ದೇವನಹಳ್ಳಿ: ರಾಜ್ಯ ಸರ್ಕಾರವು ಸರ್ಕಾರ ಶಾಲೆಗಳಲ್ಲಿ ಒಂದರಿಂದ ಹತ್ತನೇ ತರಗತಿವರೆಗಿನ ಶಾಲಾ ಮಕ್ಕಳಿಗೆ ಪೌಷ್ಟಿಕ ಆಹಾರವಾಗಿ ವಾರದಲ್ಲಿ ಎರಡು ದಿನ ಮೊಟ್ಟೆ ವಿತರಣೆ ಮಾಡುತ್ತಿದೆ. ಕೋಳಿ ಮೊಟ್ಟ ದರ ಏರಿಕೆಯಾಗುತ್ತಿರುವುದರಿಂದ ಮೊಟ್ಟೆಗೆ ಬಿಡುಗಡೆ ಮಾಡುತ್ತಿರುವ ಅನುದಾನವನ್ನು ಹೆಚ್ಚಿಸಬೇಕು ಎಂದು ಶಾಲಾ ಅಭಿವೃದ್ಧಿ ಸಮಿತಿ ಅಧ್ಯಕ್ಷರು, ಸದಸ್ಯರು ಹಾಗೂ ಶಿಕ್ಷಕರ ಒತ್ತಾಯವಾಗಿದೆ.
ಶಾಲೆಯಲ್ಲಿ ಮೊಟ್ಟೆ ತಿನ್ನದ ಮಕ್ಕಳಿಗೆ ಬಾಳೆಹಣ್ಣು ವಿತರಣೆ ಮಾಡಲಾಗುತ್ತಿದೆ. ಪಚ್ಚ ಬಾಳೆಹಣ್ಣು ಕೆ.ಜಿ. ಲೆಕ್ಕದಲ್ಲಿ ಖರೀದಿಸಲಾಗುತ್ತದೆ. ಒಂದು ಕೆ.ಜಿ. ಹಣ್ಣಿನ ಬೆಳೆ 40 ರೂ. ಆಗುತ್ತದೆ. ಇದರಿಂದ ಒಂದು ಹಣ್ಣಿಗೆ ಒಂದು ರೂಪಾಯಿ 20 ಪೈಸೆ ಹೆಚ್ಚು ಆಗುತ್ತದೆ. ಆದರೆ ಇದಕ್ಕೆ ಸಕಾಲದಲ್ಲಿ ಅನುದಾನ ಬರುವುದಿಲ್ಲ. ನಮ್ಮ ಸಂಬಳದ ಹಣದಲ್ಲಿ ನಗದುಕೊಟ್ಟು ಮೊಟ್ಟೆ, ಬಾಳೆಹಣ್ಣು ಖರೀದಿ ಮಾಡಿಕೊಂಡು ಬರಲಾಗುತ್ತಿದೆ. ಸರ್ಕಾರದಿಂದ ಬಿಡುಗಡೆ ಆದಾಗ ಶಾಲಾ ಅಭಿವೃದ್ಧಿ ಸಮಿತಿ ಸದಸ್ಯರ ಅನುಮತಿ ಪಡೆದುಕೊಂಡು ಹಣ ಬಿಡಿಸಿಕೊಳ್ಳಬೇಕು. ಒಂದು ವಾರ ಇದ್ದ ಮೊಟ್ಟೆಯ ಬೆಲೆ ಮತ್ತೂಂದು ವಾರ ಇರುವುದಿಲ್ಲ. ಏರುಪೇರು ಆಗುತ್ತದೆ. ಈ ವೆಚ್ಚ ಗಳನ್ನು ಹೇಗೆ ಭರಿಸಬೇಕು ಎಂದು ಶಿಕ್ಷಕರು ಅಳಲು ತೋಡಿಕೊಂಡಿದ್ದಾರೆ. ವಾರದಲ್ಲಿ ಎರಡು ದಿನ ಮೊಟ್ಟೆ ಹಾಗೂ ಬಾಳೆಹಣ್ಣು ಮತ್ತು ಶೇಂಗಾ ಚುಕ್ಕಿ ವಿತರಿಸುವ ಯೋಜನೆಯನ್ನು ಸರ್ಕಾರ ಜಾರಿಗೆ ತಂದಿದೆ.
