ಬೆಂಗಳೂರು: ರೈತ ಸಾಲ ಮನ್ನಾ ಮಾಡಲು ಕೇಂದ್ರ 50 % ನೆರವು ಕೇಳಿದ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರಿಗೆ ಬಿಜೆಪಿ ರಾಜ್ಯಾಧ್ಯಕ್ಷ ತಿರುಗೇಟು ನೀಡಿದ್ದು ಉತ್ತರ ಪ್ರದೇಶ ಮತ್ತು ಮಹಾರಾಷ್ಟ್ರದಲ್ಲಿ ಬಿಜೆಪಿ ಸರ್ಕಾರಗಳಿಗೆ ಸಾಲ ಮನ್ನಾ ಮಾಡಲು ಕೇಂದ್ರ ಸರ್ಕಾರ ಒಂದು ರೂಪಾಯಿಯನ್ನೂ ನೀಡಿರಲಿಲ್ಲ ಎಂದಿದ್ದಾರೆ.
ವಿಧಾನಸೌಧದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಬಿಎಸ್‌ವೈ ಕೇಂದ್ರ ಸರ್ಕಾರ ನೆರವು ನೀಡುವುದಿಲ್ಲ ಎಂದು ತಿಳಿದರೂ ಕುಮಾರಸ್ವಾಮಿ ಗೊಂದಲ ಮೂಡಿಸುತ್ತಿದ್ದಾರೆ. ಪ್ರಣಾಳಿಕೆಯಲ್ಲಿ ಹಲವು ಭರವಸೆಗಳನ್ನು ನೀಡಿದ್ದಾರೆ. ರಾಜ್ಯದ ಆರ್ಥಿಕ ಪರಿಸ್ಥಿತಿ ಅರಿತು ಯೋಜನೆಗಳನ್ನು ಘೋಷಣೆ ಮಾಡಬೇಕಿತ್ತು ಎಂದರು.
ಅಪ್ಪ ಮಕ್ಕಳು ಈಗ ನಮಗೆ ಕಡಿಮೆ ಸ್ಥಾನ ಇದೆ ಎಲ್ಲದಕ್ಕೂ ಕಾಂಗ್ರೆಸ್ ಪಕ್ಷವನ್ನು ಕೇಳಬೇಕು ಎಂದು ಹೇಳುವ ಮೂಲಕ ಸಾಲ ಮನ್ನಾಕ್ಕೆ ಹಿಂದೇಟು ಹಾಕುತ್ತಿದ್ದಾರೆ ಎಂದರು.
ಸರ್ಕಾರ ಗೊಂದಲದ ಗೂಡಾಗಿದ್ದು ಬಜೆಟ್ ಮಂಡನೆ ವಿಚಾರದಲ್ಲಿ ಗೊಂದಲವಿದ್ದು ಸಿದ್ದರಾಮಯ್ಯ ಬಜೆಟ್ ಬೇಡ ಅಂದರೆ ಡಿಸಿಎಂ ಬಜೆಟ್ ಮಂಡಿಸಬೇಕು ಅಂದಿದ್ದಾರೆ ಎಂದು ಲೇವಡಿ ಮಾಡಿದರು.
ಬಜೆಟ್‌ಗೂ ಮುನ್ನ ಕಾಂಗ್ರೆಸ್ ಮತ್ತು ಜೆಡಿಎಸ್ ಪ್ರಣಾಳಿಕೆಯನ್ನು ಮುಖ್ಯಮಂತ್ರಿಗಳು ಓದಬೇಕು . ನಾವು ಬಜೆಟ್ ವರೆಗೆ ತಾಳ್ಮೆಯಿಂದ ಕಾಯುತ್ತೇವೆ. ಪ್ರತಿಪಕ್ಷದ ಕೆಲಸ ಮಾಡಿಕೊಂಡಿರುತ್ತೇವೆ. ಕೊಟ್ಟ ಭರವಸೆಗಳನ್ನು ಈಡೇರಿಸದಿದ್ದರೆ ಮುಂದೆ ಹೋರಾಟಕ್ಕಿಳಿಯುತ್ತೇವೆ ಎಂದು ಎಚ್ಚರಿಕೆ ನೀಡಿದ್ದಾರೆ.