Advertisement

ಆಟಕ್ಕೆ ಸಿಗುತ್ತಿಲ್ಲ ಸುಬ್ರಹ್ಮಣ್ಯದ ಕುಮಾರಧಾರಾ ಮೈದಾನ

10:16 PM Oct 30, 2019 | mahesh |

ಸುಬ್ರಹ್ಮಣ್ಯ: ಇಚ್ಛಾಶಕ್ತಿಯ ಕೊರತೆ ಯಿಂದ ಸುಬ್ರಹ್ಮಣ್ಯದ ಕುಮಾರಧಾರಾ ಆಟದ ಮೈದಾನ ಹಾಳುಕೊಂಪೆಯಾಗಿ ಮಾರ್ಪಟ್ಟಿದೆ. ಆಟದ ಮೈದಾನವೀಗ ದಾಸ್ತಾನು ಸಂಗ್ರಹ ಕೇಂದ್ರವಾಗಿ ಪರಿವರ್ತನೆಗೊಂಡಿದೆ. ಮೈದಾನ ಬಳಕೆಗೆ ಸಾಧ್ಯವಾಗದೆ ಕ್ರೀಡಾಳುಗಳಿಗೆ ತೊಡಕಾಗಿ ಪರಿಣಮಿಸಿದೆ.

Advertisement

ಕುಮಾರಧಾರಾದಲ್ಲಿ ವಿಶಾಲವಾದ ಆಟದ ಮೈದಾನವಿದೆ. ಪಕ್ಕದಲ್ಲೆ ಪದವಿಪೂರ್ವ ಕಾಲೇಜು ಇದೆ. ಪ್ರತಿ ವರ್ಷ ಈ ಮೈದಾನದಲ್ಲಿ 50ಕ್ಕೂ ಅಧಿಕ ಕ್ರೀಡಾಕೂಟಗಳು ನಡೆಯುತ್ತವೆ. ಜಿಲ್ಲೆ, ತಾಲೂಕು ಮಟ್ಟದ ಹಲವು ಕ್ರೀಡಾಕೂಟಗಳು ಇಲ್ಲಿ ನಡೆಯುತ್ತವೆ. ಇದೇ ಕ್ರೀಡಾಂಗಣದಲ್ಲಿ ಅಭ್ಯಾಸ ನಡೆಸಿದ ಹಲವು ಮಂದಿ ಕ್ರೀಡಾಪಟುಗಳು ರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡಿದ್ದಾರೆ. ಈ ಕ್ರೀಡಾಂಗಣದಲ್ಲಿ ತರಬೇತಿ ಪಡೆದವರು ರಾಷ್ಟ್ರ, ರಾಜ್ಯ, ಜಿಲ್ಲಾಮಟ್ಟದ ತೀರ್ಪುಗಾರರಾಗಿ ಹೊರಹೊಮ್ಮಿದ್ದಾರೆ. ಮೈದಾನ ನೂರಾರು ಕ್ರೀಡಾಪಟುಗಳಿಗೆ ವೇದಿಕೆ ಕಲ್ಪಿಸಿದೆ. ಈ ಮೈದಾನವೀಗ ಅವಸಾನದ ಅಂಚಿಗೆ ತಲುಪಿದೆ. ನಿರ್ವಹಣೆ ಕೊರತೆಯಿಂದ ಮೈದಾನ ತನ್ನ ಮೂಲ ಸ್ವರೂಪವನ್ನೇ ಕಳೆದುಕೊಂಡಿದೆ.