ಈಗ ಮೊಟ್ಟೆಯ ಬೆಲೆ ಹೆಚ್ಚು ಆಗುತ್ತಿದೆ. ಸರ್ಕಾರ ಕೊಡುತ್ತಿರುವ ಹಣ ಸಾಕಾಗುತ್ತಿಲ್ಲ ಎಂದು ಶಾಲಾಭಿವೃದ್ಧಿ ಸಮಿತಿ ಸದಸ್ಯರು ಅಸಹಾಯಕತೆ ತೋಡಿಕೊಳ್ಳುತ್ತಾರೆ. ಸರ್ಕಾರ ಒಂದು ಮೊಟ್ಟೆಗೆ ಆರು ರೂ. ಬಿಡುಗಡೆ ಮಾಡಿದರೆ ಶಾಲೆಗೆ 5.70 ರೂ. ನೀಡಲಾಗುತ್ತದೆ. ಅದರಲ್ಲಿ ಮೊಟ್ಟೆ ಬಿಡಿಸುವುದಕ್ಕೆ ಉಳಿದ 5.20 ರೂಪಾಯಿ ಮೊಟ್ಟೆಗೆ, 20 ಪೈಸೆ ಸಾಗಣೆ ವೆಚ್ಚವಾಗಿ ಕೊಡುತ್ತಿದೆ. 30 ಪೈಸೆ ಇಂಧನ ಕಾಯಿ ಕಟಾವು ಮಾಡಿಕೊಳ್ಳಲಾಗುತ್ತಿದೆ. ಒಂದು ಮೊಟ್ಟೆ ಬೆಲೆ 6.20 ಆಗಿದೆ. ಪ್ರತಿ ಮಂಗಳವಾರ ಮತ್ತು ಶುಕ್ರವಾರ ನಗದು ನೀಡಿ ಖರೀದಿ ಮಾಡಿಕೊಳ್ಳಬೇಕು. ಮೊಟ್ಟೆ ಖರೀದಿಗೆ ಚೆಕ್ ಕೊಡುತ್ತೇವೆ ಎಂದರೆ ಅಂಗಡಿಯವರು ಒಪ್ಪು ವುದಿಲ್ಲ. ಮೊದಲು ಶಾಲೆಯ ಬಳಿಗೆ ತಂದು ಕೊಡಿ ಎಂದರೆ ಒಂದು ಮೊಟ್ಟೆಯ ಬೆಲೆ 6.50 ರೂ. ಆಗುತ್ತದೆ ಎಂದು ಹೇಳುತ್ತಾರೆ.
ಖರೀದಿ ಮಾಡಿಕೊಂಡು ಬರುವಾಗ ಕೆಲವು ಮೊಟ್ಟೆಗಳು ಒಡೆದು ಹೋದರೆ ಅಷ್ಟು ಮೊಟ್ಟೆಗಳನ್ನು ಪ್ರತ್ಯೇಕವಾಗಿ ಖರೀದಿ ಸಿ ಬೇಕು. ಹೀಗಾಗಿ ಶಾಲೆಗಳಲ್ಲಿ ವಿದ್ಯಾರ್ಥಿಗಳಿಗೆ ಸಕಾಲದಲ್ಲಿ, ಸಮರ್ಪಕವಾಗಿ ಮೊಟ್ಟ ವಿತರಿಸಲು ಅನುದಾನ ಹೆಚ್ಚಿಸಬೇಕು ಎಂಬುದು ಶಿಕ್ಷಕರು ಹಾಗೂ ಶಾಲಾ ಅಭಿವೃದ್ಧಿ ಸಮಿತಿ ಸದಸ್ಯರ ಆಗ್ರಹವಾಗಿದೆ.
ಸರ್ಕಾರಿ ಶಾಲಾ ವಿದ್ಯಾರ್ಥಿಗಳಿಗೆ ಮೊಟ್ಟೆ ಮತ್ತು ಇತರೆ ವೆಚ್ಚಗಳಿಗೆ ಸರ್ಕಾರ ಹೆಚ್ಚಿನ ಅನುದಾನ ನೀಡಬೇಕು. ನಾವು ನಮ್ಮ ಸಂಬಳದಲ್ಲಿ ಹೆಚ್ಚುವರಿ ಹಣ ಖರ್ಚು ಮಾಡಿ ಮೊಟ್ಟೆ ತರುವ ಪರಿಸ್ಥಿತಿ ನಿರ್ಮಾಣವಾಗಿದೆ.
-ಲಿಂಗಪ್ಪ ಕೆಂದೂರ್, ಮುಖ್ಯಶಿಕ್ಷಕ, ಸಾದಹಳ್ಳಿ ಪ್ರೌಢಶಾಲೆ
ಶಾಲೆಗಳಿಗೆ ಮೊಟ್ಟೆ ಖರೀದಿಸಲು ನಗದು ಬದಲು ಶಾಲೆ ಶಿಕ್ಷಕರು ಬ್ಯಾಂಕ್ ಚೆಕ್ ಕೊಡುತ್ತೇವೆ ಎನ್ನುತ್ತಾರೆ. ಆದರೆ, ಚೆಕ್‌ಗೆ ಹಣ ಬರುವುದು ತುಂಬಾ ವಿಳಂಬವಾಗಲಿದೆ. ಹೀಗಾಗಿ ನಮಗೆ ನಗದು ಕೊಟ್ಟು ಮೊಟ್ಟ ಖರೀದಿಸಿದರೆ ಅನುಕೂಲ ಆಗುತ್ತದೆ. ಜೊತೆ ಮೊಟ್ಟೆ ಬೆಲೆ ಕೂಡ ಏರಿಕೆಯಾಗುತ್ತಿದೆ.
-ಮಿಥುನ್, ಮೊಟ್ಟೆ ವ್ಯಾಪಾರಿ
-ಎಸ್.ಮಹೇಶ್