ಬಾಗಲಕೋಟೆ: ಮುಳುಗಡೆ ನಗರಿ ಬಾಗಲಕೋಟೆಗೆ ಶಾಶ್ವತ ಕುಡಿಯುವ ನೀರಿಗಾಗಿ ರೂಪಿಸಿದ ಕೋಟ್ಯಂತರ ಮೊತ್ತದ ಹೆರಕಲ್ ಕುಡಿಯುವ ನೀರು ಪೂರೈಕೆ ಯೋಜನೆಯನ್ನೇ ಸ್ವತಃ ಬಾಗಲಕೋಟೆ ಪಟ್ಟಣ ಅಭಿವೃದ್ಧಿ ಪ್ರಾಧಿಕಾರ ಸಂಪೂರ್ಣ ಹಳ್ಳ ಹಿಡಿಸಿದೆ ಎಂಬ ಬಲವಾದ ಆಕ್ರೋಶ ಕೇಳಿ ಬರುತ್ತಿದೆ.
ಏನಿದು ಯೋಜನೆ?: ಮುಳುಗಡೆಯಿಂದ ಹಳೆಯ ನಗರ, ವಿದ್ಯಾಗಿರಿ ಹಾಗೂ ನವನಗರ ಎಂದು ಮೂರು ಭಾಗವಾಗಿರುವ ಬಾಗಲಕೋಟೆಗೆ ಶಾಶ್ವತ ಕುಡಿಯುವ ನೀರು ಪೂರೈಕೆಗಾಗಿ (ನವನಗರ ಯೂನಿಟ್-2 ಮತ್ತು 3ರನ್ನೂ ಗಮನದಲ್ಲಿಟ್ಟುಕೊಂಡು) ಬೀಳಗಿ ತಾಲೂಕು ಹೆರಕಲ್ ಬಳಿ (ಹೊಸದಾಗಿ ಬ್ಯಾರೇಜ್ ನಿರ್ಮಿಸಲಾಗಿದೆ) ಘಟಪ್ರಭಾ ನದಿಗೆ ಅಡ್ಡಲಾಗಿ ನಿರ್ಮಿಸಿರುವ ಹೆರಕಲ್ ಬ್ಯಾರೇಜ್‌ನಿಂದ ಕುಡಿಯುವ ನೀರು ಪೂರೈಸಲು 2012ರಲ್ಲಿ 72 ಕೋಟಿ ಮೊತ್ತದ ಯೋಜನೆಗೆ ಸರ್ಕಾರ ಮಂಜೂರಾತಿ ನೀಡಿತ್ತು. 2013ರಲ್ಲಿ ಅಂದಿನ ಸಿಎಂ ಜಗದೀಶ ಶೆಟ್ಟರ ಕೂಡ, ಈ ಯೋಜನೆಗೆ ಅಡಿಗಲ್ಲು ಹಾಕಿದ್ದರು.
72 ಕೋಟಿ ಮೊತ್ತದ ಈ ಯೋಜನೆಯಡಿ ಹೆರಕಲ್ದಿಂದ ಗದ್ದನಕೇರಿ ಕ್ರಾಸ್ ಬಳಿ ಇರುವ ಬಿಟಿಡಿಎ ಡಬ್ಲುಪಿ ಮತ್ತು ಜಲ ಶುದ್ಧೀಕರಣ ಘಟಕಕ್ಕೆ ನೀರು ತಂದು, ಅಲ್ಲಿಂದ ಬಾಗಲಕೋಟೆಗೆ ಶಾಶ್ವತವಾಗಿ ಕುಡಿಯುವ ನೀರು ಕೊಡುವುದು ಈ ಯೋಜನೆಯ ಉದ್ದೇಶವಾಗಿತ್ತು.