ನಗರದ ಏಕೈಕ ಮೈದಾನ
ಸುಬ್ರಹ್ಮಣ್ಯ ನಗರದಲ್ಲಿ ವಿಶಾಲವಾಗಿ ಇರುವ ಏಕೈಕ ಆಟದ ಮೈದಾನವಿದು. ಕ್ಷೇತ್ರದ ಧಾರ್ಮಿಕ ಸಂಸ್ಥೆಯೊಂದು ನಗರದಲ್ಲಿ ಮೈದಾನ ಕೊರತೆ ಕಂಡುಬಂದಿದ್ದರಿಂದ ತಮ್ಮ ಜಾಗವನ್ನು ಬಳಕೆಗೆ ನೀಡಿತ್ತು. ಇಲ್ಲಿನ ಪದವಿಪೂರ್ವ ಕಾಲೇಜು ಮೈದಾನದ ನಿರ್ವಹಣೆ ನೋಡಿಕೊಳ್ಳುತ್ತಿದೆ. ಕೆಲ ವರ್ಷದ ಹಿಂದೆ ಮಣ್ಣು ಹಾಕಿ ಸ್ವಲ್ಪ ದುರಸ್ತಿಪಡಿಸಲಾಗಿತ್ತು. ಕುಕ್ಕೆ ಕ್ಷೇತ್ರಕ್ಕೆ ಗಣ್ಯರು ಆಗಮಿಸಿದ ಸಂದರ್ಭವೆಲ್ಲ ಇದೇ ಮೈದಾನದ ಹೆಲಿಪ್ಯಾಡ್‌ನ‌ಲ್ಲಿ ಇಳಿದು ದೇಗುಲಕ್ಕೆ ತೆರಳುತ್ತಿದ್ದರು.

ದಿಗ್ಗಜರು ಕಾಲಿರಿಸಿದ ತಾಣ
ಆಟದ ಮೈದಾನ ತುಂಬಾ ಹಳೆಯದು. ಇತ್ತೀಚಿನ 45 ವರ್ಷಗಳಲ್ಲಿ ಮೈದಾನವನ್ನು ಹೆಚ್ಚು ಬಳಸಿಕೊಳ್ಳಲಾಗಿದೆ. ಮಾಜಿ ಮುಖ್ಯಮಂತ್ರಿ ಗುಂಡೂರಾವ್‌ ಸಹಿತ ರಾಜಕೀಯ ಮುತ್ಸದ್ದಿಗಳು, ಬಾಲಿವುಡ್‌, ಹಾಲಿವುಡ್‌ ಚಲನಚಿತ್ರ ತಾರೆಯರು, ಕ್ರಿಕೆಟ್‌ ದಿಗ್ಗಜರು, ಉದ್ಯಮಿ ಗಳೆಲ್ಲರೂ ಹೆಲಿಕಾಪ್ಟರ್‌ ಮೂಲಕ ಬಂದಿಳಿ ಯುತ್ತಿದ್ದುದು ಇದೇ ಮೈದಾನದಲ್ಲಿ.ಕಾಲವೇ ಕೂಡಿ ಬರುತ್ತಿಲ್ಲ

7 ಎಕ್ರೆಗೂ ಹೆಚ್ಚು ಪ್ರದೇಶದಲ್ಲಿನ ಕ್ರೀಡಾಂಗಣದ ಅಭಿವೃದ್ಧಿಗೆ ಕಾಲ ಕೂಡಿಬರುವಂತೆ ತೋರುತ್ತಿಲ್ಲ. ವರ್ಷ ಕಳೆದಂತೆ ಕ್ರೀಡಾಂಗಣ ಅವಸಾನದ ಕಡೆ ಮುಖ ಮಾಡುತ್ತಿದೆ. ಮೈದಾನ ಸರಿಯಾದ ನಿರ್ವಹಣೆಯಿಲ್ಲದೆ ಸೊರಗಿದೆ. ಸ್ಥಳೀಯ ಕಾಲೇಜು ಮೇಲುಸ್ತುವಾರಿಯಲ್ಲಿ ಇರುವ ಮೈದಾನವನ್ನು ಸಾರ್ವಜನಿಕರ ಕ್ರೀಡಾ ಚಟುವಟಿಕೆಯ ಬಳಕೆಗೆ ನೀಡಲಾಗುತ್ತದೆ. ನಿಗದಿತ ಶುಲ್ಕ ಪಡೆಯಲಾಗುತ್ತದೆ. ಮೈದಾನ ವರ್ಷ ಕಳೆದಂತೆ ಕಳೆಗುಂದುತ್ತಿದೆ. ಇದು ಕ್ರೀಡಾಳುಗಳ ಬೇಸರಕ್ಕೆ ಕಾರಣವಾಗಿದೆ. ಹೊರಾಂಗಣ ಕ್ರೀಡೆಗೆ ಬಳಕೆಯಾಗುವ ಕ್ರೀಡಾಂಗಣ ನವೀಕರಣ ವಿಳಂಬವಾಗುತ್ತಿದೆ.

