Advertisement

ನೆರೆ ಪರಿಹಾರಕ್ಕೆ ದಿಲ್ಲಿಯಿಂದ ಚಿಕ್ಕಾಸು ಸಿಕ್ಕಿಲ್ಲ

11:03 PM Aug 19, 2019 | mahesh |

ಪುತ್ತೂರು : ರಾಜ್ಯದಲ್ಲಿ ಭೀಕರ ಪ್ರವಾಹದಿಂದ 50 ಸಾವಿರ ಕೋಟಿ ರೂ.ಗಳಿಗಿಂತಲೂ ಅಧಿಕ ನಷ್ಟ ಸಂಭವಿಸಿದೆ. ಆದರೆ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಎರಡು ಬಾರಿ ದಿಲ್ಲಿಗೆ ಹೋಗಿ ಭಿಕ್ಷೆ ಬೇಡಿದರೂ ಚಿಕ್ಕಾಸೂ ಹಣ ತಂದಿಲ್ಲ ಎಂದು ಮಾಜಿ ಸಚಿವ, ಶಾಸಕ ಯು.ಟಿ. ಖಾದರ್‌ ವ್ಯಂಗ್ಯವಾಡಿದ್ದಾರೆ.

Advertisement

ಪುತ್ತೂರು ಬ್ಲಾಕ್‌ ಕಾಂಗ್ರೆಸ್‌ ಕಚೇರಿಯಲ್ಲಿ ಸೋಮವಾರ ಸಂಜೆ ನಡೆದ ಸಭೆಯಲ್ಲಿ ಅವರು ಮಾತನಾಡಿದರು. ನೆರೆ ಅಧ್ಯಯನಕ್ಕೆ ಸಂಬಂಧಿಸಿ ಕೆಪಿಸಿಸಿ ನೇಮಕ ಮಾಡಿದ ತಂಡದ ಜತೆ ಆಗಿಮಿಸಿರುವ ಖಾದರ್‌, ಯಡಿಯೂರಪ್ಪ ಅವರಿಂದ ಏನನ್ನೂ ನಿರೀಕ್ಷಿಸಲು ಸಾಧ್ಯವಿಲ್ಲ ಎಂದರು.

ಮುಖ್ಯಮಂತ್ರಿಗಳು ತುರ್ತು ಪರಿಹಾರವಾಗಿ ಕೇವಲ 10 ಸಾವಿರ ರೂ. ಘೋಷಿಸಿದ್ದಾರೆ. ಅದರಲ್ಲೂ ಪೂರ್ತಿ ಹಣ ಇನ್ನೂ ಸಿಕ್ಕಿಲ್ಲ. ತುರ್ತು ಪರಿಹಾರ 24 ಗಂಟೆಯೊಳಗೆ ಸಿಗಬೇಕಿತ್ತು. ಕೊಡಗು ಜಿಲ್ಲೆಯಲ್ಲಿ ನಮ್ಮ ಸರಕಾರ ಕೊಟ್ಟ ಪ್ಯಾಕೇಜ್‌ ದೇಶದಲ್ಲೇ ಮಾದರಿಯಾಗಿತ್ತು. ಪ್ರತೀ ವಿಧಾನಸಭಾ ಕ್ಷೇತ್ರಕ್ಕೆ ಆರು ಕೋಟಿ ರೂ.ಗಳನ್ನು ರಸ್ತೆ ದುರಸ್ತಿಗೆಂದೇ ನೀಡಿದ್ದೆವು ಎಂದು ಹೇಳಿದರು.

ಮಾಜಿ ಸಚಿವ ಬಿ. ರಮಾನಾಥ ರೈ ಮಾತನಾಡಿ, ನಮ್ಮ ತಂಡ ಉಡುಪಿ, ದಕ್ಷಿಣ ಕನ್ನಡ ಜಿಲ್ಲಾ ವ್ಯಾಪ್ತಿಯಲ್ಲಿ ನೆರೆ ದುರಂತ ಅಧ್ಯಯನ ಮಾಡಿ ಕೆಪಿಸಿಸಿಗೆ ವರದಿ ಸಲ್ಲಿಸುತ್ತದೆ. ಅದರ ಆಧಾರದಲ್ಲಿ ಕಾಂಗ್ರೆಸ್‌ ವತಿಯಿಂದಲೂ ಸಂತ್ರಸ್ತರಿಗೆ ಪರಿಹಾರ ನೀಡುವ ಉದ್ದೇಶವಿದೆ ಎಂದರು.

ಗರಿಷ್ಠ ಸಹಾಯ ಮಾಡೋಣ
ಮಾಜಿ ಸಚಿವ ವಿನಯ ಕುಮಾರ್‌ ಸೊರಕೆ ಮಾತನಾಡಿ, ಪ್ರಕೃತಿ ವಿಕೋಪದ ಸಂತ್ರಸ್ತರಿಗೆ ಕಾಂಗ್ರೆಸ್‌ ಮುಖಂಡರು ಮತ್ತು ಕಾರ್ಯಕರ್ತರು ಗರಿಷ್ಠ ಸಹಾಯವನ್ನು ಪಕ್ಷಭೇದ ಮರೆತು ಮಾಡಬೇಕು. ಈ ಕೆಲಸ ಮುಗಿದ ಮೇಲೆ ಪಕ್ಷ ಸಂಘಟನೆಗೆ ಆದ್ಯತೆ ನೀಡಬೇಕು ಎಂದರು.