ಇಬ್ಬರು ಸಿಎಂರಿಂದ ಭೂಮಿಪೂಜೆ: 2012ರಲ್ಲಿ ಅನುಮೋದನೆಗೊಂಡು, 2013ರಲ್ಲಿ ಓರ್ವ ಸಿಎಂ ಭೂಮಿಪೂಜೆ ಮಾಡಿದ್ದರು. ಮುಂದೆ 2013ರ ಮೇ ತಿಂಗಳಲ್ಲಿ ವಿಧಾನಸಭೆ ಚುನಾವಣೆ ನಡೆದು, ರಾಜ್ಯದಲ್ಲಿ ಸರ್ಕಾರ ಬದಲಾಯಿತು. ಹೊಸ ಸರ್ಕಾರ ಬಂದ ಬಳಿಕ, ಸ್ಥಳೀಯ ಬಾಗಲಕೋಟೆ ಶಾಸಕರೂ ಆಗ ಬದಲಾಗಿದ್ದರು. ರಾಜಕೀಯ ಪ್ರತಿಷ್ಠೆಗಾಗಿ ಇದೇ ಯೋಜನೆಗೆ 2013ರ ಡಿಸೆಂಬರ್‌ನಲ್ಲಿ ಮತ್ತೂಮ್ಮೆ ಈ ಯೋಜನೆಗೆ ಅಂದಿನ ಸಿಎಂ ಸಿದ್ದರಾಮಯ್ಯ, ಅಡಿಗಲ್ಲು ಹಾಕಿದರು. ಯೋಜನೆಗೆ ಅಡಿಗಲ್ಲು ಹಾಕಲು ಎರಡೆರಡು ಬಾರಿ ಬೃಹತ್ ಕಾರ್ಯಕ್ರಮ ರೂಪಿಸಿ, ದುಂದುವೆಚ್ಚ ಮಾಡಲಾಗಿತ್ತು. ಅಡಿಗಲ್ಲು ಹಾಕಲು ರಾಜಕಾರಣಿಗಳು ತೋರಿದ ಆಸಕ್ತಿ, ಯೋಜನೆ ಪೂರ್ಣಗೊಳಿಸಿ, ಜನರಿಗೆ ಕುಡಿಯುವ ನೀರು ಒದಗಿಸಲು ತೋರಿಸಲಿಲ್ಲ.
•ಇದ್ದಲಗಿ, ಕಾರ್ಯ ನಿರ್ವಾಹಕ ಅಭಿಯಂತರ, ಬಿಟಿಡಿಎ
Advertisement
ಹೌದು, ಹಿನ್ನೀರಲ್ಲೇ ಮುಳುಗಿದ ಬಾಗಲಕೋಟೆಗೆ ಶಾಶ್ವತ ಕುಡಿಯುವ ನೀರಿನ ವ್ಯವಸ್ಥೆ ಈ ವರೆಗೂ ಇಲ್ಲ. ನವನಗರಕ್ಕೆ ಆನದಿನ್ನಿ ಬ್ಯಾರೇಜ್‌ನಿಂದ ನೀರು ಕೊಟ್ಟರೆ, ವಿದ್ಯಾಗಿರಿ ಮತ್ತು ಹಳೆಯ ಬಾಗಲಕೋಟೆಗೆ ಈ ವರೆಗೆ ಕೊಳವೆ ಬಾವಿಗಳಿಂದಲೇ ನೀರು ಕೊಡುವ ವ್ಯವಸ್ಥೆ ಇಲ್ಲಿದೆ.
Related Articles
Advertisement
ಅರ್ಧ ದಶಕ ಮುಗಿದರೂ ಪೂರ್ಣವಾಗಿಲ್ಲ: ಆಲಮಟ್ಟಿ ಜಲಾಶಯದ ಹಿನ್ನೀರ ಪ್ರದೇಶದ ಘಟಪ್ರಭಾ ನದಿಯ ಹೆರಕಲ್ ಬ್ಯಾರೇಜ್‌ನಿಂದ ಗದ್ದನಕೇರಿ ಕ್ರಾಸ್ ವರೆಗೆ ಒಟ್ಟು 17 ಕಿ.ಮೀ ಪೈಪ್‌ಲೈನ್ ಅಳವಡಿಸಿ, ಜಲ ಶುದ್ದೀಕರಣ ಘಟಕದಿಂದ ನೀರು ಕೊಡುವ ಈ ಯೋಜನೆಯ ಕಾಮಗಾರಿಯನ್ನು ಉಡುಪಿ-ವಿಜಯಪುರದ ಡಾ|ಜಿ. ಶಂಕರ ಕಂಪನಿ ಗುತ್ತಿಗೆ ಪಡೆದಿತ್ತು. ಈ ಕಂಪನಿಯವರು ನಿಗದಿತ ಅವಧಿಯಲ್ಲಿ ಅಂದರೆ ಕೇವಲ 18 ತಿಂಗಳಲ್ಲಿ ಕಾಮಗಾರಿ ಪೂರ್ಣಗೊಳಿಸಿದ್ದರು. ಆದರೆ, ಮೂಲ ಯೋಜನೆಯ ನೀಲನಕ್ಷೆಯಂತೆ, ಅನಗವಾಡಿ ಸೇತುವೆ ಮೇಲೆ ಪೈಪ್‌ಲೈನ್ ಹಾಕಿಕೊಂಡು ಬರಲು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದವರು ಅನುಮತಿ ಕೊಡಲಿಲ್ಲ. ಹೀಗಾಗಿ ಹೆರಕಲ್ದಿಂದ ಅನಗವಾಡಿ ಸೇತುವೆವರೆಗೆ 11 ಕಿ.ಮೀ, ಆನದಿನ್ನಿಯಿಂದ ಗದ್ದನಕೇರಿ ಕ್ರಾಸ್‌ವರೆಗೆ 3 ಕಿ.ಮೀ ಪೂರ್ಣ ಪೈಪ್‌ಲೈನ್ ಅಳವಡಿಸುವ ಕಾಮಗಾರಿ ಪೂರ್ಣಗೊಳಿಸಿದ್ದರು. ಜತೆಗೆ ಹೆರಕಲ್ ಬಳಿ ಜಾಕವೆಲ್ ಕೂಡ ನಿರ್ಮಿಸಿ, ವಿದ್ಯುತ್ ಮೋಟಾರ್ ಅಳವಡಿಸಿದ್ದರು. ಆದರೆ, ಈ ಯೋಜನೆಯಡಿ ನೀರು ಎತ್ತಲು ಬೇಕಾದ 2750 ಕೆ.ವಿ ವಿದ್ಯುತ್ ಸಂಪರ್ಕ ಕಲ್ಪಿಸುವುದೇ ಬಿಟಿಡಿಎಗೆ ದೊಡ್ಡ ಸವಾಲಾಗಿ ಪರಿಣಮಿಸಿತ್ತು.