Advertisement

ನಿರ್ವಹಣೆ ಇಲ್ಲದೆ ಸೊರಗಿದೆ
ನಿರ್ವಹಣೆಯಿಲ್ಲದೆ ಓಟ, ಕಬಡ್ಡಿ, ವಾಲಿಬಾಲ್‌ ಇತರ ಕ್ರೀಡೆಗಳಲ್ಲಿ ಅನಿವಾರ್ಯವಾಗಿ ಭಾಗವಹಿಸಲು ಇಲ್ಲಿಗೆ ನಾನಾ ಕಡೆಯಿಂದ ಆಗಮಿಸುವ ಕ್ರೀಡಾಪಟುಗಳು ಬೇಸರದಿಂದಲೇ ಕಣಕ್ಕಿಳಿಯುವಂತಾಗಿದೆ. ಇಲ್ಲಿ ಸ್ಪರ್ಧೆಗಿಳಿಯುವ ಮುನ್ನವೇ ನಿರುತ್ಸಾಹಗೊಳ್ಳುತ್ತಿದ್ದಾರೆ. ಸುತ್ತಲಿರುವ ಕಾಂಪೌಂಡ್‌ ಹಾಳಾಗಿದೆ. ಸಂಜೆ ಅಂಗಳದಲ್ಲಿ ಕ್ರೀಡಾಳುಗಳು ತೆರಳದೆ ಇರುವುದರಿಂದ ಕತ್ತಲಾಗುತ್ತಿದ್ದಂತೆ ಕ್ರೀಡಾಂಗಣ ಕುಡುಕರ ತಾಣವಾಗಿ ಪರಿವರ್ತನೆಗೊಳ್ಳುತ್ತಿದೆ. ಕುಡಿದು ಬಿಸಾಡಿದ ಬಾಟಲ್‌, ಗಾಜು, ನೀರಿನ ಪ್ಯಾಕೆಟ್‌ಗಳು ಸಾಮಾನ್ಯವಾಗಿದೆ. ಮೈದಾನದ ಪಕ್ಕದಲ್ಲೆ ಕೆಲವು ಕುಟುಂಬಗಳು ವಾಸಿಸುತ್ತಿವೆ. ಸಂಚಾರ ಸಹಿತ ನಾನಾ ತೊಂದರೆಗಳನ್ನು ಅವರು ಎದುರಿಸುತ್ತಿದ್ದಾರೆ. ಕ್ರೀಡಾಂಗಣ ಅಭಿವೃದ್ಧಿಗೆ ಒತ್ತು ನೀಡಬೇಕಾದ ಆವಶ್ಯಕತೆಯಿದೆ.

