿ ತುಂಬಿಕೊಳ್ಳುವ ಬದಲು ಝೆರಾಕ್ಸ್‌ ಸೆಂಟರ್‌ಗಳಿಗೆ ರೈತರನ್ನು ಅಲೆದಾಡಿಸುತ್ತಿದ್ದಾರೆ. ಅಲ್ಲಿ ರೈತರಿಂದ ಆನ್‌ ಲೈನ್‌ ಫಾರ್ಮ್ ತುಂಬಿಸಿಕೊಂಡು ಬಂದ ನಂತರ ಬ್ಯಾಂಕ್‌ಗಳಲ್ಲಿ ಹಣ ಕಟ್ಟಿಸಿಕೊಳ್ಳಲಾಗುತ್ತಿದೆ. ಬ್ಯಾಂಕ್‌ ಅಧಿಕಾರಿಗಳು ತಾವು ಮಾಡಬೇಕಾದ ಕೆಲಸಕ್ಕಾಗಿ ನಮ್ಮನ್ನ ನಗರದ ಯಾವುದೋ ಮೂಲೆಯಲ್ಲಿರುವ ಅವರೇ ಹೇಳಿದ ಝರಾಕ್ಸ್‌ ಮತ್ತು ಆನ್‌ಲೈನ್‌ ಕೇಂದ್ರಗಳಿಗೆ ಕಳುಹಿಸುತ್ತಿದ್ದು ಅಧಿಕಾರಿಗಳು ಕಮಿಷನ್‌ಗಾಗಿ ಹೀಗೆ ಮಾಡುತ್ತಿದ್ದಾರೆ ಎಂದು ರೈತರು ಆರೋಪಿಸಿದ್ದಾರೆ.

Advertisement

ಮತ್ತದೇ ತಪ್ಪು ಮರುಕಳಿಸಿತು: ಜುಲೈ ತಿಂಗಳಿನಲ್ಲಿ ಕೂಡ ಮುಂಗಾರು ಬೆಳೆಗಳ ಮೇಲೆ ರೈತರು ವಿಮೆ ಇರಿಸುವಾಗಲೂ ಜಿಲ್ಲೆಯ ಹೊಸ ತಾಲೂಕಿನ 20 ಹಳ್ಳಿಗಳದ್ದೂ ಇದೇ ಸಮಸ್ಯೆ ಎದುರಾಗಿತ್ತು. ಇದೀಗ ನಾಲ್ಕು ತಿಂಗಳಾದರೂ ಅದೇ ತಪ್ಪನ್ನು ಅಧಿಕಾರಿಗಳು ಮತ್ತೆ ಮಾಡುತ್ತಿದ್ದಾರೆ ಎಂದರೆ, ಜಿಲ್ಲೆಯಲ್ಲಿನ ಆಡಳಿತ ಹೇಗಿದೆ ಎನ್ನುವುದನ್ನು ಇದರ ಮೇಲೆ ಗಮನಿಸಬಹುದು. ಒಂದು ವೆಬ್‌ಸೈಟ್‌ನಲ್ಲಿನ ಸಣ್ಣ ಕೆಲಸವನ್ನು ಮಾಡಲು ನಾಲ್ಕು ತಿಂಗಳಾದರೂ ಆಗಿಲ್ಲ ಅಂದರೆ ಹೇಗೆ ಎನ್ನುವ ಪ್ರಶ್ನೆಯನ್ನು ಅನೇಕ ರೈತ ಮುಖಂಡರು ಜಿಲ್ಲಾಡಳಿತಕ್ಕೆ ಹಾಕಿದ್ದಾರೆ.

ರಾತ್ರಿ ಆರಂಭಗೊಂಡ ಸರ್ವರ್‌: ಮಾವು ವಿಮೆ ಇರಿಸಲು ಬಂದವರಿಗೆ ಸಾಕಷ್ಟು ತೊಂದರೆ ಮಧ್ಯೆಯೂ ಕೊನೆಗೆ ಜಿಲ್ಲಾಧಿಕಾರಿಗಳ ಆದೇಶದ ಮೇರೆಗೆ ಬ್ಯಾಂಕ್‌ ಗಳು ವಿಮಾ ಹಣವನ್ನು ಪಡೆದುಕೊಂಡವು. ಕೊನೆಗೆ ರಾತ್ರಿ ಹೊತ್ತಿಗೆ ಈ ಎಲ್ಲಾ ಹಳ್ಳಿಗಳು ಮತ್ತೆ ಅಳ್ನಾವರ ಹೋಬಳಿ ವ್ಯಾಪ್ತಿಯಲ್ಲೇ ಇರುವಂತೆ ಸಂರಕ್ಷಣ ವೆಬ್‌ ತೆರೆದುಕೊಂಡಿತು. ಅರ್ಜಿ ಉಳಿಕೆ ಯಶಸ್ವಿಯಾಗಿದೆ ಎನ್ನುವ ಸಂದೇಶಗಳು ಕೆಲವು ರೈತರ ಮೊಬೈಲ್‌ಗ‌ಳಿಗೆ ಬಂದಿವೆ. ಆದರೆ ಅರ್ಜಿ ಉಳಿಕೆ ನಂತರ ಪರತ್‌ ರಶೀದಿ ಯಾವ ರೈತರಿಗೂ ಸಿಕ್ಕಿಲ್ಲ.