ನೀಲನಕ್ಷೆ ಬದಲು: 2013ರಿಂದ 18ರ ವರೆಗೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಪರವಾನಿಗಾಗಿ ಓಡಾಡಿದ ಬಿಟಿಡಿಎ, ಬಳಿಕ ಅನುಮತಿ ಸಿಗುವುದಿಲ್ಲ ಎಂಬುದು ಗೊತ್ತಾದ ಬಳಿಕ, ಅನಗವಾಡಿ ಸೇತುವೆ ಬಳಿ ಘಟಪ್ರಭಾ ನದಿ ಹಾಗೂ ಹಿನ್ನೀರ ಪ್ರದೇಶ ದಾಟಿಕೊಂಡು ಬರಲು ರೂ. 75 ಕೋಟಿ ವೆಚ್ಚದ ಪ್ರತ್ಯೇಕ ಸೇತುವೆ (ಪೈಪ್‌ಗ್ಳನ್ನು ಸೇತುವೆ ಮೇಲೆ ಹಾಕಿಕೊಂಡು ಬರಲು) ನಿರ್ಮಾಣದ ಯೋಜನೆ ರೂಪಿಸಿತು. 72 ಕೋಟಿ ವೆಚ್ಚದ ಕುಡಿಯುವ ನೀರಿನ ಯೋಜನೆಗೆ, 75 ಕೋಟಿ ವೆಚ್ಚದ ಪೈಪ್‌ಲೈನ್ ಸೇತುವೆ ಬೇಕಾ ಎಂದು, ಬಿಟಿಡಿಎನ ಕೆಲವು ಅಧಿಕಾರಿಗಳು ಇದಕ್ಕೆ ತಕರಾರು ತೆಗೆದರು. ಕೊನೆಗೂ ಆ ಪ್ರಸ್ತಾವನೆ, ಬಿಟಿಡಿಎ ಮೂಲಕ ಕೃಷ್ಣಾ ಭಾಗ್ಯ ಜಲ ನಿಗಮಕ್ಕೆ ಹೋಯಿತು. ಈವರೆಗೆ ಅದಕ್ಕೆ ಅನುಮೋದನೆ ಸಿಕ್ಕಿಲ್ಲ.
ಹೆರಕಲ್ ಕುಡಿಯುವ ನೀರು ಪೂರೈಕೆ ಯೋಜನೆಯ ಮೂಲ ನಕ್ಷೆಯಲ್ಲಿ ಅನಗವಾಡಿ ಸೇತುವೆ ಮೇಲಿಂದ ಪೈಪ್ ಹಾಕಿಕೊಂಡು ಬರುವುದಾಗಿತ್ತು. ಆದರೆ, ನ್ಯಾಶನಲ್ ಹೈವೈ ಪ್ರಾಧಿಕಾರ, ಅದಕ್ಕೆ ಅನುಮತಿ ಕೊಡಲಿಲ್ಲ. ಹೀಗಾಗಿ ಅನಗವಾಡಿ ಸೇತುವೆ ಬಳಿ, ಪ್ರತ್ಯೇಕ ಸೇತುವೆ ನಿರ್ಮಿಸುವ 75 ಕೋಟಿ ವೆಚ್ಚದ ಪ್ರಸ್ತಾವನೆ, ಸಲ್ಲಿಸಲಾಗಿದೆ. ಅದಕ್ಕೆ ಇನ್ನೂ ಅನುಮತಿ ಸಿಕ್ಕಿಲ್ಲ.•ಇದ್ದಲಗಿ, ಕಾರ್ಯ ನಿರ್ವಾಹಕ ಅಭಿಯಂತರ, ಬಿಟಿಡಿಎ