Advertisement

ಪರಿಹಾರ ಕೇಳಲು ಧೈರ್ಯವಿಲ್ಲ
ವಿಧಾನ ಪರಿಷತ್‌ ಸದಸ್ಯ ಐವನ್‌ ಡಿ’ಸೋಜಾ ಮಾತನಾಡಿ, ಮೋದಿ ಮುಂದೆ ಹೋಗಿ ಪರಿಹಾರ ಹಣ ಕೊಡಿ ಎಂದು ಕೇಳುವ ಧೈರ್ಯ ಯಡಿಯೂರಪ್ಪ ಅವರಿಗಿಲ್ಲ. ಕಾಂಗ್ರೆಸ್‌ ಸರಕಾರದ ಜನಪ್ರಿಯ ಕಾರ್ಯಕ್ರಮವಾದ ಅನ್ನಭಾಗ್ಯಕ್ಕೆ ಬಿಜೆಪಿ ಸರಕಾರ ಕತ್ತರಿ ಹಾಕಿದರೆ ಉಗ್ರ ಹೋರಾಟ ಮಾಡಲಾಗುವುದು ಎಂದರು.

ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ ಹಾಗೂ ವಿಧಾನ ಪರಿಷತ್‌ ಸದಸ್ಯ ಕೆ. ಹರೀಶ್‌ ಕುಮಾರ್‌, ಜಿಲ್ಲಾ ಯುವ ಕಾಂಗ್ರೆಸ್‌ ಅಧ್ಯಕ್ಷ ಮಿಥುನ್‌ ರೈ ಮಾತನಾಡಿದರು. ಮಾಜಿ ಶಾಸಕಿ ಶಕುಂತಳಾ ಟಿ. ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಪಕ್ಷದ ಮುಖಂಡ ಎಂ.ಎಸ್‌. ಮಹಮ್ಮದ್‌ ಉಪಸ್ಥಿತರಿದ್ದರು.

ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಮಹಮ್ಮದ್‌ ಬಡಗನ್ನೂರು ಸ್ವಾಗತಿಸಿದರು. ನೆರೆ ಸಂತ್ರಸ್ತರ ಪರಿಹಾರಕ್ಕೆಂದು ಪಕ್ಷದ ಕಚೇರಿಯಲ್ಲಿ ತೆರೆಯಲಾದ ‘ಸಹಾಯ ಹಸ್ತ’ ಕೇಂದ್ರವನ್ನು ಮುಖಂಡರು ಉದ್ಘಾಟಿಸಿದರು. ಸಭೆಗೆ ಮುನ್ನ ಪಕ್ಷದ ವತಿಯಿಂದ ರಕ್ಷಾ ಬಂಧನ ಆಚರಿಸಲಾಯಿತು.

ಪ್ರಧಾನಿ ಎಲ್ಲಿ?
ಈ ಹಿಂದೆ ಸಂಭವಿಸಿದ ಪ್ರವಾಹದ ವೇಳೆ ಅಂದಿನ ಪ್ರಧಾನಿ ಮನಮೋಹನ ಸಿಂಗ್‌ ರಾಜ್ಯಕ್ಕೆ ಬಂದು ವೈಮಾನಿಕ ಸಮೀಕ್ಷೆ ನಡೆಸಿದ್ದರಲ್ಲದೆ, ಕೂಡಲೇ 2,000 ಕೋಟಿ ರೂ. ಪರಿಹಾರ ಘೋಷಿಸಿದ್ದರು. ಆಗ ಯಡಿಯೂರಪ್ಪ ಅವರೇ ಮುಖ್ಯಮಂತ್ರಿಯಾಗಿದ್ದರು. ಈ ಬಾರಿ ಪ್ರಧಾನಿ ಮೋದಿ ಬರುವ ನಿರೀಕ್ಷೆಯಲ್ಲಿದ್ದೆವು. ಸಚಿವರಾದ ಅಮಿತ್‌ ಶಾ ಮತ್ತು ನಿರ್ಮಲಾ ಸೀತಾರಾಮನ್‌ ಬಂದು ಹೋದರೂ ಇನ್ನೂ ಚಿಕ್ಕಾಸು ಪರಿಹಾರ ಘೋಷಣೆ ಮಾಡಿಲ್ಲ. ಮುಖ್ಯಮಂತ್ರಿಗಳು ಕೇವಲ ಕಾಟಾಚಾರಕ್ಕೆ ರಾಜ್ಯ ಪ್ರವಾಸ ಮಾಡಿದ್ದಾರೆ ಎಂದು ರಮಾನಾಥ ರೈ ಆಪಾದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next