ಹೊಸದಿಲ್ಲಿ : ರಾಷ್ಟ್ರಪತಿ ರಾಮ ನಾಥ್ ಕೋವಿಂದ್ ಅವರು 11 ಚಲನಚಿತ್ರ ರಾಷ್ಟ್ರಪ್ರಶಸ್ತಿಗಳನ್ನು ಮಾತ್ರವೇ ವಿತರಿಸುವರೆಂಬ ಕೊನೇ ಕ್ಷಣದ ಪ್ರಕಟನೆಯಿಂದ ಸಖೇದಾಶ್ಚರ್ಯಗೊಂಡಿರುವ 70ಕ್ಕೂ ಅಧಿಕ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ವಿಜೇತರು ಇಂದು ತಡ ಸಂಜೆ ನಡೆಯಲಿರುವ ಪ್ರಶಸ್ತಿ ವಿತರಣ ಸಮಾರಂಭದಲ್ಲಿ ಪಾಲ್ಗೊಳ್ಳದಿರಲು ನಿರ್ಧರಿಸಿರುವುದಾಗಿ ವರದಿಯಾಗಿದೆ.
ಪ್ರಶಸ್ತಿ ವಿಜೇತರ ಕೊನೇ ಕ್ಷಣದ ಪ್ರಶ್ನೆಗಳಿಗೆ ಅಚ್ಚರಿ ವ್ಯಕ್ತಪಡಿಸಿ ರಾಷ್ಟ್ರಪತಿ ಭವನ ಹೊರಡಿಸಿರುವ ಪ್ರಕಟನೆಯೊಂದರಲ್ಲಿ “ರಾಷ್ಟ್ರಪತಿಗಳು ಗರಿಷ್ಠ ಒಂದು ತಾಸಿನ ಸರ್ವಪ್ರಶಸ್ತಿ ಪ್ರದಾನದ ಶಿಷ್ಟಾಚಾರದ ಸಮಾರಂಭದಲ್ಲಿ ಭಾಗವಹಿಸುತ್ತಾರೆ’ ಎಂದು ಹೇಳಿದೆಯಲ್ಲದೆ ಈ ಮಾಹಿತಿಯನ್ನು ವಾರ್ತಾ ಮತ್ತು ಪ್ರಸಾರ ಸಚಿವಾಲಯಕ್ಕೆ ಈ ಮೊದಲೇ ತಿಳಿಸಲಾಗಿದೆ ಎಂದು ಹೇಳಿದೆ. ರಾಷ್ಟ್ರಪತಿಯವರ ಮಾಧ್ಯಮ ಕಾರ್ಯದರ್ಶಿ ಅಶೋಕ್ ಮಲಿಕ್ ಈ ವಿಷಯವನ್ನು ತಿಳಿಸಿದರು.
ವಿಜ್ಞಾನ ಭವನದಲ್ಲಿ ನಡೆಯುವ ಈ ಕಾರ್ಯಕ್ರಮವನ್ನು ಇಂದು ಸಂಜೆ, ಈ ವರ್ಷದಿಂದ ಆರಂಭಗೊಂಡು, ಎರಡು ಹಂತಗಳಲ್ಲಿ ನಡೆಸಲಾಗುವುದು ಎಂದು ಮಾಧ್ಯಮ ಮಾಹಿತಿ ಕೇಂದ್ರ ಹೇಳಿದೆ.
“ನಾವು ಈ ವಿಷಯವನ್ನು ನಿನ್ನೆಯೇ ಕೇಂದ್ರ ವಾರ್ತಾ ಸಚಿವೆ ಇರಾನಿ ಅವರೊಂದಿಗೆ ಚರ್ಚಿಸಿದ್ದೆವು; ಅದಕ್ಕೆ ಅವರು ನಮಗೆ ಯೋಗ್ಯವಾದ ಉತ್ತರವನ್ನು ಕೊಡಿಸುವ ಭರವಸೆ ನೀಡಿದ್ದರು; ಆದರೆ ಅಂಥದ್ದೇನೂ ನಡೆದಿಲ್ಲ’ ಎಂದು ಪ್ರಶಸ್ತಿ ವಿಜೇತರು ಹೇಳಿದ್ದಾರೆ.
ಮೊದಲ ಹಂತದ ಕಾರ್ಯಕ್ರಮದಲ್ಲಿ ಕೇಂದ್ರ ವಾರ್ತಾ ಮತ್ತು ಪ್ರಸಾರ ಖಾತೆ ಸಚಿವೆ ಸ್ಮ್ರತಿ ಇರಾನಿ ಮತ್ತು ಸಹಾಯಕ ಸಚಿವ ರಾಜ್ಯವರ್ಧನ ಸಿಂಗ್ ರಾಠೊಡ್ ಅವರು ಸಂಜೆ 4 ಗಂಟೆಗೆ ಪ್ರಶಸ್ತಿ ವಿತರಣೆ ಮಾಡುವರು. ಎರಡನೇ ಹಂತದ ಕಾರ್ಯಕ್ರಮವು ಸಂಜೆ 5.30ಕ್ಕೆ ನಡೆಯಲಿದ್ದು ಅದನ್ನು ರಾಷ್ಟ್ರಪತಿಗಳು ನಡೆಸಿಕೊಡುವರು.
ಸಾಂಪ್ರದಾಯಿಕವಾಗಿ ರಾಷ್ಟ್ರಪತಿಗಳೇ ಎಲ್ಲ ಪ್ರಶಸ್ತಿಗಳನ್ನು ವಿತರಿಸುವ ಕ್ರಮ ಈ ವರೆಗೆ ನಡೆದುಕೊಂಡು ಬಂದಿದೆ. ಆದರೆ ಈ ಬಾರಿ ಅದು ಬದಲಾಗಿದೆ. ಆದರೆ ಈ ಬದಲಾದ ಕ್ರಮಕ್ಕೆ ಪ್ರಶಸ್ತಿ ವಿಜೇತರ ವಿರೋಧ ವ್ಯಕ್ತವಾಗಿದ್ದು ತಾವು ಈ ಕಾರ್ಯಕ್ರಮದಿಂದ ದೂರ ಇರುವುದಾಗಿ ಅವರು ಹೇಳಿದ್ದಾರೆ.