ಗದ್ದೆಯಂತಾಗಿದೆ…
ನಗರದಲ್ಲಿ ಸಮಗ್ರ ಅಭಿವೃದ್ಧಿಯ ಮಾಸ್ಟರ್‌ ಪ್ಲಾನ್‌ ಯೋಜನೆಯ ಕಾಮಗಾರಿಗಳು ಜಾರಿಯಲ್ಲಿವೆ. ಅವುಗಳಿಗೆ ಬಳಸುವ ಸಾಮಗ್ರಿಗಳನ್ನು ಇದೇ ಮೈದಾನದ ಬದಿಯಲ್ಲಿ ದಾಸ್ತಾನಿರಿಸಲಾಗಿದೆ. ಟನ್‌ಗಟ್ಟಲೆ ಕಬ್ಬಿಣ, ನೆಲಹಾಸಿನ ಸಾಮಗ್ರಿಗಳನ್ನು ಇಲ್ಲಿ ಪೇರಿಸಿಡಲಾಗಿದೆ. ಕಾರ್ಮಿಕರ ತಾತ್ಕಾಲಿಕ ವಿಶ್ರಾಂತಿ ಕಟ್ಟಡ ಕೂಡ ತೆರೆಯಲಾಗಿದೆ. ಘನ ಹಾಗೂ ಲಘು ವಾಹನಗಳು ಮೈದಾನದೊಳಗೆ ಓಡಾಡಿ ಮೈದಾನದ ಅಂದ ಕೆಟ್ಟುಹೋಗಿದೆ. ವಾಹನಗಳು ಸಂಚರಿಸಿ ಮಳೆಗೆ ಮೈದಾನ ಕೆಸರು ಗದ್ದೆಯಾಗಿ ಮಾರ್ಪಟ್ಟಿದೆ. ಬೆಳಗ್ಗೆ, ಸಂಜೆ ಎರಡು ಹೊತ್ತು ಇಲ್ಲಿ ಮಕ್ಕಳು, ಯುವಕರು, ವಿದ್ಯಾರ್ಥಿಗಳು ವಿವಿಧ ಕ್ರೀಡೆ ನಡೆಸುತ್ತಿದ್ದರು. ಮೈದಾನ ಕೆಟ್ಟಿರುವುದು ಇವರೆಲ್ಲರ ಕ್ರೀಡಾ ಸ್ಫೂರ್ತಿಗೆ ಅಡ್ಡಿಯಾಗಿದೆ.

ಸ್ಥಳ ಪರಿಶೀಲಿಸುವೆ
ಆಟದ ಮೈದಾನ ಹಾಳಾದ, ಅದರ ಸ್ವರೂಪ ಕುರಿತು ಈಗಷ್ಟೆ ತಮ್ಮಿಂದ ಮಾಹಿತಿ ಪಡೆದುಕೊಂಡೆ. ಸೋಮವಾರ ಆಡಳಿತಾಧಿಕಾರಿಗಳು ಕುಕ್ಕೆಗೆ ಆಗಮಿಸುತ್ತಿದ್ದಾರೆ. ಅಂದು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿ ಮುಂದೆ ಏನು ಕ್ರಮಗಳನ್ನು ಕೈಗೊಳ್ಳುತ್ತೇವೆ ಎನ್ನುವುದನ್ನು ಅನಂತರದಲ್ಲಿ ತಿಳಿಸಲಾಗುವುದು.
– ತಹಶೀಲ್ದಾರ್‌ ಅನಂತಶಂಕರ, ಸುಬ್ರಹ್ಮಣ್ಯ ದೇಗುಲದ ಸಿಇಒ

ಕ್ರೀಡಾಪಟುಗಳಿಗೆ ನಿರಾಶೆ
ಎಳವೆಯಿಂದಲೂ ಆಟದ ಮೈದಾನವನ್ನು ಬಲ್ಲೆ. ಬೆಳಗ್ಗೆ ಹಾಗೂ ಸಂಜೆ ಹೊತ್ತು ಹಲವು ಮಂದಿ ಕ್ರೀಡಾಳುಗಳು ಇಲ್ಲಿ ನಿತ್ಯ ಅಭ್ಯಾಸದಲ್ಲಿ ತೊಡಗಿರುತ್ತಿದ್ದರು. ಇತ್ತೀಚೆಗೆ ಮೈದಾನ ನಿರ್ವಹಣೆಯಿಲ್ಲದೆ ಇರುವುದರಿಂದ ಕ್ರೀಡಾಳುಗಳು ಇತ್ತ ಬರುವುದನ್ನೇ ನಿಲ್ಲಿಸಿದ್ದಾರೆ.
– ಚಂದ್ರಶೇಖರ ಎ., ಮೈದಾನ ಪಕ್ಕದ ನಿವಾಸಿ

Advertisement

Udayavani is now on Telegram. Click here to join our channel and stay updated with the latest news.

Next