ಒಂದೇ ಸರ್ವೇ ನಂಬರ್‌ಗೆ ಇಬ್ಬರು ರೈತರ ವಿಮೆ ಕಂತು!
ಧಾರವಾಡ ಹೋಬಳಿಯಲ್ಲಿನ ಪಹಣಿ ಪತ್ರಗಳಲ್ಲಿ ನಮೂದಾಗಿರುವ ಹೊಲಗಳ ಸರ್ವೇ ನಂಬರ್‌ಗಳಿಗೂ, ನೂತನ ಧಾರವಾಡ ಹೋಬಳಿ ವ್ಯಾಪ್ತಿಯಲ್ಲಿನ ಹೊಲದ ಸರ್ವೇ ನಂಬರ್‌ಗಳು ಒಂದೇ ಎಂದೂ ನಮೂದಾದರೆ ಮತ್ತೆ ರೈತರು ಹಣ ಕಟ್ಟಿ ಸಂಕಷ್ಟಕ್ಕೆ ಒಳಗಾಗಬೇಕು. ಯಾಕೆಂದರೆ ನ.14ರಂದು ಅಳ್ನಾವರ ಹೋಬಳಿಯಲ್ಲಿ 36 ಸರ್ವೇ ನಂ.ಗೆ ಎ ಅನ್ನುವವರು ವಿಮೆ ತುಂಬಿದ್ದಾರೆ. ಇದು ಹೊಸ ಹೋಬಳಿಯಾಧಾರಿತವಾಗಿ ಬಂದ ಸರ್ವೇ ನಂಬರ್‌ ಆಗಿರುತ್ತದೆ. ಆದರೆ ನ.15ರಂದು ಮತ್ತೆ ಹಳೆಯ ಅಳ್ನಾವರ ಹೋಬಳಿ ಸರ್ವೇ ನಂ.ಗಳ ಆಧಾರದ ಮೇಲೆ 36 ಸರ್ವೇ ನಂ.ಗೆ ಬಿ ಎನ್ನುವವನ ಹೆಸರು ಇರುತ್ತದೆ. ಹಾಗಿದ್ದರೆ ವಿಮೆ ಕಂತು ಇಬ್ಬರು ತುಂಬಿದ್ದಾರೆ. ನಾಳೆ ಬೆಳೆ ವಿಮೆ ಯಾರಿಗೆ ಬರುತ್ತದೆ ಎನ್ನುವ ಪ್ರಶ್ನೆಗೆ ಉತ್ತರ ಸಿಗಬೇಕಿದೆ. ಇದನ್ನು ಕಂದಾಯ ಇಲಾಖೆ ಅಧಿಕಾರಿಗಳು ಹೇಗೆ ಪರಿಹರಿಸುತ್ತಾರೋ ದೇವರಿಗೆ ಗೊತ್ತು.

ಅಲ್ಲಿ  ಆರು ಜನ ಮಕ್ಕಳು ಒಂದೆ ದಿನ ಒಂದೇ ಸಮಯಕ್ಕ ಸಗ್ತಾರಾ ? ಕೆಲಸದ ಮ್ಯಾಲೆ ಬ್ಯಾರೇ ಊರಿಗೆ ಹೋಗಿರ್ತಾರ. ಮಾವು ವಿಮೆಗೆ ಇಂತಹ ಹೊಸ ಕಾನೂನು ಬಂದಿದ್ದನ್ನು ಬ್ಯಾಂಕ್‌ ಅಧಿಕಾರಿಗಳು ಯಾಕೆ ನಮಗೆ ಮೊದಲೇ ಇಳಿಸಲಿಲ್ಲ. ರೈತರಂದ್ರೆ ಇವರಿಗೆ ಇಷ್ಟು ಕೇವಲಾನಾ ? 
. ಈರಪ್ಪ ಕುಂದಗೋಳ, ರೈತ 

ವರ್ಷಕ್ಕೊಂದೊಂದು ಕಾನೂನು ಮಾಡತಾರು. ಮಾವು ವಿಮೆ ಇಡುವುದಕ್ಕೆ ಜಂಟಿ ಪಹಣಿ ಪತ್ರ ಇರುವ ಎಲ್ಲರದ್ದು ಸಹಿ ಖುದ್ದು ಹಾಜರಾಗಿ ಇಡುವಂತೆ ಹೇಳುತ್ತಿದ್ದಾರೆ. ಇದು ಯಾವ ನ್ಯಾಯ. ನನ್ನ ಅಣ್ಣ ಆಸ್ಪತ್ರೆಯಲ್ಲಿದ್ದಾನೆ. ಅವನ ಸಹಿ ಮಾಡಿಸಿಕೊಂಡು ಬರುವುದು ಹೇಗೆ ? ಇಂದೇ ಕೊನೆ ದಿನ. ಇದನ್ನ ಯಾರೂ ಕೇಳುವವರಿಲ್ಲವೇ ?
. ಖಾದರಸಾಬ್‌ ಮುಲ್ಲಾ, ಮುರುಕಟ್ಟಿ ನಿವಾಸಿ

ಸಂರಕ್ಷಣ ವೆಬ್‌ಸೈಟ್‌ನಲ್ಲಿ ಕೆಲವು ಹಳ್ಳಿಗಳ ಹೊಲಗಳ ಸರ್ವೇ ನಂ.ಗಳು ನಮೂದಾಗದೇ ಹೋಗಿದ್ದರಿಂದ ಆನ್‌ ಲೈನ್‌ ವಿಮೆಕಂತು ತುಂಬುವ ಪೇಜ್‌ಗಳು ತೆರೆದುಕೊಂಡಿಲ್ಲ. ಆದರೆ ಸಂಜೆ ಹೊತ್ತಿಗೆ ನಾವು ಸರಿ ಮಾಡಿದ್ದೇವೆ.
. ಮೊಹಮ್ಮದ್‌ ಜುಬೇರ್‌, ಉಪ ವಿಭಾಗಾಧಿಕಾರಿ,ಧಾರವಾಡ 

ಬಸವರಾಜ ಹೊಂಗಲ್‌

Advertisement

Udayavani is now on Telegram. Click here to join our channel and stay updated with the latest news.

Next